ನವದೆಹಲಿ: ಬಿಜೆಪಿ ಭದ್ರಕೋಟೆಯನ್ನು ಮಧ್ಯಪ್ರದೇಶ ಬೇಧಿಸಿ ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಪಾತ್ರ ಅಪಾರ. ಕಾಂಗ್ರೆಸ್ಸಿಗ ಮಾಧವ ರಾವ್ ಅವರ ಮಗನಾದ ಜ್ಯೋತಿರಾಧಿತ್ಯ ಸಿಂಧಿಯಾ ಪಕ್ಷದಲ್ಲಿ ಪ್ರಬಲ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ ಸಿಂಧಿಯಾಗೆ ಈ ಬಾರಿ ಪಶ್ಚಿಮ ಉತ್ತರ ಪ್ರದೇಶದ ಉಸ್ತುವಾರಿ ವಹಿಸಲಾಗಿದೆ. ಕಾಂಗ್ರೆಸ್ನ ನಿಷ್ಠಾವಂತ ನಾಯಕರಾಗಿರುವ ಇವರು ಬಿಜೆಪಿ ಪ್ರಬಲವಾಗಿರುವ ಕ್ಷೇತ್ರದಲ್ಲಿ ಯಾವ ರೀತಿ ಜಾದು ಮಾಡುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.
ರಾಜಮನೆತನದಲ್ಲಿ ಹುಟ್ಟಿ ಬೆಳೆದ ಜ್ಯೋತಿರಾದಿತ್ಯ ಸಿಂಧಿಯಾ ಹಾವರ್ಡ್ ವಿವಿಯಿಂದ ಅರ್ಥಶಾಸ್ತ್ರ ಪದವಿ ಹಾಗೂ ಸ್ಟಾನ್ಡ್ ಫೋರ್ಡ್ ಗ್ರ್ಯಾಜುಯೆಟ್ ಸ್ಕೂಲ್ ಆಫ್ ಬಿಸಿನೆಸ್ನಿಂದ ಎಂಬಿಎ ಪದವಿ ಪಡೆದಿದ್ದಾರೆ. ಇವರ ತಂದೆ ಮಾಧವ ರಾವ್ ಸಿಂಧಿಯಾ ವಿಮಾನ ಅಪಘಾತದಲ್ಲಿ ನಿಧನರಾದ ಬಳಿಕ ಅನಿವಾರ್ಯವಾಗಿ ರಾಜಕೀಯಕ್ಕೆ ಪ್ರವೇಶಿಸಿದ ಇವರು ಇಂದು ಪ್ರಬಲ ನಾಯಕರಾಗಿ ಪಕ್ಷದಲ್ಲಿ ಬೆಳೆದು ನಿಂತಿದ್ದಾರೆ.
ಹಣ ಬಲದ ಜೊತೆಗೆ ಚುರುಕುತನ, ನಾಯಕತ್ವ ಗುಣ ಹೊಂದಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಸ್ವಂತ ಬಲದಿಂದಲೇ ಪಕ್ಷದಲ್ಲಿ ವರ್ಚಸ್ಸು ಸಂಪಾದಿಸಿ, ಹೈಕಮಾಂಡ್ಗೆ ಆಪ್ತರಾದವರು. ಮಧ್ಯಪ್ರದೇಶದ ಗುನಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಇವರ ಸಾಮರ್ಥ್ಯ ಇತ್ತೀಚೆಗೆ ನಡೆದ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಸಾಬೀತಾಗಿತ್ತು. ಮುಖ್ಯಮಂತ್ರಿ ಹುದ್ದೆಯ ರೇಸ್ನಲ್ಲಿದ್ದ 48 ವರ್ಷದ ಸಿಂಧಿಯಾಗೆ ಪಕ್ಷ ಈಗ ಲೋಕಸಭಾ ಚುನಾವಣೆ ಜವಬ್ದಾರಿಯನ್ನು ಹೊರಿಸಿದೆ. ಮಧ್ಯಪ್ರದೇಶ ರಾಜಕಾರಣದಲ್ಲಿ ಸಿಂಧಿಯಾಗಿಂತ ಹಿರಿಯರಾಗಿರುವ ಕಮಲನಾಥ್ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತಿದ್ದಾರೆ.
