ಮಂಡ್ಯ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಂತರ ಮಂಡ್ಯಕ್ಕೆ ಭೇಟಿ ನೀಡಿದ್ದ ಸುಮಲತಾ ಅಂಬರೀಷ್ ಹುತಾತ್ಮ ಯೋಧ ಗುರು ಮತ್ತು ರೈತ ಸಂಘದ ನಾಯಕ ದಿವಂಗತ ಕೆ.ಎಸ್ ಪುಟ್ಟಣ್ಣಯ್ಯ ಅವರ ಮನೆಗೆ ಭೇಟಿ ನೀಡಿದ್ದರು.
ಈ ವೇಳೆ ಮಾತನಾಡಿದ ಸುಮಲತಾ ಕಾಂಗ್ರೆಸ್ ಟಿಕೆಟ್ ನಿಂದ ಮಂಡ್ಯ ಲೋಕಸಭೆ ಚುನಾವಣೆಯಿಂದ ಸ್ಪರ್ಧಿಸುವ ಇಂಗಿತ ವ್ಯಕ್ತ ಪಡಿಸಿದ್ದಾರೆ. ದಶಕಗಳ ಕಾಲದಿಂದಲೂ ದಿವಂಗತ ಅಂಬರೀಷ್ ಮತ್ತು ಅವರ ಕುಟುಂಬದ ಮೇಲೆ ಮಂಡ್ಯ ಜನ ತೋರುತ್ತಿರುವ ಪ್ರೀತಿಗೆ ಆಭಾರಿಯಾಗಿದ್ದೇನೆಂದು ಹೇಳಿದ್ದಾರೆ.
ರಾಜಕೀಯ ಪ್ರವೇಶಿಸುವ ಉದ್ದೇಶವನ್ನು ಇಟ್ಟುಕೊಂಡು ನಾನು ಮಂಡ್ಯಗೆ ಬಂದಿಲ್ಲ, ನಾನು ರಾಜಕೀಯಕ್ಕೆ ಬಂದು ಜನರ ಸೇವೆ ಮಾಡಲು ಬಯಸಿದ್ದೇನೆ ಎಂದು ಹೇಳಿದ್ದಾರೆ.
ನಂತರ ಪುತ್ರ ಅಭಿಷೇಕ್ ಜೊತೆ ಕೆ.ಎಂ ದೊಡ್ಡಿಗೆ ತೆರಳಿ ಹುತಾತ್ಮ ಯೋಧ ಗುರು ಪತ್ನಿ ಕಲಾವತಿ ಮತ್ತು ಗುರು ತಾಯಿ ಅವರಿಗೆ ಪ್ರತ್ಯೇಕವಾಗಿ ಎರಡೂವರೆ ಲಕ್ಷ ರು ಚೆಕ್ ನೀಡಿದರು. ಜೊತೆಗೆ ಅಂಬರೀಷ್ ಗೆ ಸೇರಿದ ಅರ್ಧ ಎಕರೆ ಜಮೀನನ್ನು ಕೂಡ ಹುತಾತ್ಮ ಯೋಧ ಗುರು ಕುಟುಂಬಕ್ಕೆ ನೀಡುವುದಾಗಿ ಹೇಳಿದ್ದಾರೆ.
ಸುಮಲತಾ ಅವರಿಗೆ ಹೂವಿನ ಹಾರಗಳನ್ನು ಹಾಕಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಈ ವೇಳೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮತ್ತು ನಟ ದೊಡ್ಡಣ್ಣ ಜೊತೆಗಿದ್ದರು.
ನಂತರ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಗೆ ಭೇಟಿ ನೀಡಿದ ಸುಮಲತಾ ರೈತ ನಾಯಕ ದಿವಂಗತ ಕೆ.ಎಸ್ ಪುಟ್ಟಣ್ಣಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಪುಟ್ಟಣ್ಣಯ್ಯ ಪತ್ನಿ ಸುನೀತಾ ಮತ್ತು ಮಗ ದರ್ಶನ್ ಅವರನ್ನ ಭೇಟಿಯಾದರು, ನಂತರ ಜನರನ್ನುದ್ದೇಶಿಸಿ ಮಾತನಾಡಿದ ಸುಮಲತಾ, ಅಂಬರೀಷ್ ಮತ್ತು ಪುಟ್ಟಣ್ಣಯ್ಯ ಅವರ ನಡುವಿನ ಸ್ನೇಹ ವಿಶ್ವಾಸವನ್ನು ಸ್ಮರಿಸಿದರು. ಈಗ ಇಬ್ಬರು ನಾಯಕರು ನಮ್ಮ ಜೊತೆಯಿಲ್ಲ, ಅಂಬರೀಷ್ ಗೆ ತೋರಿದ ಪ್ರೀತಿಯನ್ನು ನೀವು ಅಭಿಷೇಕ್ ಗೂ ನೀಡಿ ಎಂಗದು ಸುಮಲತಾ ಮನವಿ ಮಾಡಿದರು.
ಒಂದು ವೇಳೆ ನಾನು ರಾಜಕೀಯದಿಂದ ದೂರ ಇದ್ದರೂ ನಾನು ನನ್ನ ಕೊನೆಯ ಉಸಿರು ಇರುವವರೆಗೂ ಮಂಡ್ಯ ಜನತೆ ಜೊತೆಯಲ್ಲಿಯೇ ಇರುತ್ತೇನೆ, ಸಿದ್ದರಾಮಯ್ಯ ಜೊತೆಗಿನ ಭೇಟಿಯ ಬಗ್ಗೆ ಮಾಹಿತಿ ನೀಡಿದ ಸುಮಲತಾ, ಇಲ್ಲಿನ ಜನರ ಆಶೋತ್ತರಗಳನ್ನು ಕಾಂಗ್ರೆಸ್ ಗೌರವಿಸುತ್ತದೆ.ಹಾಗಾಗಿ ನನಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡುತ್ತಾರೆ ಎಂಬ ಭರವಸೆ ವ್ಯಕ್ತ ಪಡಿಸಿದ್ದಾರೆ
Comments are closed.