ದೆಹಲಿ: ತಮ್ಮನ ಮಗನ ರಾಜಕೀಯ ಪ್ರವೇಶಕ್ಕೆ ಅಡ್ಡವಾಗಿರುವ ಸುಮಲತಾ ವಿರುದ್ಧ ರೇವಣ್ಣ ನೀಡಿರುವ ಹೇಳಿಕೆ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಮಂಡ್ಯ ಜನರ ಪ್ರೀತಿಗೆ ಕಟ್ಟು ಬಿದ್ದು, ಅವರ ಋಣ ತೀರಿಸಲು ಒತ್ತಾಯದ ಮೇರೆಗೆ ಚುನಾವಣೆಗೆ ಸ್ಪರ್ಧಿಸಲು ಸುಮಲತಾ ಮುಂದಾಗಿದ್ದಾರೆ. ಅವರ ರಾಜಕೀಯ ಪ್ರವೇಶ ಕುರಿತು ಕಿಡಿಕಾರಿರುವ ಸಚಿವ ರೇವಣ್ಣ ಗಂಡ ಸತ್ತು ಆರು ತಿಂಗಳಾಗಿಲ್ಲ ಚುನಾವಣೆ ಬೇಕಾ ಎಂದು ಪ್ರಶ್ನಿಸಿದ್ದಾರೆ.
ಹೈವೋಲ್ಟೆಜ್ ರಾಜಕೀಯ ಕ್ಷೇತ್ರದ ಕಣವಾಗಿರುವ ಮಂಡ್ಯದಲ್ಲಿ ರಾಜಕೀಯ ಕೆಸರೆರಚಾಟ ಹೆಚ್ಚಾಗಿದೆ. ಸುಮಲತಾ ಸ್ಪರ್ಧೆಗೆ ವಿರೋಧಿಸಿರುವ ಜೆಡಿಎಸ್ ನಾಯಕರು ಅವರ ವಿರುದ್ಧ ವೈಯಕ್ತಿಕ ಮಟ್ಟದ ತೇಜೋವಧೆವರೆಗೂ ಮುಂದುವರೆಸಿದ್ದಾರೆ. ಡಿಸಿ ತಮ್ಮಣ್ಣ ಬಳಿಕ ರೇವಣ್ಣ ಸುಮಲತಾ ವಿರುದ್ಧ ಲಘು ಹೇಳಿಕೆ ನೀಡಿ ಅಂಬರೀಷ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಯಾವಾಗ ತಮ್ಮ ಹೇಳಿಕೆಗೆ ವಿರೋಧ ವ್ಯಕ್ತವಾಯಿತೋ ಆಗ ಎಚ್ಚೆತ್ತ ಅವರು ತಮ್ಮ ಮಾತಿನಲ್ಲಿ ತಪ್ಪಲ್ಲ. ಈ ಕುರಿತು ಕ್ಷಮೆಯನ್ನು ಕೇಳುವುದಿಲ್ಲ ಎಂದು ತಮ್ಮ ಹೇಳಿಕೆಗೆ ಸಮರ್ಥಿಸಿಕೊಂಡರು. ನಾನು ಹಿಂದೂ ಸಂಸ್ಕೃತಿ ಪ್ರಕಾರ ಮಾತಾಡಿದ್ದೇನೆ.ಗಂಡ ಸತ್ತು ಇಷ್ಟು ಬೇಗ ರಾಜಕಾರಣಕ್ಕೆ ಬರಬಾರದು. ಬೇರೆ ಉದ್ದೇಶದಿಂದ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಷ್ಟೇ ಅಲ್ಲದೇ, ಅವರ ವಿರುದ್ಧ ವಾಗ್ದಾಳಿ ನಡೆಸಿರುವ ರೇವಣ್ಣ, ಗೋ ಬ್ಯಾಕ್ ಕುಮಾರಸ್ವಾಮಿ ಅಭಿಯಾನ ಮಾಡಿದ್ದರು ಎಂಬುದು ತಿಳಿದಿದೆ. ಅಂಬರೀಶ್ ಸತ್ತಾಗ ಸಿಎಂ ಬೆಳಗ್ಗೆ 3 ಗಂಟೆವರೆಗು ಇದ್ದು, ಅವರಿಗೆ ಸಕಲ ಗೌರವ ನೀಡುವಂತೆ ಕುಮಾರಸ್ವಾಮಿ ನೋಡಿಕೊಂಡಿದ್ದಾರೆ. ಕುಮಾರಸ್ವಾಮಿ ಕೂಡ ಬರೀ ಹೂಗುಚ್ಛ ಕೊಟ್ಟು ಬರಬಹುದಿತ್ತು. ಆದರೆ ಕುಮಾರಸ್ವಾಮಿ ಬೆಳಗಿನವರೆಗೆ ಕೆಲಸ ಮಾಡಿದ್ದರು. ಸುಮಲತಾಗೆ ಬೇಸರ ಆಗುವಂತೆ ಮಾತನಾಡಿಲ್ಲ. ಅದೇ ವಿಷ್ಣುವರ್ಧನ್ ಸತ್ತಾಗ ಸರ್ಕಾರ ಏನು ಮಾಡಿತ್ತು ಎಂದು ಪ್ರಶ್ನಿಸಿದ್ದಾರೆ.
ಗುರುವಾರ ಮಳವಳ್ಳಿ ಸಭೆಯಲ್ಲಿ ಸುಮಲತಾ ಕಣ್ಣೀರು ಹಾಕಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇಂಥ ಡ್ರಾಮಗಳನ್ನು ನಾನು ಬಹಳ ನೋಡಿದ್ದೇನೆ. ಸಿನಿಮಾದಲ್ಲಿ ಕಣ್ಣೀರು ಹಾಕುತ್ತಿದ್ದರು. ಈಗ ಅದೇ ಥರ ರಾಜಕಾರಣದಲ್ಲೂ ಡ್ರಾಮ ಮಾಡುತ್ತಿರಬಹುದು ಎಂದು ಕುಹುಕವಾಡಿದ್ದು, ಮಂಡ್ಯದಲ್ಲಿ ಸ್ಪರ್ಧೆಗೆ ಮುಂದಾಗಿರುವ ಅವರು ಜಿಲ್ಲೆಗೆ ಕೊಟ್ಟಿರುವ ಕೊಡಗೆ ಏನು ಎಂದು ಪ್ರಶ್ನಿಸಿದ್ದಾರೆ.
ಸುಮಲತಾ ಬೆನ್ನಿಗೆ ಬಿಜೆಪಿ:
ಸುಮಲತಾ ಅಂಬರೀಷ್ ವಿರುದ್ಧ ರೇವಣ್ಣ ನೀಡಿರುವ ಹೇಳಿಕೆ ಮಹಿಳಾ ಸಮುದಾಯಕ್ಕೆ ಮಾಡಿದ ಅಪಮಾನ. ಕೂಡಲೇ ರೇವಣ್ಣ ತಮ್ಮ ಮಾತನ್ನು ವಾಪಸ್ ಪಡೆದು ಅವರು ಕ್ಷಮೆಯಾಚಿಸಬೇಕು. ಸುಮಲತಾ ಅವರಿಗೆ ಆಗಿರುವ ನೋವಿನಲ್ಲಿ ನಾವೂ ಕೂಡಾ ಭಾಗಿಯಾಗುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ತಿಳಿಸಿದರು.
Comments are closed.