ಉಡುಪಿ: ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಲ್ಲಿ ಅಡಗಿರುವ ನವೀನ ರೀತಿಯ ವೈಜ್ಞಾನಿಕ ಪ್ರತಿಭೆಯನ್ನು, ಸೈಂಟ್ ಸಿಸಿಲಿ ಸಮೂಹ ಸಂಸ್ಥೆಯಲ್ಲಿ, ರಾಜ್ಯ ಶಿಕ್ಷಣ ಸಂಶೋದನೆ ಮತ್ತು ತರಬೇತಿ ಇಲಾಖೆ ಬೆಂಗಳೂರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಉಡುಪಿ ವತಿಯಿಂದ ಆಯೋಜಿಸಿದ್ದ ಇನ್ಸ್ಪೈರ್ ಅವಾರ್ಡ್ ಕಾರ್ಯಕ್ರಮ ಅನಾವರಣಗೊಳಿಸಿತು.
ಕಲುಷಿತ ವಾತಾವರಣದಿಂದ ಶುದ್ದ ಗಾಳಿ ಪಡೆಯುವ ಕುರಿತು ಸಂಶೋಧಿಸಿರುವ ಯಂತ್ರ, ವಿದ್ಯಾರ್ಥಿ ಸುಮುಖ್ ತಯಾರಿಸಿದ ಸಮುದ್ರದಲ್ಲಿ ಬೆರೆಕೆಯಾಗುವ ತೈಲವನ್ನು ಶುದ್ದೀಕರಿಸುವ ಮಾದರಿ, ಸಂಪತ್ ತಯಾರಿಸಿರುವ ಅಕ್ವಾಪೋನಿಕ್ಸ್ ಮಾದರಿಯಲ್ಲಿ ಮೀನು, ತರಕಾರಿ ಹಾಗೂ ಪಶು ಸಾಕಾಣಿಕೆಯನ್ನು ಒಟ್ಟಾಗಿ ಸೇರಿಸಿ ಮಾಡುವ ಕೃಷಿ ಪದ್ದತಿ, ವಿದ್ಯಾರ್ಥಿನಿ ಸನಿಹ ಸಿದ್ದಪಡಿಸಿರುವ ರಸ್ತೆಯಲ್ಲಿನ ಟ್ರಾಫಿಕ್ನಿಂದ ವಿದ್ಯುತ್ ತಯಾರಿಕೆ ಹಾಗೂ ಕಾವಲು ರಹಿತ ರೈಲ್ವೆ ಕ್ರಾಸಿಂಗ್ ನಲ್ಲಿ ಅಪಘಾತ ತಡೆಯುವ ಮಾದರಿ, ಸಂಜನಾ ಆಚಾರ್ಯ ತಯಾರಿಕೆಯ ಜೈಂಟ್ ವೀಲ್ ಮಾದರಿಯಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಜಿತೇಶ್ ಸಿದ್ದಪಡಿಸಿರುವ ಕೊಳಚೆ ನೀರನ್ನು ನೈಸರ್ಗಿಕ ವಿಧಾನದಲ್ಲಿ ಶುದ್ದೀಕರಿಸುವ ಮಾದರಿ, ವಿನ್ಯಾಸ್ ಶೆಟ್ಟಿ ಸಿದ್ದಪಡಿಸಿರುವ ಸೈಕಲ್ ನಿಂದ ವಿದ್ಯುತ್ ಉತ್ಪಾದನೆ ಮತ್ತು ಅದೇ ವಿದ್ಯುತ್ನಿಂದ ಏರು ಪ್ರದೇಶದಲ್ಲಿ ಸ್ವಯಂ ಸೈಕಲ್ ಚಾಲನೆ ಹಾಗೂ ಸೋಲಾರ್ ವ್ಯವಸ್ಥೆಯಿಂದ ಚಲಿಸುವ ಸೈಕಲ್, ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸಲು ತಯಾರಿಸುವ ಮಾದರಿಯಲ್ಲಿ ಕಾಡು ಪ್ರಾಣಿಗಳು ಬೇಲಿ ಸ್ಪರ್ಶಿಸಿದ ಕೂಡಲೇ ಸೈರನ್ ಮೊಳಗಿ ಕಾಡು ಪ್ರಾಣಿ ಹೆದರಿ ಓಡಿ ಹೋಗಲು ಮತ್ತು ರೈತರಿಗೆ ಎಚ್ಚರಿಕೆ ನೀಡುವ ವ್ಯವಸ್ಥೆ ಇದು ಕಡಿಮೆ ವಿದ್ಯುತ್ ಹಾಗೂ ಸೋಲಾರ್ ವ್ಯವಸ್ಥೆಯಿಂದ ಕಾರ್ಯ ನಿರ್ವಹಿಸಲಿದೆ, ಆದರ್ಶ ಶೆಟ್ಟಿ ಸಿದ್ದಪಡಿಸಿರುವ ಟ್ರಾಷ್ ಕ್ಲೀನರ್ ಸಮುದ್ರದಲ್ಲಿ ತೇಲುವ ಪ್ಲಾಸ್ಟಿಕ್ ಮತ್ತು ಇತರೆ ತ್ಯಾಜ್ಯ ತೆಗೆಯಲಿದೆ, ಧನುಷ್ ಪೂಜಾರಿ ಸಿದ್ದಪಡಿಸಿರುವ ಮನೆ ಮೇಲೆ ಬೀಳುವ ನೀರಿನಿಂದ ವಿದ್ಯುತ್ ತಯಾರಿಕೆ ಮಾದರಿ, ಪ್ಲಾಸ್ಟಿಕ್ ಸುಡುವ ಓವನ್, ಸೌರಶಕ್ತಿ ಚಾಲಿತ ರೈಲು, ಕತ್ತಲಾದರೆ ಸ್ವಯಂ ಚಾಲಿತವಾಗಿ ಬೆಳಗುವ ಸೋಲಾರ್ ದಾರಿದೀಪ, ಕಾಯಿನ್ ಬಾಕ್ಸ್ ರೀತಿಯಲ್ಲಿ ಹಣ ಹಾಕಿದರೆ ಹಾಲು ಬರುವ ಯಂತ್ರ, ಸ್ಮಾರ್ಟ್ ಸಿಟಿ ಯೋಜನೆ, ಭೂ ಕಂಪನ ಮುನ್ಸೂಚನೆ ವ್ಯವಸ್ಥೆ ಮುಂತಾದ ವಿನೂತನ ಹಲವು ರೀತಿಯ ಮಾದರಿಗಳನ್ನು ವಿದ್ಯಾರ್ಥಿಗಳು ಸಿದ್ದಪಡಿಸಿದ್ದಾರೆ.
ಇನ್ಸ್ಪೈರ್ ಅವಾರ್ಡ್ ಯೋಜನೆಗಾಗಿ ಮಾದರಿಗಳನ್ನು ಸಿದ್ದಪಡಿಸಲು ಜಿಲ್ಲೆಯ 1000 ಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಯೋಜನೆಯ ವಿವರಗಳನ್ನು ಆನ್ ಲೈನ್ ಮೂಲಕ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಸಲ್ಲಿಸಿದ್ದು, ಅದರಲ್ಲಿ ಆಯ್ಕೆಯಾದ 225 ವಿದ್ಯಾರ್ಥಿಗಳ ಯೋಜನೆಗೆ ಕೇಂದ್ರ ಸರ್ಕಾರ ರೂ.10000 ಗಳನ್ನು ಬಿಡುಗಡೆಗೊಳಿಸಿದ್ದು, ಈ ಹಣದಿಂದ ವಿದ್ಯಾರ್ಥಿಗಳು ಮಾದರಿಗಳನ್ನು ಸಿದ್ದಪಡಿಸಿದ್ದು, ಜಿಲ್ಲೆಯಲ್ಲಿ ಶೇ.10 ಮಾದರಿಗಳನ್ನು ಆಯ್ಕೆ ಮಾಡಿ ರಾಜ್ಯಮಟ್ಟದ ಸ್ಪರ್ದೆಗೆ ಕಳುಹಿಸಲಾಗುವುದು, ರಾಜ್ಯಮಟ್ಟದ ಸ್ಪರ್ದೆಯಲ್ಲಿ ಸಹ ಶೇ.10 ಆಯ್ಕೆ ಮಾಡಿ ರಾಷ್ಟ್ರಮಟ್ಟದ ಸ್ಪರ್ದೆಗೆ ಕಳುಹಿಸಲಾಗುವುದು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲೆ ಭಾಗ್ಯಲಕ್ಷ್ಮಿ ತಿಳಿಸಿದರು.
ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಉಪಾಧ್ಯಕ್ಷ ರಾಜೇಂದ್ರ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆ ವಹಿಸಿದ್ದರು.
ಸೈಂಟ್ ಸಿಸಿಲಿ ವಿದ್ಯಾಸಂಸ್ಥೆಯ ಜಂಟಿ ಕಾರ್ಯದರ್ಶಿ ಸಿಸ್ಟರ್ ಮೇಝಿ, ಮುಖ್ಯೋಪಧ್ಯಾಯನಿ ಪ್ರೀತಿ ಕ್ರಾಸ್ತಾ, ಉಡುಪಿ ಬಿಇಓ ಉಮಾ, ಬ್ರಹ್ಮಾವರ ಬಿಇಓ ಆನಂದ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಪ್ರಕಾಶ್ ಉಪಸ್ಥಿತರಿದ್ದರು.ಡಯಟ್ನ ಉಪ ಪ್ರಾಂಶುಪಾಲ ಚಂದ್ರಶೇಖರ್ ವಂದಿಸಿದರು, ಚಂದ್ರ ನಾಯಕ್ ನಿರೂಪಿಸಿದರು.
Comments are closed.