ಕರಾವಳಿ

ಬೆಂಗಳೂರಿನ ಮದರ್ ಡೈರಿಗೆ ನಿರ್ದೇಶಕರಾಗಿ ಪದೋನ್ನತಿಗೊಂಡ ಡಾ:ಬಿ.ವಿ.ಸತ್ಯನಾರಾಯಣರಿಗೆ ಬೀಳ್ಕೊಡುಗೆ

Pinterest LinkedIn Tumblr

ಮಂಗಳೂರು : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ ದಿನಾಂಕ 12-10-2012 ರಿಂದ 28-02-2019ರ ವರೆಗೆ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ:ಬಿ.ವಿ.ಸತ್ಯನಾರಾಯಣ ಪದೋನ್ನತಿಗೊಂಡು ಮದರ್ ಡೈರಿ ಬೆಂಗಳೂರಿನ ನಿರ್ದೇಶಕರಾಗಿ ಕಾರ್ಯಭಾರ ವಹಿಸಿಕೊಂಡಿರುತ್ತಾರೆ.

ಡಾ:ಬಿ.ವಿ.ಸತ್ಯನಾರಾಯಣ ಅವರಿಗೆ ದ.ಕ. ಹಾಲು ಒಕ್ಕೂಟದ ಆಡಳಿತ ಮಂಡಲಿ ಮತ್ತು ಸಹೋದ್ಯೋಗಿಗಳು ಆತ್ಮೀಯ ಬೀಳ್ಕೊಡುಗೆ ಸಮಾರಂಭ ಕುಲಶೇಖರ ಡೇರಿಯಲ್ಲಿ ನಡೆಯಿತು.

ಡಾ:ಸತ್ಯನಾರಾಯಣರವರು ತಮ್ಮ ಅಧಿಕಾರಾವಧಿಯಲ್ಲಿ ಒಕ್ಕೂಟದಲ್ಲಿ ಪ್ಲೆಕ್ಸಿ ಪ್ಯಾಕ್ ಘಟಕ, ಶೀತಲೀಕರಣ ಘಟಕ, ಸುವಾಸಿತ ಹಾಲಿನ ಪ್ಯಾಕಿಂಗ್ ಘಟಕ, ಉಪ್ಪೂರಿನ ನೂತನ ಡೇರಿ ಆಧುನಿಕ ಯಂತ್ರೋಪಕರಣಗಳ ಅಳವಡಿಕೆಯೊಂದಿಗೆ ಹಾಲು ಮತ್ತು ಉತ್ಪನ್ನಗಳ ಸಂಸ್ಕರಣೆ ಮತ್ತು ತಯಾರಿಕಾ ಸೌಕರ್ಯಕ್ಕೆ ಒತ್ತು ನೀಡಿ ಅಭಿವೃದ್ಧಿ ಪಡಿಸಿರುವುದನ್ನು ಆಡಳಿತ ಮಂಡಲಿ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು ಸ್ಮರಿಸಿದರು.

ಅಲ್ಲದೇ ದ.ಕ. ಹಾಲು ಒಕ್ಕೂಟವು ರಾಷ್ಟ್ರ ಮಟ್ಟದಲ್ಲಿ ೨ನೇ ಸ್ಥಾನ ಪಡೆದು ರಾಷ್ಟ್ರೀಯ ಉತ್ಕೃಷ್ಟತಾ ಪುರಸ್ಕಾರಕ್ಕೆ ಭಾಜಿನವಾಗಲು ಶ್ರಿಯುತರ ಕೊಡುಗೆ ಅಪಾರವೆಂದು ತಿಳಿಸಿದರು. ಒಕ್ಕೂಟವು ರಾಜ್ಯದ ಕ್ವಾಲಿಟಿ ಮಾರ್ಕ್ ದೃಢೀಕರಣ ಪಡೆದ ೪ನೇ ಒಕ್ಕೂಟವಾಗಿ ಮತ್ತು ಐ.ಎಸ್.ಒ ೨೨೦೦೦:೨೦೦೫ ಅಳವಡಿಕೆ, ಆನ್‌ಲೈನ್ ಮೂಲಕ ಡೀಲರುಗಳು ಹಾಲಿನ ಬೇಡಿಕೆ ಸಲ್ಲಿಸಲು ಅವಕಾಶ, ಹಾಲಿನ ವಾಹನಗಳ ಚಲನವಲನ ಗಮನಿಸಲು ವಾಹನಗಳಲ್ಲಿ ಜಿ.ಪಿ.ಎಸ್. ಅಳವಡಿಕೆ ಮುಂತಾದ ಕಾರ್ಯಗಳನ್ನು ಶ್ಲಾಘಿಸಿದರು.

ಒಕ್ಕೂಟದ ಮಾಜಿ ಅಧ್ಯಕ್ಷರು, ಹಾಲಿ ನಿರ್ದೇಶಕರಾದ ಶ್ರೀ.ಸವಣೂರು ಸೀತಾರಾಮ ರೈ, ಕಾಪು ದಿವಾಕರ ಶೆಟ್ಟಿ, ನಿರ್ದೇಶಕರಾದ ಹದ್ದೂರು ರಾಜೀವ ಶೆಟ್ಟಿ, ಉಪಾಧ್ಯಕ್ಷರಾದ ಸುಚರಿತ ಶೆಟ್ಟಿ ಕೆ.ಪಿ, ಅಧ್ಯಕ್ಷರಾದ ಶ್ರೀ.ರವಿರಾಜ ಹೆಗ್ಡೆ ಇವರು ಮಾತನಾಡಿದರು.

ಒಕ್ಕೂಟದ ಶ್ರೀ.ಶಿವಶಂಕರ ಸ್ವಾಮಿ, ವ್ಯವಸ್ಥಾಪಕರು (ಡೇರಿ), ಡಾ:ನಿತ್ಯಾನಂದ ಭಕ್ತ, ವ್ಯವಸ್ಥಾಪಕರು (ಶೇ.ಮತ್ತು ತಾಂ.) ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.