ಕರಾವಳಿ

ಪ್ರಧಾನಿ ಮೋದಿಯವರಿಂದ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ : ಕಾಂಗ್ರೆಸ್‌ನ ಹಿರಿಯ ಮುಖಂಡ ಪೂಜಾರಿ

Pinterest LinkedIn Tumblr

ಮಂಗಳೂರು, ಮಾರ್ಚ್ 14: ಭ್ರಷ್ಟಾಚಾರ ನಿರ್ಮೂಲನೆ ಮೋದಿಯಿಂದ ಮಾತ್ರ ಸಾಧ್ಯ. ರಾಜಕೀಯವಾಗಿ ಮೋದಿ ಇನ್ನಷ್ಟು ಪ್ರಬಲರಾಗಬೇಕು,.ಮೋದಿ ಭ್ರಷ್ಟಚಾರದ ವಿರುದ್ಧ ಹೋರಾಡಿ ಗೆದ್ದಿದ್ದಾರೆ. ಮುಂದೆಯೂ ಗೆಲ್ಲುತ್ತಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್‌ನ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿ ಪ್ರಧಾನಿ ಮೋದಿಯವರ ಗುಣಗಾನ ಮಾಡಿದ್ದಾರೆ.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಯವರಿಗೆ ಮತ ನೀಡಬೇಡಿ ಎಂದು ನಾನು ಎಲ್ಲಿಯೂ ಹೇಳುವುದಿಲ್ಲ. ಅವರಿಗೂ ಜನರು ಮತ ನೀಡಬೇಕು. ಪ್ರಧಾನಿ ಮೋದಿಯಿಂದ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ ಎಂದು ಕೇಂದ್ರ ಸರ್ಕಾರದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ಲೋಕಸಭಾ ಚುನಾವಣೆ ಸ್ಪರ್ಧೆಗೆ ನಾನೂ ಟಿಕೆಟ್​ ಆಕಾಂಕ್ಷಿ.. ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲು ನನಗೂ ಇಷ್ಟವಿದೆ. ಟಿಕೆಟ್ ಸಿಕ್ಕಿದರೆ ಖಂಡಿತವಾಗಿಯೂ ಸ್ಪರ್ಧಿಸುತ್ತೇನೆ ಎಂದು ಹೇಳಿದ ಪೂಜಾರಿ, ಇನ್ನೆರಡು ದಿನದಲ್ಲಿ ದೆಹಲಿಗೆ ಭೇಟಿ ನೀಡುತ್ತೇನೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರನ್ನು ಭೇಟಿಯಾಗುತ್ತೇನೆ. ಪಕ್ಷದ ಮುಖಂಡರನ್ನು ಭೇಟಿಯಾಗಿ ಟಿಕೆಟ್ ಕೇಳುತ್ತೇನೆ ಎಂದು ಹೇಳಿದರು.

ಇದೇ ವೇಳೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಎಸ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ ಎನ್ ರಾಜೇಂದ್ರ ಕುಮಾರ್ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂಬ ಮಾಹಿತಿ ಇರುವ ಬಗ್ಗೆ ಸುದ್ಧಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪೂಜಾರಿಯವರು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಎಸ್​ಸಿಡಿಸಿಸಿ ಬ್ಯಾಂಕ್​ ಅಧ್ಯಕ್ಷ ರಾಜೇಂದ್ರ ಕುಮಾರ್​ಗೆ ಟಿಕೆಟ್ ನೀಡಬಾರದು ಎಂದು ಹೇಳಿದರು.

ಒಂದು ವೇಳೆ ಎಮ್.ಎಲ್.ಸಿ ಐವನ್ ಡಿಸೋಜರಿಗೆ ಕಾಂಗ್ರೆಸ್ ಟಿಕೇಟ್ ನೀಡುವುದೇ ಎಂಬ ಸುದ್ಧಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೂಜಾರಿ, ಐವನ್ ಡಿಸೋಜರಿಗೆ ಕಾಂಗ್ರೆಸ್ ಖಂಡಿತ ಟಿಕೇಟ್ ನೀಡುವುದಿಲ್ಲ. ಒಂದುವೇಳೆ ಐವನ್ ಡಿಸೋಜ ಹಾಗೂ ರಾಜೇಂದ್ರ ಕುಮಾರ್ ಗೆ ಟಿಕೆಟ್ ಕೊಟ್ಟರೆ ನಾನು ಅವರ ವಿರುದ್ಧ ಬಂಡಾಯವಾಗಿ ಸ್ಪರ್ಧೆ ಮಾಡುವುದು ಖಚಿತ ಎಂದು ಜನಾರ್ದನ ಪೂಜಾರಿ ಎಚ್ಚರಿಕೆ ನೀಡಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಇವರಿಬ್ಬರನ್ನು ಹೊರತುಪಡಿಸಿ ಬೇರೆ ಯಾರಿಗೆ ಟಿಕೆಟ್ ನೀಡಿದರೂ ನನ್ನ ಬೆಂಬಲವಿದೆ ಎಂದು ಪೂಜಾರಿ ಹೇಳಿದರು.

Comments are closed.