ಕರ್ನಾಟಕ

ಸಿಎಲ್​ಪಿ ಸಭೆಗೆ 10 ಶಾಸಕರು ಗೈರು; ಕಾರಣ ನೀಡಿ ಸಿದ್ದರಾಮಯ್ಯಗೆ ಪತ್ರ ಬರೆದ ಅತೃಪ್ತರು

Pinterest LinkedIn Tumblr


ಬೆಂಗಳೂರು: ಪಕ್ಷದೊಂದಿಗೆ ಅಂತರ ಕಾಯ್ದುಗೊಂಡಿರುವ ಕಾಂಗ್ರೆಸ್​ ಶಾಸಕರಿಗೆ ಬಜೆಟ್​ದಿನ ನಡೆಯಲಿರುವ ಸಿಎಲ್​ಪಿ ಸಭೆಗೆ ಹಾಜರಾಗಲೇಬೇಕು. ಒಂದು ವೇಳೆ ಗೈರಾದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದರು. ಆದರೂ ಕೂಡ ಗೈರಾಗಿರುವ ನಾಲ್ವರು ಅತೃಪ್ತ ನಾಯಕರು ಪಕ್ಷದ ಕ್ರಮದ ವಿರುದ್ಧ ತಪ್ಪಿಸಿಕೊಳ್ಳಲು ಕಾರಣ ನೀಡಿ ಪತ್ರ ಬರೆದಿದ್ದಾರೆ.

ಈಗಾಗಲೇ ಎರಡು-ಮೂರು ಬಾರಿ ಕಾಂಗ್ರೆಸ್​ ಶಾಸಕಾಂಗ ಸಭೆಗೆ ಗೈರಾಗುವ ಮೂಲಕ ಬಿಜೆಪಿ ಅಪರೇಷನ್​ ಕಮಲಕ್ಕೆ ಅನುಮಾನ ಹೆಚ್ಚು ಮಾಡಿರುವ ರೆಬೆಲ್​ ನಾಯಕರು ಈಗಲೂ ಕೂಡ ಈ ಬಗ್ಗೆ ಜಾಣ ನಡೆ ಪ್ರದರ್ಶಿಸಿದ್ದಾರೆ.

ಸಭೆಗೆ ಹಾಜರಾಗದ ಶಾಸಕರ ವಿರುದ್ಧ ಸಿದ್ದರಾಮಯ್ಯ ಅವರು ಹೂಡಿರುವ ಈ ಆ್ಯಂಟಿ ಡಿಫೆನ್ಸ್​ ಲಾ ಬ್ರಹ್ಮಾಸ್ತ್ರದಿಂದ ಕಕ್ಕಾಬಿಕ್ಕಿಯಾಗಿರುವ ಅತೃಪ್ತ ಶಾಸಕರು ಇದರಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ

ಜನವರಿ 18ರಲ್ಲಿ ನಡೆದ ಸಿಎಲ್​ಪಿ ಸಭೆಗೆ ಗೈರಾಗಿದ್ದ ಉಮೇಶ್​ ಜಾದವ್​, ಈ ಬಾರಿ ಕೂಡ ವೈಯಕ್ತಿಕ ಕಾರಣ ನೀಡಿ ಸಭೆಗೆ ಭಾಗಿಯಾಗಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಅಲ್ಲದೇ, ತಾನು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ಕಾಂಗ್ರೆಸ್​ನಲ್ಲಿಯೇ ಇರುತ್ತೇನೆ ಎಂದಿದ್ದಾರೆ.

ಉಮೇಶ್​ ಕುಮಟಹಳ್ಳಿ, ನಾಗೇಂದ್ರ , ರಮೇಶ್​ ಜಾರಕಿಹೊಳಿ ಕೂಡ ನಾವು ಕಾಂಗ್ರೆಸ್​ ಪಕ್ಷ ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಪತ್ರ ರವಾನಿಸಿದ್ದಾರೆ. ತಾವು ಪಕ್ಷವನ್ನು ಬಿಡುವುದಿಲ್ಲ ಎಂಬ ಆಶ್ವಾಸನೆ ಜೊತೆ ಪಕ್ಷ ಬಿಡುವುದಿಲ್ಲ ಎಂದು ಹೇಳಿಕೆ ನೀಡಿರುವ ಶಾಸಕರು ಸಭೆಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಇದರ ಜೊತೆಗೆ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​, ರೋಷನ್​ಬೇಗ್​, ಸತೀಶ್​ ಜಾರಕಿಹೊಳಿ, ಆನಂದ್​ ನ್ಯಾಮಗೌಡ ಕೂಡ ವೈಯಕ್ತಿಕ ಕಾರಣದಿಂದ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಒಟ್ಟು ಹತ್ತು ಶಾಸಕರು ಸಭೆಗೆ ಹಾಜರಾಗದ ಬಗ್ಗೆ ಪಕ್ಷಕ್ಕೆ ಲಿಖಿತ ಮಾಹಿತಿ ನೀಡಿದ್ದಾರೆ.

ಮೂಲಗಳ ಪ್ರಕಾರ, ಕಾಂಗ್ರೆಸ್​ ರೆಬೆಲ್​ ಶಾಸಕರು ಬೆಂಗಳೂರಿನಲ್ಲಿಯೇ ಇದ್ದು, ಅವರ ಮನವೊಲಿಕೆ ಕಾರ್ಯ ನಡೆಯುತ್ತಿದೆ. ನಿನ್ನೆ ರಾತ್ರಿ ರಮೇಶ್ ಜಾರಕಿಹೊಳಿ ,ಮಹೇಶ್ ಕುಮಟಳ್ಳಿ ಸಂಪರ್ಕ ಮಾಡಿರುವ ಮುಖ್ಯಮಂತ್ರಿಗಳು ಏನಿದೆಯೋ ಅದೆಲ್ಲವನ್ನು ನಾನು ಸರಿಮಾಡುತ್ತೀನೆ. ನಿಮಗೆ ನಾನು ಸಹಾಯಮಾಡುತ್ತೇನೆ. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬೇಡಿ. ನಿಮ್ಮ‌ಒಳ್ಳೆಯದಕ್ಕೆ ಹೇಳುತ್ತಿದ್ದೇನೆ ಎಂದು ಮನವೊಲಿಕೆ ಮಾಡಿದ್ದಾರೆ ಎನ್ನಲಾಗಿದೆ.

Comments are closed.