ಕರ್ನಾಟಕ

ಬಿಜೆಪಿಗೆ ರಾಜ್ಯ ಕಾಂಗ್ರೆಸಿನ 6 ಶಾಸಕರು?

Pinterest LinkedIn Tumblr


ಬೆಳಗಾವಿ : ಒಂದು ಕಡೆ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಆರಂಭವಾಗುತ್ತಿದ್ದಂತೆಯೇ ‘ಆಪರೇಷನ್‌ ಕಮಲ’ದ ಭೀತಿ ಮತ್ತೆ ಪಕ್ಷವನ್ನು ಕಾಡಿದೆ.

ಸಂಪುಟ ವಿಸ್ತರಣೆ ಗೊಂದಲದ ಜತೆಗೆ, ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಅಳಲು ಕೂಡ ಕಾಂಗ್ರೆಸ್‌ನಲ್ಲಿ ಆರಂಭವಾಗಿರುವುದು ಆಪರೇಷನ್‌ ಕಮಲಕ್ಕೆ ಇಂಬು ನೀಡಿದ್ದು, ಇಂತಹದೊಂದು ಪ್ರಯತ್ನ ತೆರೆಮರೆಯಲ್ಲಿ ಸಾಗಿದೆ ಎಂಬ ಗುಲ್ಲು ಹಬ್ಬಿದೆ. ಬಿಜೆಪಿಯ ಆಮಿಷಕ್ಕೆ ಒಳಗಾಗಿ ಆ ಪಕ್ಷದ ಸಂಜ್ಞೆಗಾಗಿ ಕಾದು ಕುಳಿತಿರುವ ಸುಮಾರು ಐದಾರು ಮಂದಿ ಶಾಸಕರು ಕಾಂಗ್ರೆಸ್‌ನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ, ಸರ್ಕಾರವನ್ನು ಅಸ್ಥಿರಗೊಳಿಸುವಷ್ಟುಸಂಖ್ಯೆ ದೊರೆಯದ ಕಾರಣಕ್ಕೆ ಈ ಶಾಸಕರು ಇನ್ನೂ ಕಾಂಗ್ರೆಸ್‌ನಲ್ಲೇ ಮುಂದುವರೆದಿದ್ದಾರೆ ಎನ್ನಲಾಗುತ್ತಿದೆ. ಈಗ ಕಾಂಗ್ರೆಸ್‌ನಲ್ಲಿ ಅತೃಪ್ತರ ಹಲವು ಗುಂಪುಗಳು ರೂಪುಗೊಂಡಿರುವುದು ಬಿಜೆಪಿಗೆ ಲಾಭದಾಯಕವಾಗಿದ್ದು, ಆಪರೇಷನ್‌ ಕಮಲ ನಡೆಸಲು ಹದವಾದ ಪರಿಸ್ಥಿತಿಯಿದೆ ಎಂದೇ ಭಾವಿಸಲಾಗುತ್ತಿದೆ. ಹೀಗಾಗಿ ಬಿಜೆಪಿಯ ಕೆಲ ನಾಯಕರು ತೆರೆ ಮರೆಯಲ್ಲಿ ಇನ್ನೂ ಇಂತಹ ಪ್ರಯತ್ನ ಮುಂದುವರೆಸಿದ್ದಾರೆ ಎನ್ನಲಾಗುತ್ತಿದೆ.

ಈ ಸುಳಿವು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ವರಿಷ್ಠರಿಗೂ ದೊರಕಿದೆ. ಹೀಗಾಗಿ ಅತೃಪ್ತ ಶಾಸಕರು ಬಿಜೆಪಿಯ ಆಮಿಷಗಳಿಗೆ ಬಲಿಯಾಗದಂತೆ ತಡೆಯಲು ಅವರಿಗೆ ಅಧಿಕಾರ ನೀಡುವ ಮೂಲಕ ಸಂತೈಸಬೇಕಾದ ಅನಿವಾರ್ಯತೆ ಮೂಡಿದ್ದು, ಅತೃಪ್ತ ಶಾಸಕರನ್ನು ಒಬ್ಬೊಬ್ಬರನ್ನಾಗಿ ಕರೆಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ ಎಂದು ಮೂಲಗಳು ಹೇಳಿವೆ.

Comments are closed.