ರಾಷ್ಟ್ರೀಯ

ಕೋಲ್ಕತ್ತ ಪೊಲೀಸರಿಂದ ಸಿಬಿಐನ ನಾಗೇಶ್ವರ್​ ರಾವ್​ ಪತ್ನಿ ಮಾಲೀಕತ್ವದ ಕಂಪನಿ ಮೇಲೆ ದಾಳಿ!

Pinterest LinkedIn Tumblr


ಕೋಲ್ಕತ್ತ: ದಿನದ ಹಿಂದೆ ಕೊಲ್ಕತ್ತ ಪೊಲೀಸ್​ ಆಯುಕ್ತರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿದ ಬೆನ್ನಲ್ಲೇ ಸಿಬಿಐ ಮಾಜಿ ಹಂಗಾಮಿ ನಿರ್ದೇಶಕ ನಾಗೇಶ್ವರ್​ ರಾವ್​ ಅವರ ಕುಟುಂಬಕ್ಕೆ ಸೇರಿದ ಕಂಪನಿಯ ಮೇಲೆ ಕೋಲ್ಕತ್ತ ಪೊಲೀಸರು ಶುಕ್ರವಾರ ಸಂಜೆ ದಾಳಿ ನಡೆಸಿದ್ದಾರೆ.

ಪೊಲೀಸರು ಇದನ್ನು ವಿಚಾರಣೆ ಅಷ್ಟೇ ಎಂದು ಹೇಳಿದ್ದಾರೆ. ಆದರೆ, ಕಳೆದ ಭಾನುವಾರ ಕೋಲ್ಕತ್ತ ನಗರ ಪೊಲೀಸ್ ಆಯುಕ್ತ ರಾಜೀವ್ ಕುಮಾರ್​ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿದ್ದಕ್ಕೆ ತೆಗೆದುಕೊಂಡ ಪ್ರತೀಕಾರ ಎನ್ನಲಾಗುತ್ತಿದೆ. ಅಂದು ನಾಗೇಶ್ವರ್​ ರಾವ್​ ಅವರೇ ತನಿಖಾ ಸಂಸ್ಥೆಯ ಮುಖ್ಯಸ್ಥರಾಗಿದ್ದರು.

ಬೊಬಜಾರ್ ಪೊಲೀಸ್ ಠಾಣೆಯಲ್ಲಿ ಆಂಜೆಲಾ ಮಾರ್ಕಂಟಿಲ್​ ಪ್ರೈ.ಲಿ. ವಿರುದ್ಧ ದೂರು ದಾಖಲಾದ ತಕ್ಷಣ ದಾಳಿ ನಡೆಸಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಕಂಪನಿಯ ಎರಡು ಕಚೇರಿ ಮೇಲೆ ದಾಳಿ ನಡೆಸಲಾಗಿದ್ದು ಒಂದು ಕೋಲ್ಕತ್ತದಲ್ಲಿದ್ದರೆ ಮತ್ತೊಂದು ನಗರದ ಸಾಲ್ಟ್​ ಲೇಕ್​ ಬಳಿ ಇದೆ.

ಎಎಂಪಿಎಲ್​ ಕಂಪನಿಯು ನಾಗೇಶ್ವರ್​ ರಾವ್​ ಅವರ ಹೆಂಡತಿ ಮನ್ನೇಮ್​ ಸಂಧ್ಯಾ ಅವರ ಮಾಲೀಕತ್ವದ್ದು ಎಂದು ವರದಿಯಾಗಿದೆ. ಈ ಬಗ್ಗೆ ಹೇಳಿಕೆ ನೀಡಲು ಸಿಬಿಐ ನಿರಾಕರಿಸಿದೆ.

ಪೊಲೀಸ್​ ಮೂಲಗಳ ಪ್ರಕಾರ, ಕಂಪನಿ ಮತ್ತು ನಾಗೇಶ್ವರ್​ ರಾವ್​ ಹೆಂಡತಿ ನಡುವೆ ಸರಣಿ ಹಣ ವರ್ಗಾವಣೆ ಪ್ರಕ್ರಿಯೆ ನಡೆದಿದೆ ಎಂದು ಆರೋಪಿಸಲಾಗಿದೆ.

ಪ್ರಾಥಮಿಕವಾಗಿ ಮೂರು ವರ್ಗಾವಣೆಗಳು ಇಲ್ಲಿ ನಡೆದಿವೆ. 2011-12ರಲ್ಲಿ ನಾಗೇಶ್ವರ್​ ರಾವ್ ಪತ್ನಿ ಕಂಪನಿಯಿಂದ 25 ಲಕ್ಷ ಸಾಲ ಪಡೆದುಕೊಂಡಿದ್ದಾರೆ. 2012-13ರಲ್ಲಿ ಕಂಪನಿಗೆ 1.5 ಕೋಟಿ ಪಾವತಿಸಲಾಗಿದೆ. ಮತ್ತು ರಾವ್​ ಮಗಳು 14 ಲಕ್ಷ ವೇತನ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಎಎಂಪಿಎಲ್​ ಒಂದು ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿದ್ದು, ಕಂಪನಿಯ ದಾಖಲೆಗಳ ಪ್ರಕಾರ 1994ರಲ್ಲಿ ಕಂಪನಿ ನೋಂದಾಯಿಸಲ್ಪಟ್ಟಿದೆ.

ಹಣಕಾಸು ವ್ಯವಹಾರದಲ್ಲಿ ಸಾಕಷ್ಟು ಅಕ್ರಮಗಳು ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರಾವ್​ ಅವರ ಪತ್ನಿಗೆ ಏಕೆ ಹಣ ಬೇಕಿತ್ತು. ಯಾವ ಪ್ರಕಾರದಲ್ಲಿ ಹಣ ವರ್ಗಾವಣೆಯಾಗಿದೆ. ಮತ್ತು ಅವರ ಮಗಳು ಯಾವ ಸ್ಥಾನದ ಮೇಲೆ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಂಪನಿಯ ಮಾಲೀಕರನ್ನು ಶನಿವಾರ ಕೋಲ್ಕತ್ತ ಪೊಲೀಸರು ಲಾಲ್​ ಬಜಾರ್​ ಮುಖ್ಯಕಚೇರಿಯಲ್ಲಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.

Comments are closed.