ರಾಷ್ಟ್ರೀಯ

ಸ್ವೀಕೃತ ದತ್ತಾಂಶ, ಕಂಪ್ಯೂಟರ್​ನಲ್ಲಿ ಈಗಾಗಲೇ ಸ್ಟೋರ್​ ಆಗಿರುವ ದತ್ತಾಂಶ ವಶಪಡಿಸಿಕೊಳ್ಳುವ ಅಧಿಕಾರ ಈ 10 ಸಂಸ್ಥೆಗಳು

Pinterest LinkedIn Tumblr


ನವದೆಹಲಿ: ಯಾವುದೇ ಕಂಪ್ಯೂಟರ್​ಗಳ ಮಾಹಿತಿಯನ್ನು ಪಡೆಯುವ ಮತ್ತು ತಡೆಹಿಡಿಯುವ ಅಧಿಕಾರವನ್ನು 10 ತನಿಖಾ ಸಂಸ್ಥೆಗಳಿಗೆ ನೀಡಲಾಗಿದೆ. ಈ ಸಂಬಂಧ ಗುರುವಾರ ಕೇಂದ್ರ ಗೃಹ ಇಲಾಖೆ ಹೊಸ ಆದೇಶ ಹೊರಡಿಸಿದೆ.

ಯಾವ ಸಂಸ್ಥೆಗಳಿಗೆ ಅಧಿಕಾರ

ಕೇಂದ್ರ ಗುಪ್ತಚರ ಸಂಸ್ಥೆ (ಸಿಬಿಐ), ಜಾರಿ ನಿರ್ದೇಶನಾಲಯ(ಇಡಿ), ನೇರ ತೆರಿಗೆಯ ಕೇಂದ್ರ ಮಂಡಳಿ, ಮಾದಕ ವಸ್ತು ನಿಯಂತ್ರಣ ಸಂಸ್ಥೆ, ಕೇಂದ್ರ ತನಿಖಾ ಸಂಸ್ಥೆ,(ಸಿಬಿಐ) ರಾಷ್ಟ್ರೀಯ ತನಿಖಾ ಸಂಸ್ಥೆ, (ಎನ್​​ಐಎ) ಕಂದಾಯ ಗುಪ್ತಚರ ನಿರ್ದೇಶನಾಲಯ, ಕ್ಯಾಬಿನೆಟ್​ ಸಚಿವಾಲಯ, ದೆಹಲಿ ಪೊಲೀಸ್​ ಕಮೀಷನರ್​, ಸಾಂಕೇತಿಕ ಗುಪ್ತಚರ ನಿರ್ದೇಶನಾಲಯ. (ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಮತ್ತು ಅಸ್ಸಾಂನಲ್ಲಿ ಮಾತ್ರ) ಸಂಸ್ಥೆಗಳಿಗೆ ಈ ಅಧಿಕಾರ ನೀಡಲಾಗಿದೆ.

ಇದೇ ಮೊದಲ ಬಾರಿಗೆ ದತ್ತಾಂಶವನ್ನು ಸ್ಕ್ಯಾನಿಂಗ್​ ಮಾಡುವ ಅಧಿಕಾರವನ್ನು ವಿವಿಧ ಸಂಸ್ಥೆಗಳಿಗೆ ನೀಡಲಾಗಿದೆ. ಈ ಮೊದಲು ಕೇವಲ ಚಲನಾ ದತ್ತಾಂಶವನ್ನಷ್ಟೇ ತಡೆಹಿಡಿಯಬಹುದಿತ್ತು. ಆದರೆ ಈಗ ಸ್ವೀಕೃತವಾದ ದತ್ತಾಂಶ, ಕಂಪ್ಯೂಟರ್​ನಲ್ಲಿ ಈಗಾಗಲೇ ಸ್ಟೋರ್​ ಆಗಿರುವ ಮತ್ತು ಜನರೇಟ್​ ಆಗಿರುವ ದತ್ತಾಂಶವನ್ನು ವಶಪಡಿಸಿಕೊಳ್ಳುವ ಅಧಿಕಾರವನ್ನು ಈ 10 ಸಂಸ್ಥೆಗಳು ಪಡೆದಿವೆ.