ಸಿಂಧಿಯಾ ಮುಂದಿದೆ ಭಾರೀ ಸವಾಲು:
ಪಶ್ಚಿಮ ಉತ್ತರ ಪ್ರದೇಶದ ಜವಬ್ದಾರಿ ಪಡೆದಿರುವ ಸಿಂಧಿಯಾ ಮುಂದೆ ಭಾರೀ ಸವಾಲು ಎದುರಾಗಿದೆ. ಕಾರಣ 2014ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಈ ಪ್ರದೇಶದಲ್ಲಿ ಒಂದು ಕ್ಷೇತ್ರಗಳಲ್ಲಿಯೂ ಖಾತೆಯನ್ನು ತೆರೆದಿಲ್ಲ. ಪ್ರಿಯಾಂಕ ಗಾಂಧಿ ಜೊತೆಯಲ್ಲಿ ಸಿಂಧಿಯಾರಿಗೂ ಕೂಡ ಉತ್ತರ ಪ್ರದೇಶದ ಜವಬ್ದಾರಿ ನೀಡಿರುವ ಪಕ್ಷ ಇಬ್ಬರ ಸಾಮರ್ಥ್ಯದ ಮೇಲೆ ಅಗಾಧ ವಿಶ್ವಾಸವನ್ನು ಹೊಂದಿದೆ. ಈ ಇಬ್ಬರು ನಾಯಕರು ತಮ್ಮ ಕಾಂಗ್ರೆಸ್ನ ನೈಜ ಚಿಂತನೆಯನ್ನು ಹರಡುವ ಮೂಲಕ ಉತ್ತರ ಪ್ರದೇಶದ ರಾಜಕೀಯವನ್ನು ಬದಲು ಮಾಡುತ್ತಾರೆ ಎಂದು ನಂಬಿಕೆ ಪಕ್ಷಕ್ಕಿದೆ.
ಮಧ್ಯಪ್ರದೇಶದಲ್ಲಿ ಜಾದು ಮಾಡಿದ ಸಿಂಧಿಯಾ:
15 ವರ್ಷಗಳ ಬಿಜೆಪಿ ಆಡಳಿತವಿದ್ದ ಮಧ್ಯಪ್ರದೇಶದಲ್ಲಿ ಸತತ 110 ಸಮಾವೇಶ ಮತ್ತು 12 ರೋಡ್ ಶೋ ನಡೆಸುವ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ತಮ್ಮ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಅವರು ಕಮಲನಾಥ್ ಸಿಎಂ ಆಗಲು ವಿರೋಧವನ್ನು ವ್ಯಕ್ತಪಡಿಸಿದ್ದರು. ಮಧ್ಯಪ್ರದೇಶದಲ್ಲಿ ಕಮಲನಾಥ್ ಹಾಗೂ ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ಗಿಂತ ಹೆಚ್ಚು ಕಾಲ ರಾಜ್ಯದಲ್ಲಿ ನಾನು ಮತ್ತು ಪೈಲಟ್ ಶ್ರಮಿಸಿದ್ದೇವೆ. ನಾನು ಪಕ್ಷದ ನಿರ್ಧಾರಕ್ಕೆ ತಲೆಬಾಗುತ್ತಿದ್ದು, ಅದರಂತೆ ಕಾರ್ಯ ನಿರ್ವಹಿಸುತ್ತೇವೆ ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು.
ಚುನಾವಣೆ ಘೋಷಣೆಯಾಗುತ್ತಿದ್ದಂತೆ ಇನ್ನಷ್ಟು ರಾಜಕೀಯ ಚಟುವಟಿಕೆ ಬಿರುಸುಗೊಳಿಸಿರುವ ಸಿಂಧಿಯಾಗೆ ಪಶ್ಚಿಮ ಉತ್ತರಪ್ರದೇಶದ 39 ಕ್ಷೇತ್ರಗಳ ಜವಾಬ್ದಾರಿ ಪಡೆದಿದ್ದಾರೆ. ಯೋಗಿ ಆದಿತ್ಯನಾಥ್ರ ನಾಡಿನಲ್ಲಿ ಸಿಂಧಿಯಾ ಯಾವ ರೀತಿ ಜಾದು ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
Comments are closed.