ಹೊಸದಿಲ್ಲಿ : ಉತ್ತರ ಪ್ರದೇಶದ ಸಹರಣಪುರ ಮತ್ತು ಕುಶಿನಗರ ಜಿಲ್ಲೆ ಮತ್ತು ಉತ್ತರಾಖಂಡದ ರೂರ್ಕಿಯಲ್ಲಿ ಇಂದು ಶುಕ್ರವಾರ ವಿಷ ಮದ್ಯ ಸೇವನೆಯಿಂದ ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶದ ಸಹರಣಪುರ ಮತ್ತು ಕುಶಿನಗರ ಜಿಲ್ಲೆಗಳಲ್ಲಿ ವಿಷ ಮದ್ಯ ಸೇವಿಸಿ ಕನಿಷ್ಠ 16 ಮಂದಿ ಮೃತಪಟ್ಟಿದ್ದಾರೆ.
ಕುಶಿನಗರ ಜಿಲ್ಲೆಯಲ್ಲಿ ವಿಷ ಮದ್ಯ ಸೇವಿಸಿ ಎಂಟು ಸಾವು ಸಂಭವಿಸಿರುವುದನ್ನು ಕುಶಿನಗರ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನಿಲ್ ಕುಮಾರ್ ತಿಳಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿ ಕನಿಷ್ಠ 9 ಮಂದಿಯನ್ನು ಅಮಾನತು ಪಡಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಕುಮಾರ್ ತಿಳಿಸಿದ್ದಾರೆ.
ಉತ್ತರಾಖಂಡದ ರೂರ್ಕಿಯಲ್ಲಿ ಇಂದು ಶುಕ್ರವಾರ ವಿಷ ಮದ್ಯ ಸೇವಿಸಿ 14 ಮಂದಿ ಮೃತಪಟ್ಟಿದ್ದಾರೆ. ಒಟ್ಟು 13 ಮಂದಿ ಅಬಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಹರಿದ್ವಾರ ಪೊಲೀಸ್ ಸುಪರಿಂಟೆಂಡೆಂಟ್, ಸಾವಿನ ಸಂಖ್ಯೆ 12ರಿಂದ 14ಕ್ಕೆ ಏರಿರುವುದನ್ನು ದೃಢಪಡಿಸಿದ್ದಾರೆ.
ವಿಷ ಮದ್ಯ ಸೇವಿಸಿ ಅಸ್ವಸ್ಥರಾಗಿರುವವರಿಗೆ ಕೂಡಲೇ ವೈದ್ಯಕೀಯ ನೆರವು ನೀಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಮತ್ತು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ 50,000 ರೂ. ಪರಿಹಾರವನ್ನು ಅವರು ಪ್ರಕಟಿಸಿದ್ದಾರೆ.
ವಿಷ ಮದ್ಯ ಪ್ರಕರಣಕ್ಕೆ ಕಾರಣವಾದರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳುವಂತೆ ಸಿಎಂ ಆದಿತ್ಯನಾಥ್ ಅವರು ಅಬಕಾರಿ ಮುಖ್ಯ ಕಾರ್ಯದರ್ಶಿ ಮತ್ತು ಉ.ಪ್ರ. ಡಿಜಿಪಿ ಅವರಿಗೆ ಆದೇಶ ನೀಡಿದ್ದಾರೆ.
Comments are closed.