ಕೊಚ್ಚಿ: ದಕ್ಷಿಣ ಭಾರತದ ವಿವಾದಿತ ನಟಿ ಲೀನಾ ಮರಿಯಾ ಪೌಲ್ ಒಡೆತನದ ಬ್ಯೂಟಿ ಪಾರ್ಲರ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್ ದಾಳಿ ವೇಳೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಕೊಚ್ಚಿಯ ಪನಮ್ಪಿಲ್ಲಿ ನಗರದಲ್ಲಿ ಲೀನಾ ಬ್ಯೂಟಿ ಪಾರ್ಲರ್ ಹೊಂದಿದ್ದಾರೆ. ಶನಿವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ರಸ್ತೆಮೇಲೆ ನಿಂತು ಮನ ಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ನಂತರ ಅವರು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದುಷ್ಕರ್ಮಿಗಳು ಪಾರ್ಲರ್ ಬಳಿ ಮುಂಬೈ ಭೂಗತ ಲೋಕದ ಪಾತಕಿ ‘ರವಿ ಪೂಜಾರಿ’ ಹೆಸರು ಬರೆದಿರುವ ಪೇಪರ್ ಎಸೆದು ಹೋಗಿರುವುದು ಹಲವು ಅನುಮಾಗಳನ್ನು ಹುಟ್ಟುಹಾಕಿದೆ.
ದಾಳಿ ವೇಳೆ ಪಾರ್ಲರ್ ಒಳಗೆ ಸಾಕಷ್ಟು ಜನ ಇದ್ದರು. ಆದರೆ ಯಾರಿಗೂ ಪ್ರಾಣ ಹಾನಿ ಉಂಟಾಗಿಲ್ಲ. ಘಟನೆ ನಡೆಯುವ ಸಂದರ್ಭದಲ್ಲಿ ಲೀನಾ ತಿರುವನಂತರಪುರಂನಲ್ಲಿದ್ದರು ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪಾರ್ಲರ್ ಬಳಿ ಇರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಕ್ಷಿಸುತ್ತಿದ್ದಾರೆ. ಲೀನಾ ‘ಮದ್ರಾಸ್ ಕೆಫೆ’ ಸೇರಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಇವರು, ವಿವಾದದ ಮೂಲಕ ಸುದ್ದಿಯಾಗುತ್ತಿದ್ದಾರೆ. ಹಣ ವಂಚನೆ ಪ್ರಕರಣವೊಂದರಲ್ಲಿ ಲೀನಾ ಆರೋಪಿ.
Comments are closed.