ಭೋಪಾಲ್: ಹೊಸ ಜೀವನದ ಹೊಂಗನಸಿನೊಂದಿಗೆ ಆಕೆ ಪತಿ ಮನೆ ಬಾಗಿಲ ಹೊಸ್ತಿಲು ತುಳಿದಿದಿದ್ದಳು. ಆದರೆ ಈ ವಿವಾಹ ಬದುಕನ್ನೇ ಮುಗಿಸಬೇಕೆಂಬ ನಿರ್ಧಾರಕ್ಕೆ ತಳ್ಳುತ್ತದೆ ಎಂದು ನವ ವಿವಾಹಿತೆಗೆ ತಿಳಿಯಲೇ ಇಲ್ಲ. ಮದುವೆಯಾಗಿ ಬಂದ ಕೆಲ ದಿನಗಳಲ್ಲಿಯೇ ಆಕೆ ಮಸಣ ಸೇರಿದ್ದಳು. ಇದು 20 ವರ್ಷದ ತರುಣಿಯೊಬ್ಬಳ ಹೃದಯ ಕಲುಕುವ ಕಥೆ.
ಬಜಾರಿಯಾ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ನರಸಿಂಗಾಪುರದ ಯುವತಿ ಬಜಾರಿಯಾ ಮೂಲದ ಯುವಕನೊಂದಿಗೆ ಈ ವರ್ಷದ ಜೂನ್ ತಿಂಗಳಲ್ಲಿ ವಿವಾಹವಾಗಿದ್ದಳು. ಗಂಡನ ಮನೆಗೆ ಬಂದಾಗಿನಿಂದ ಆಕೆಯ ಮಾವ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದ. ಒಂದು ದಿನ ಆಕೆ ಮನೆಯಲ್ಲಿ ಒಬ್ಬಳೇ ಇದ್ದಾಗ ಆತ ಅತ್ಯಾಚಾರವನ್ನು ಎಸಗಿ ಬಿಟ್ಟ. ನಡೆದ ಸಂಗತಿಯನ್ನು ಆಕೆ ಪತಿ ಮತ್ತು ಅತ್ತೆ ಬಳಿ ಹೇಳಿಕೊಂಡಳು. ಆಕೆಯ ಪರ ವಹಿಸುವುದಿರಲಿ, ಅವರಿಬ್ಬರು ಸಹ ಅದನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ. ನನ್ನ ಬಳಿ ಬದುಕುವ ಮನಸ್ಸಿದ್ದರೆ ಎಲ್ಲವನ್ನು ಸಹಿಸಿಕೋ ಎಂದು ಪತಿ ಬಾಯಿ ಮುಚ್ಚಿಸಿದ್ದಾನೆ. ಅತ್ತೆ ಸಹ ಯಾರಿಗಾದರೂ ತಿಳಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕಿದ್ದಾಳೆ.
ನೊಂದ ಆಕೆ ತನ್ನ ತಾಯಿಗೆ ಕರೆ ಮಾಡಿ ಎಲ್ಲ ವಿಷಯ ತಿಳಿಸಿದ್ದಾಳೆ. ಅದನ್ನು ಕೇಳಿಸಿಕೊಂಡ ಪತಿ ಮೊಬೈಲ್ ಒಡೆದು ಹಾಕಿದ ಮತ್ತು ಆಕೆಗೆ ಹಿಂಸೆ ನೀಡಲು ಆರಂಭಿಸಿದ. ಮೊದಲೇ ನೊಂದಿದ್ದ ಆಕೆ ಇದರಿಂದ ಮತ್ತಷ್ಟು ಘಾಸಿಕೊಂಡು ತವರಿಗೆ ಹಿಂತಿರುಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಮೃತಳ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ನರಸಿಂಗಾಪುರ ಪೊಲೀಸರು ಪ್ರಮುಖ ಆರೋಪಿ ಮಾವ ಮತ್ತು ಪತಿ ಮತ್ತು ಅತ್ತೆಯನ್ನು ಬಂಧಿಸಿದ್ದಾರೆ. ಪ್ರಕರಣ ಬಜಾರಿಯಾ ಪೊಲೀಸ್ ಠಾಣೆಗೆ ವರ್ಗವಾಗಿದ್ದು ತನಿಖೆ ಮುಂದುವರಿದಿದೆ.
Comments are closed.