ನವದೆಹಲಿ: ಭಾರತ ಸಿಆರ್ಪಿಎಫ್ ಯೋಧರ ಸಾವು ಅತ್ಯಂತ ದುಃಖಕರ. ಇಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿಲ್ಲ. ಯಾವುದೇ ಪಕ್ಷವೂ ಈಗ ರಾಜಕೀಯ ಮಾಡುವ ಸಂದರ್ಭದಲ್ಲಿಲ್ಲ. ಸೈನಿಕರ ಮೇಲಿನ ಉಗ್ರರ ದಾಳಿ ಖಂಡನೀಯ. ಕೇಂದ್ರ ಸರ್ಕಾರದ ಜತೆಗೆ ನಾವಿದ್ದೇವೆ. ಪ್ರಧಾನಿ ಮೋದಿ ಸರ್ಕಾರ ಈ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲಿ, ನಮ್ಮ ಬೆಂಬಲ ಇದ್ದೇ ಇರುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಭರವಸೆ ನೀಡಿದ್ಧಾರೆ.
ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಭಾರತದ 40ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿದ್ದಾರೆ. ಸೈನಿಕರ ಮೇಲೆ ಉಗ್ರರು ದಾಳಿ ನಡೆಸಿದ್ದು ಖಂಡನೀಯ. ದೇಶದ ಇತಿಹಾಸದಲ್ಲಿಯೇ ಇದು ಅತ್ಯಂತ ದುಃಖಕರ ಸಂಗತಿ. ಭಯೋತ್ಪಾದನೆ ದೇಶವನ್ನು ವಿಭಜಿಸುತ್ತಿದೆ. ನಾವು ಈ ವಿಭಜನೆಯನ್ನು ವಿರೋಧಿಸುತ್ತೇವೆ. ಯಾರಿಂದಲೂ ದೇಶದ ವಿಭಜನೆ ಸಾಧ್ಯವಿಲ್ಲ. ಎಲ್ಲಾ ವಿಪಕ್ಷಗಳು ಸೈನಿಕರ ಜೊತೆಗಿವೆ. ಕೇಂದ್ರ ಸರ್ಕಾರದ ನಿರ್ಧಾರಕ್ಕೆ ನಾವು ಬದ್ದವಾಗಿದ್ದೇವೆ ಎಂದರು.
ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸುದ್ದಿಗೋಷ್ಠಿ ಕರೆದಿದ್ದಾರೆ. ಇಲ್ಲಿ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವ ಮೂಲಕ 2 ನಿಮಿಷ ಶ್ರದ್ದಾಂಜಲಿ ಸಲ್ಲಿಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರಾಹುಲ್, ಇಂತಹ ಕರಾಳ ಘಟನೆಯನ್ನು ದೇಶ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು. ಇದೇ ವೇಳೆ ರಾಹುಲ್ ಜತೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಎ.ಕೆ. ಆಂಟನಿ, ಗುಲಾಂ ನಭಿ ಆಜಾದ್ ಉಪಸ್ಥಿತರಿದ್ದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೂಡ ಸೈನಿಕರ ಮೇಲಿನ ದಾಳಿ ಖಂಡಿಸಿದ್ದಾರೆ. ಇನ್ನು ನನಗೆ ಈ ಭಯೋತ್ಪಾದನಾ ದಾಳಿಯಿಂದ ನೋವಾಗಿದೆ. ಸೈನಿಕರ ಕುಟುಂಬದೊಂದಿಗೆ ನಾವಿರುತ್ತೇವೆ. ಈ ಸಮಯದಲ್ಲಿ ನಾವು ಸರ್ಕಾರದ ಜತೆಗೆ ಇರಬೇಕಾದದ್ದು ನಮ್ಮ ಕರ್ತವ್ಯ. ಇಂಥ ಭಯೋತ್ಪಾದನೆ ವಿಷಯದಲ್ಲಿ ರಾಜಿಯೇ ಇಲ್ಲ. ಬೇರೆ ವಿಷಯಗಳ ಚರ್ಚೆಗೂ ಅವಕಾಶ ಇಲ್ಲ. ಸಂಪೂರ್ಣವಾಗಿ ಸೈನಿಕರ ಜೊತೆಗಿರುತ್ತೇವೆ ಎಂದು ತಿಳಿಸಿದರು
ಇನ್ನು ಗುರುವಾರ(ಫೆ.14) ಮಧ್ಯಾಹ್ನ ಸಿಆರ್ಪಿಎಫ್ ಯೋಧರ ಮೇಲೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಅವಂತಿಪೊರ ಎಂಬಲ್ಲಿ ಉಗ್ರರು ಬಾಂಬ್ ದಾಳಿ ನಡೆಸಿದ್ಧಾರೆ. ಕೆಲಸದ ನಿಮಿತ್ತ ವಾಹನವೊಂದರಲ್ಲಿ ತೆರಳುತ್ತಿದ್ದ ಕರ್ತವ್ಯನಿರತ ಯೋಧರ ಮೇಲೆ ಆತ್ಮಾಹುತಿ ದಾಳಿಕೋರ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ದಿಢೀರ್ ಆಕ್ರಮಣ ನಡೆಸಿದೆ. ದಾಳಿಕೋರ ಆದಿಲ್ ಅಹ್ಮದ್ ದಾರ್ ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಸೇನೆ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ 44 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.
ಭಾರತ ಯೋಧರ ಮೇಲೆ ಜೈಷೆ-ಮೊಹಮ್ಮದ್ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದಕ್ಕೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ನಮ್ಮ ಯೋಧರನ್ನು ಬಲಿ ಪಡೆದಿರುವ ಉಗ್ರರ ವಿರುದ್ಧ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರೆಲ್ಲಾ ತಮ್ಮದೇ ರೀತಿಯಲ್ಲಿ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಭಾರತೀಯರ ರಕ್ತ ಕುದಿಯುತ್ತಿದೆ. ಭಯೋತ್ಪಾದಕರ ಈ ಹೇಡಿತನದ ಕೃತ್ಯ ಇದಾಗಿದೆ. ಇದಕ್ಕೆ ನಾವು ಜಗ್ಗುವುದಿಲ್ಲ ಎಂದು ಕಿಡಿಕಾರಿದ್ಧಾರೆ.
Comments are closed.