ಕುಂದಾಪುರ: ಬಾರೀ ಸದ್ದು ಮಾಡುತ್ತಿರುವ ಕೆ.ಜಿ.ಎಫ್ ಚಿತ್ರ ಇದೇ ತಿಂಗಳ 21 ರಂದು ತೆರೆಕಾಣಲಿದೆ. ಕೆ.ಜಿ.ಎಫ್ ರಿಲೀಸ್ ಮುನ್ನ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಳಕ್ಕೆ ಭಾನುವಾರ ಭೇಟಿ ನೀಡಿ ಶ್ರೀ ದೇವಿ ದರುಶನ ಪಡೆದ ರಾಕಿಂಗ್ ಸ್ಟಾರ್ ಯಶ್ ವಿಶೇಷ ಪೂಜೆ ಸಲ್ಲಿಸಿದರು
ಹೆಲಿಕಾಪ್ಟರ್ ಮೂಲಕ ಬೈಂದೂರು ತಾಲೂಕು ಅರೆಶಿರೂರಿನ ಹೆಲಿಪ್ಯಾಡಿಗೆ ಆಗಮಿಸಿದ ಯಶ್ ಹಾಗೂ ಹೊಂಬಾಳೆ ಫಿಲ್ಮ್ಸ್ ನ ಚಿತ್ರತಂಡ ಕೊಲ್ಲೂರು ಕ್ಷೇತ್ರಕ್ಕೆ ಅಗಮಿಸಿ ಶ್ರೀ ಮೂಕಾಂಬಿಕಾ ದೇವಿ ದರುಶನ ಪಡೆದರು. ನಿರ್ಮಾಪಕ ವಿಜಯ್ ಕಿರಗಂದೂರ್ ಹಾಗೂ ಚಿತ್ರತಂಡ ಇದ್ದರು.
ಇದೇ ವೇಳೆ ದೇವಳದ ಆಡಳಿತ ಮಂಡಳಿಯವರು ನಟ ಯಶ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ಕೊಲ್ಲೂರು ದೇವಳದ ಅನ್ನದಾನಕ್ಕೆ ನಟ ಯಶ್ ಒಂದು ಲಕ್ಷ ರೂಪಾಯಿ ದೇಣಿಗೆಯನ್ನ ನೀಡಿದರು. ಜೊತೆಗಿದ್ದ ಹೊಂಬಾಳೆ ಸಂಸ್ಥೆ 1 ಲಕ್ಷದ 6 ಸಾವಿರ ರೂಪಾಯಿಯನ್ನ ಸೇವಾ ರೂಪದಲ್ಲಿ ನೀಡಿದರು.
ಮೊದಲ ಬಾರಿಗೆ ಕೊಲ್ಲೂರಿಗೆ ಆಗಮಿಸಿದ್ದ ರಾಜಾ ಹುಲಿ ಯಶ್ ನನ್ನ ನೋಡಲು ಅಭಿಮಾನಿಗಳು ಮುಗಿಬಿದ್ದರು. ರಜಾದಿನವಾಗಿದ್ದ ಇಂದು ಭಕ್ತರ ಸಂಖ್ಯೆ ಕೂಡ ಹೆಚ್ಚಾಗಿತ್ತು. ರಾಕಿಂಗ್ ಸ್ಟಾರ್ ಕೊಲ್ಲೂರು ದೇವಳದಲ್ಲಿ ಕಾಣುತ್ತಿದ್ದಂತೆ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದರು. ಇದರಿಂದಾಗಿ ಒಂದಷ್ಟು ಕಾಲ ನುಕ್ಕುನುಗ್ಗಲು ಕೂಡ ಉಂಟಾಯಿತು.
ದೇವಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್. ಹಾಲಪ್ಪ, ವ್ಯವಸ್ಥಾಪನ ಸಮಿತಿ ಸದಸ್ಯರಾದ ವಂಡಬಳ್ಳಿ ಜಯರಾಮ ಶೆಟ್ಟಿ, ರಮೇಶ್ ಗಾಣಿಗ, ಪ್ರಧಾನ ಅರ್ಚಕರು ಇದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.