ಬೆಂಗಳೂರು: ಪಕ್ಷಾಂತರ ನಿಷೇಧ ಕಾಯ್ದೆಯಡಿ ನಾಲ್ವರು ಶಾಸಕರನ್ನು ಅನರ್ಹಗೊಳಿಸುವ ಪ್ರಕರಣದ ವಿಚಾರಣೆಯನ್ನು ಇಂದು ನಡೆಸಬೇಕಾಗಿದ್ದ ಸ್ಪೀಕರ್ ರಮೇಶ್ ಕುಮಾರ್ ದಿಢೀರ್ ಎಂದು ವಿಚಾರಣೆಯನ್ನು ಮುಂದೂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಕಾಂಗ್ರೆಸ್ನ ನಾಲ್ವರು ಶಾಸಕರಾದ ರಮೇಶ್ ಜಾರಕಿಹೊಳಿ, ಉಮೇಶ್ ಜಾಧವ್, ಬಿ. ನಾಗೇಂದ್ರ, ಮಹೇಶ್ ಕುಮಟಳ್ಳಿ ವಿರುದ್ಧ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ದೂರು ನೀಡಿದ್ದರು. ಇಂದು ಅವರೆಲ್ಲರೂ ಖುದ್ದು ಹಾಜರಾಗಿ ವಿಚಾರಣೆಯಲ್ಲಿ ಪಾಲ್ಗೊಳ್ಳಬೇಕೆಂದು ಸ್ಪೀಕರ್ ರಮೇಶ್ ಕುಮಾರ್ ದಿನಾಂಕವನ್ನು ನಿಗದಿಪಡಿಸಿದ್ದರು. ಹಾಜರಾಗಿ ವಿವರಣೆ ನೀಡಬೇಕೆಂದು ನಾಲ್ವರಿಗೂ ಸೂಚನೆ ನೀಡಲಾಗಿತ್ತು. ಆದರೆ, ಇದ್ದಕ್ಕಿದ್ದಂತೆ ವಿಚಾರಣೆಯನ್ನು ಮುಂದೂಡಲಾಗಿದೆ.
ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ಬಗ್ಗೆ ಈ ನಾಲ್ವರ ವಿರುದ್ಧ ಸಿದ್ದರಾಮಯ್ಯ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ದೂರು ನೀಡಿದ್ದ ಬೆನ್ನಲ್ಲೇ ಅತೃಪ್ತ ಶಾಸಕ ಉಮೇಶ್ ಜಾಧವ್ ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಆದರೆ, ಆ ರಾಜೀನಾಮೆಯನ್ನು ಸ್ಪೀಕರ್ ಇನ್ನೂ ಅಂಗೀಕಾರ ಮಾಡಿಲ್ಲ. ಸದ್ಯಕ್ಕೆ ಮುಂದಿನ ವಿಚಾರಣೆಯ ದಿನಾಂಕವನ್ನು ಇನ್ನೂ ನಿಗದಿ ಮಾಡಿಲ್ಲ. ಸ್ಪೀಕರ್ ವಿಚಾರಣೆಯನ್ನು ಮುಂದೂಡಿರುವುದರಿಂದ ಸದ್ಯಕ್ಕೆ ನಾಲ್ವರು ಶಾಸಕರಿಗೆ ರಿಲೀಫ್ ಸಿಕ್ಕಂತಾಗಿದೆ.
ಈ ನಡುವೆ ನಿನ್ನೆಯಷ್ಟೇ ಮತ್ತೆ ಕಾಂಗ್ರೆಸ್ ಪರವಾಗಿ ಮಾತನಾಡಿದ್ದ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡುವುದಾಗಿ ಹೇಳಿಕೊಂಡಿದ್ದು ಕುತೂಹಲ ಮೂಡಿಸಿತ್ತು. ಲೋಕಸಭೆಗೆ ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂಬುದು ಹೈಕಮಾಂಡ್ಗೆ ಬಿಟ್ಟ ವಿಚಾರ. ನಾನು ಅವರ ಆದೇಶದಂತೆ ಕೆಲಸ ಮಾಡುತ್ತೇನೆ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದರು.
Comments are closed.