ಹೊಸದಿಲ್ಲಿ: ಶೀಘ್ರದಲ್ಲೇ ಭಾರತೀಯ ವಿಮಾನ ಪ್ರಯಾಣಿಕರಿಗೆ ವಿಮಾನದೊಳಗೆ ವೈ-ಫೈ ಸೇವೆ ಲಭ್ಯವಾಗಲಿದೆ. ಈ ಕುರಿತಾದ ನಿಯಮಾವಳಿಗಳನ್ನು ಕೇಂದ್ರ ಸರ್ಕಾರ ಅಂತಿಗೊಳಿಸಿದ್ದು, ಸೇವೆ ಒದಗಿಸಲು ಇಚ್ಛಿಸುವ ಕಂಪೆನಿಗಳು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.
ಡಿಜಿಟಲ್ ಯುಗದಲ್ಲಿ ವಿಮಾನದೊಳಗೆ ವೈಫೈ ಸೇವೆ ನೀಡಲು ಈ ಹಿಂದೆ ಟೆಲಿಕಾಂ ಇಲಾಖೆ ಅನುಮತಿ ನೀಡಿರಲಿಲ್ಲ. ಇದೀಗ ಏರ್ಟೆಲ್, ಜಿಯೋ ಸೇರಿದಂತೆ ಬಹುತೇಕ ಎಲ್ಲ ಟೆಲಿಕಾಂ ಕಂಪೆನಿಗಳು ವಿಮಾನ ಪ್ರಯಾಣಿಕರಿಗೂ ಇಂಟರ್ನೆಟ್ ಸೌಲಭ್ಯ ಒದಗಿಸಲು ಆಸಕ್ತಿ ವಹಿಸಿದೆ. ಈ ಕಾರಣಕ್ಕಾಗಿ ಟೆಲಿಕಾಂ ಇಲಾಖೆಯ ಕೆಲ ನಿಯಮಗಳಲ್ಲಿ ಬದಲಾವಣೆ ತರಲಾಗಿದ್ದು, ಆಸಕ್ತ ವೈ-ಫೈ ಸೇವೆ ಪೂರೈಕೆದಾರರು ಟೆಲಿಕಾಂ ಇಲಾಖೆಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ.
ಆದರೆ ಭಾರತೀಯ ವಿಮಾನಯಾನ ಸಂಸ್ಥೆಗಳಲ್ಲಿ ವೈ-ಫೈ ಸೇವೆ ಒದಗಿಸಲು ಸೂಕ್ತ ಸೌಲಭ್ಯದ ವ್ಯವಸ್ಥೆ ಇನ್ನಷ್ಟೇ ಕಲ್ಪಿಸಬೇಕಾಗಿದೆ. ಸದ್ಯ ದೇಶದ ಸ್ಪೈಸ್ ಜೆಟ್ ಬೊಯಿಂಗ್ 737 ವಿಮಾನದಲ್ಲಿ ವೈ-ಫೈ ಸೇವೆ ನೀಡುವಂತಹ ಸಕಲ ಸೌಲಭ್ಯವಿದ್ದು, ಹೀಗಾಗಿ ಮುಂದಿನ ದಿನಗಳಲ್ಲಿ ಹೊಸ ವಿಮಾನಗಳಲ್ಲಿ ಈ ಸೇವೆ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಲುಫ್ತಾನ್ಸಾ, ಸಿಂಗಪೂರ್ ಏರ್ಲೈನ್ಸ್ ಮತ್ತು ಕತರ್ ಏರ್ಲೈನ್ಸ್ನಲ್ಲಿ ಈಗಾಗಲೇ ವೈ-ಫೈ ಸೇವೆಯನ್ನು ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ಶೀಘ್ರದಲ್ಲೇ ದೇಶದ ಎಲ್ಲ ಪ್ರಮುಖ ವಿಮಾನ ಸಂಸ್ಥೆಗಳಲ್ಲಿ ವೈ-ಫೈ ಸೇವೆ ನೀಡಲು ಟೆಲಿಕಾಂ ಕಂಪೆನಿಗಳು ಆಸಕ್ತಿವಹಿಸಿದೆ.
Comments are closed.