ಬೆಂಗಳೂರು: ಇತ್ತೀಚೆಗಿನ ಐದು ರಾಜ್ಯಗಳ ಚುನಾವಣೆ ಪೈಕಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಐತಿಹಾಸಿಕ ಗೆಲುವನ್ನು ದಾಖಲಿಸಿದೆ. ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಅನುಭವಿಸಿದ್ದು, ಪ್ರಧಾನಿ ಮೋದಿ ವಿರೋಧಿ ಬಣದಲ್ಲಿ ಭಾರೀ ವಿಶ್ವಾಸ ಮೂಡಿಸಿದೆ. ಹೀಗಾಗಿಯೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಡೆಯನ್ನು ಸೋಲಿಸಲು ಮುಂದಾಗಿರುವ ವಿಪಕ್ಷಗಳು ಒಗಟ್ಟು ಪ್ರದರ್ಶನಕ್ಕೆ ಮುಂದಾಗಿವೆ.
ಈ ಮಧ್ಯೆ ನಾಳೆ(ಸೋಮವಾರ) ಮಧ್ಯಪ್ರದೇಶ, ರಾಜಸ್ಥಾನದ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಈ ಸಮಾರಂಭಕ್ಕೆ ಬಿಜೆಪಿಯೇತರ ಪಕ್ಷಗಳ ನಾಯಕರು ತೆರಳಿದ್ದಾರೆ. ಈ ಬೆನ್ನಲ್ಲೇ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಮಹಾಮೈತ್ರಿಯ ಮತ್ತೊಂದು ವೇದಿಕೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಅಲ್ಲದೇ ಟ್ವೀಟ್ ಮೂಲಕ ಕಮಲ್ನಾಥ್, ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
ರಾಜಸ್ಥಾನ,ಮಧ್ಯಪ್ರದೇಶದಲ್ಲಿ ನಾಳೆ ಪ್ರಮಾಣವಚನ ಸ್ವೀಕರಿಸಲಿರುವ ಅಶೋಕ್ ಗೆಹ್ಲೋಟ್, ಕಮಲ್ ನಾಥ್,ಯುವ ನಾಯಕ ಸಚಿನ್ ಪೈಲಟ್ ಅವರಿಗೆ ನನ್ನ ಶುಭಾಶಯ. ಮುಖ್ಯವಾಗಿ ನಾಳೆ ನಡೆಯಲಿರುವ ಸಮಾರಂಭಗಳು ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ್ದು.ದೇಶದಲ್ಲಿ ನಮ್ಮನ್ನು ಬಿಟ್ಟರೆ ಮತ್ತೊಬ್ಬರಿಲ್ಲ ಎನ್ನುವವರಿಗೆ ಸ್ಪಷ್ಟ ಸಂದೇಶ. ಮಹಾಮೈತ್ರಿಯ ಮತ್ತೊಂದು ವೇದಿಕೆ.
ಚುನಾವಣೆಯ ಫಲಿತಾಂಶದ ನಂತರದಲ್ಲಿ ಕಾಂಗ್ರೆಸ್ ಹೈಕಮಾಂಡ್ಗೆ ಮೂರು ರಾಜ್ಯಗಳ ಮುಖ್ಯಮಂತ್ರಿ ಆಯ್ಕೆ ವಿಚಾರ ಕಗ್ಗಂಟಾಗಿ ಪರಿಣಮಿಸಿತ್ತು. ಇದೀಗ ಎಲ್ಲವೂ ಬಗೆಹರಿದು ನಿರೀಕ್ಷೆಯಂತೆಯೇ ಮುಖ್ಯಮಂತ್ರಿ ಅಭ್ಯರ್ಥಿಗಳ ಆಯ್ಕೆ ನಡೆದಿದೆ. ನಾಳೆ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಕಮಲ್ನಾಥ್, ರಾಜಸ್ಥಾನ ಮುಖ್ಯಮಂತ್ರಿಯಾಗಿ ಅಶೋಕ್ ಗೆಹ್ಲೋಟ್, ಉಪ ಮುಖ್ಯಮಂತ್ರಿಯಾಗಿ ಸಚಿನ್ ಪೈಲಟ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ಸಮಾರಂಭಕ್ಕೆ ಮೋದಿ ವಿರೋಧಿ ಪಕ್ಷಗಳ ನಾಯಕರು ಪಾಲ್ಗೊಳ್ಳಲಿದ್ದಾರೆ. ಈ ಮುಖೇನ ಲೋಕಭಾ ಚುನಾವಣೆಗೆ ಒಗ್ಗಟ್ಟು ಪ್ರದರ್ಶಿಸಿಲಿದ್ದಾರೆ ಎನ್ನುತ್ತಿವೆ ಮೂಲಗಳು.