ಕರೆ ಮತ್ತು ಇ-ಮೇಲ್​ ಮಾತ್ರವಲ್ಲದೇ, ಕಂಪ್ಯೂಟರ್​ನಲ್ಲಿರುವ ಯಾವುದೇ ಮಾಹಿತಿಯನ್ನು ತಡೆಹಿಡಿಯಬಹುದಾಗಿದೆ. ಅಷ್ಟೇ ಅಲ್ಲದೇ ಈ ಸಂಸ್ಥೆಗಳು ಡಿವೈಸ್​ಗಳನ್ನು ವಶಪಡಿಸಿಕೊಳ್ಳುವ ಅಧಿಕಾರವನ್ನು ಹೊಂದಿವೆ.

ಮೊದಲು ಗುಪ್ತಚರ ಸಂಸ್ಥೆಗೆ ವಶಪಡಿಸಿಕೊಳ್ಳುವ ಅಧಿಕಾರ ಇರಲಿಲ್ಲ. ಕೇವಲ ರಾಜ್ಯ ಪೊಲೀಸರಿಗೆ ಸಹಕರಿಸುತ್ತಿದ್ದರು. ಆದರೆ ಈಗ ಹೊಸ ಆದೇಶ ಜಾರಿಗೆ ಬಂದ ಮೇಲೆ ಬದಲಾವಣೆಯಾಗಿದೆ. ಈ ಹೊಸ ಆದೇಶದ ಪ್ರಕಾರ, ಚಂದಾದಾರರು/ ಸೇವೆ ಒದಗಿಸುವವರು/ ಕಂಪ್ಯೂಟರ್​ನ ಉಸ್ತುವಾರಿ ಹೊಂದಿರುವ ಯಾವುದೇ ವ್ಯಕ್ತಿ ಸಂಸ್ಥೆಗಳಿಗೆ ಎಲ್ಲಾ ಸೌಲಭ್ಯಗಳನ್ನು, ತಾಂತ್ರಿಕ ನೆರವನ್ನು ವಿಸ್ತರಿಸಬೇಕು. ಇಲ್ಲವಾದಲ್ಲಿ 7 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಗೃಹ ಇಲಾಖೆಯು ಮಾಹಿತಿ ತಂತ್ರಜ್ಞಾನ ಕಾಯ್ದೆಯ 69(1) ರ ಅಡಿಯಲ್ಲಿ ಮಾಹಿತಿಯನ್ನು ತಡೆಹಿಡಿಯುವ ಅಧಿಕಾರವನ್ನು ಸಂಸ್ಥೆಗಳಿಗೆ ನೀಡಿದೆ. 2000 ನೇ ಇಸವಿಯಲ್ಲಿ ಜಾರಿಗೆ ಬಂದ ಈ ಕಾಯ್ದೆಯು ಕೇಂದ್ರ ಸರ್ಕಾರವು ಯಾವುದೇ ಸಂಸ್ಥೆಗೆ ನಿರ್ದೇಶನ ನೀಡಬಲ್ಲದು ಎಂದು ಹೇಳುತ್ತದೆ.

“ಭಾರತದ ಸಾರ್ವಭೌಮತ್ವ ಅಥವಾ ಸಮಗ್ರತೆ, ಭಾರತದ ರಕ್ಷಣೆ, ದೇಶದ ಭದ್ರತೆ, ವಿದೇಶಗಳೊಂದಿಗಿನ ಸ್ನೇಹ ಸಂಬಂಧಗಳು ಅಥವಾ ಸಾರ್ವಜನಿಕ ಆದೇಶ ಅಥವಾ ಯಾವುದೇ ಅಪರಾಧದ ತನಿಖೆಗೆ ಸಂಬಂಧಿಸಿದ ಪ್ರಚೋದನೆಯನ್ನು ತಡೆಯಲು” ಈ ಕಾಯ್ದೆಯನ್ನು ಜಾರಿಗೆ ತರಲಾಯಿತು.

ಪ್ರಸ್ತುತ ಆದೇಶವು ಕಂಪ್ಯೂಟರ್​ಗಳ ಮಾಹಿತಿಯನ್ನು ತಡೆಹಿಡಿಯುವುದಾಗಿದೆ. ಈ ಮೊದಲು ಅಧಿಕೃತ ಸಂಸ್ಥೆಗಳು ಗೃಹ ಇಲಾಖೆಯ ಅನುಮತಿ ಪಡೆದ ನಂತರ ಪೋನ್​ ಕಾಲ್​ ಟ್ಯಾಪ್​ ಮಾಡಬೇಕಿತ್ತು. ಈ ಆದೇಶವನ್ನು 2011 ರಲ್ಲಿ ನವೀಕರಿಸಲಾಯಿತು.

Comments are closed.