ಈ ಹಿಂದೆಯೂ 2019ರ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ವಿರುದ್ಧ ತೃತೀಯ ರಂಗ ರಚನೆಗೆ ವೇದಿಕೆ ಸಿದ್ಧವಾಗಿತ್ತು. ಈಗಾಗಲೇ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಯಾಗಿ ಎಚ್.ಡಿ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿದ ವೇದಿಕೆ ತೃತೀಯ ರಂಗದ ನಾಯಕರ ಶಕ್ತಿಪ್ರದರ್ಶನಕ್ಕೆ ಸಾಕ್ಷಿಯಾಗಿತ್ತು. ಬಿಜೆಪಿಗೆ ಪಕ್ಷಕ್ಕೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಸೇರಿದಂತೆ ಪ್ರಾದೇಶಿಕ ಪಕ್ಷಗಳು ರಣತಂತ್ರ ಹೆಣೆದಿದ್ದವು.
ತೃತೀಯ ರಂಗವನ್ನು ಬಲವರ್ಧನಗೊಳಿಸಲು ಸ್ವತಃ ಜೆಡಿಎಸ್ ವರಿಷ್ಠ ದೇವೇಗೌಡ, ಪಶ್ಚಿಮ ಬಂಗಾಳದ ಸಿಎಂ,ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳ ನಾಯಕರು ಮುಂದಾಗಿದ್ದರು. ಎಚ್ಡಿಕೆ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದ ಅರವಿಂದ್ ಕೇಜ್ರಿವಾಲ್, ಬಿಎಸ್ಪಿ ನಾಯಕಿ ಮಾಯಾವತಿ, ಮಮತಾ ಬ್ಯಾನರ್ಜಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಬಿಹಾರ್ ಆರ್ಜೆಡಿ ನಾಯಕ ತೇಜಸ್ವಿ ಯಾದವ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಚಂದ್ರಶೇಖರ ರಾವ್, ನಟ-ರಾಜಕಾರಣಿ ಕಮಲ್ ಹಾಸನ್, ಡಿಎಂಕೆ ನಾಯಕ ಎಂ.ಕೆ ಸ್ಟಾಲಿನ್ ತೃತೀಯ ರಂಗದ ಭಾಗವಾಗಲಿದ್ದಾರೆ ಎನ್ನಲಾಗಿತ್ತು.
ಇನ್ನು ಮೊದಲಿಗೆ ತೃತೀಯ ರಂಗ ರಚನೆ ಸಂಬಂಧ ಕೆಸಿಆರ್ ಅವರ ಕರೆ ಹೊರಬಿದ್ದ ತಕ್ಷಣವೇ ಮಮತಾ ಬ್ಯಾನರ್ಜಿಯವರು ದನಿಗೂಡಿಸಿದರು. ಚಂದ್ರಶೇಖರ್ ಅವರ ಮಾತಿಗೆ ಓಗೊಟ್ಟ ಮಮತಾ ಬ್ಯಾನರ್ಜಿಯವರು, ಕಾಂಗ್ರೆಸ್ ಹೊರತು ಪಡಿಸಿ ತೃತೀಯ ರಂಗವೊಂದನ್ನು ಸ್ಥಾಪಿಸಬೇಕೆಂದು ಪ್ರಸ್ತಾಪಿಸಿದರು. ಇದಕ್ಕೆ ಅಸಾದಿನ್ ಓವೈಸಿ ಕೂಡ ಬೆಂಬಲ ಸೂಚಿಸಿದರು. ಇನ್ನು ಉತ್ತರಪ್ರದೇಶದ ಬಿಎಸ್ಪಿ ನಾಯಕಿ ಮಾಯಾವತಿ ಮತ್ತು ಸಮಾಜವಾದಿ ಪಕ್ಷದ ಅಖಿಲೇಶ್ ಸಹ ವೇದಿಕೆ ರಚನೆಗೆ ಒಲವು ತೋರಿಸಿದರು.
ಇದೀಗ ಜೆಡಿಎಸ್ ವರಿಷ್ಠ ದೇವೇಗೌಡರು, ಡಿ.ಎಂ.ಕೆ.ಯ ಕರುಣಾ ನಿಧಿ, ನಟ ಕಮಲ್ ಹಾಸನ್ ನೂತನ ಪಕ್ಷ, ಸಿಪಿಎಂ ಸೀತರಾಮ್ಯೆಚೂರಿ, ಎಡಪಕ್ಷಗಳು ಸೇರಿದಂತೆ ಎಲ್ಲರೂ ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ವಿರುದ್ಧ ಸಮರ ಸಾರುತ್ತಾರೆ ಎನ್ನುವುದು ನಿಶ್ಚಿತವಾಗಿದೆ. ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ಸನ್ನು ಒಳಗೊಂಡತೆಯೇ ಮಹಾಮೈತ್ರಿಗೆ ಮುಂದಾಗಿದ್ದಾರೆ. ಈ ಕಾರಣದಿಂದಲೇ ಸಿಎಂ ಎಚ್ಡಿಕೆ ಬಳಿಕ ನಾಳೆ ಮಧ್ಯಪ್ರದೇಶ, ರಾಜಸ್ಥಾನದಲ್ಲಿ ನಡೆಯುವ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಮಾಣ ವಚನ ಕಾರ್ಯಕ್ರಮ ತೃತೀಯ ರಂಗಕ್ಕೆ ಸಾಕ್ಷಿಯಾಗಲಿದೆ ಎನ್ನುತ್ತಿವೆ ಮೂಲಗಳು.
Comments are closed.