ಪಣಜಿ: ಗೋವಾದ ವಿಧಾನಸಭಾಧ್ಯಕ್ಷ ಪ್ರಮೋದ್ ಸಾವಂತ್ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಮನೋಹರ್ ಪರಿಕ್ಕರ್ ಅವರ ನಿಧನದಿಂದಾಗಿ ತೆರವಾಗಿದ್ದ ಸ್ಥಾನವನ್ನು ಬಿಜೆಪಿಯ ಪ್ರಮೋದ್ ಸಾವಂತ್ ತುಂಬಲಿದ್ದಾರೆ.
ಸಿಎಂ ಮನೋಹರ್ ಪರಿಕ್ಕರ್ ನಿಧನರಾಗುತ್ತಿದ್ದಂತೆಯೇ ಗೋವಾದಲ್ಲಿ ರಾಜಕೀಯ ಹೈಡ್ರಾಮಾವೇ ನಡೀತು. ಈ ಹೈಡ್ರಾಮಾದ ಮಧ್ಯೆಯೇ ಗೋವಾ ನೂತನ ಸಿಎಂ ಆಗಿ ಬಿಜೆಪಿಯ ಪ್ರಮೋದ್ ಸಾವಂತ್ ಆಯ್ಕೆಯಾಗಿದ್ದಾರೆ.
ಗೋವಾ ಸರ್ಕಾರ ಉಳಿಯುತ್ತಾ : ಉರುಳುತ್ತಾ..?
ಗೋವಾಗೆ ನೂತನ ಸಿಎಂ ಆಯ್ಕೆ ಬಗ್ಗೆ ತಲೆಕೆಡಿಸಿಕೊಂಡಿದ್ದ ಬಿಜೆಪಿ ಹೈಕಮಾಂಡ್ ನಿತಿನ್ ಗಡ್ಕರಿಯವರಿಗೆ ಉಸ್ತುವಾರಿ ವಹಿಸಿತ್ತು. ನಿನ್ನೆ [ಭಾನುವಾರ] ತಡರಾತ್ರಿಯಿಂದ ಸಭೆ ಮೇಲೆ ಸಭೆ ನಡೆಸಿದ ಗಡ್ಕರಿ, ಬಿಜೆಪಿ-ಜಿಎಫ್ಪಿ-ಎಂಜಿಪಿ ಶಾಸಕರ ಬೆಂಬಲ ಪಡೆದು ಕೊನೆಗೂ ಪ್ರಮೋದ್ ಸಾವಂತ್ ಅವರನ್ನು ಹೊಸ ಸಿಎಂ ಆಯ್ಕೆ ಮಾಡುವಲ್ಲಿ ಯಶಸ್ವಿಯಾದರು.
ಕಾಂಗ್ರೆಸ್ ಗೆ ಮುಖಭಂಗ
ಸರ್ಕಾರಕ್ಕೆ ಸದಸ್ಯ ಬಲವಿಲ್ಲ ಎಂದು ಸರ್ಕಾರ ರಚನೆಗೆ ಅವಕಾಶ ಕೇಳಿದ್ದ ಗೋವಾ ಕಾಂಗ್ರೆಸ್, ಇವತ್ತು ಮತ್ತೊಮ್ಮೆ ಗವರ್ನರ್ ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿತ್ತು.
ಇಬ್ಬರು ಕಾಂಗ್ರೆಸ್ ಶಾಸಕರ ರಾಜೀನಾಮೆ ಹಾಗೂ ಬಿಜೆಪಿ ಶಾಸಕರ ನಿಧನದಿಂದಾಗಿ ಗೋವಾ ವಿಧಾನಸಭೆ ಸಂಖ್ಯಾಬಲ 40ರಿಂದ 36ಕ್ಕೆ ಕುಸಿದಿದ್ದು, ಬಹುಮತ ಕಳೆದುಕೊಂಡ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದ್ದರು. ಶತಾಯಗತಾವಾಗಿ ಅಧಿಕಾರದ ಚುಕ್ಕಾಣಿ ಹಿಡಿಲೇಬೇಕೆಂದು ಪಣತೊಟ್ಟಿದ್ದ ಕಾಂಗ್ರೆಸ್ ಗೆ ಕೊನೆಗಳಿಗೆಯಲ್ಲಿ ಮುಖಭಂಗವಾಗಿದೆ.
ಸದಸ್ಯಬಲ 36ಕ್ಕೆ ಕುಸಿತ
ಸಿಎಂ ಆಗಿದ್ದ ಬಿಜೆಪಿಯ ಮನೋಹರ್ ಪರಿಕ್ಕರ್ ಮತ್ತು ಶಾಸಕ ಫಾನ್ಸಿಸ್ ಡಿ ಸೋಜಾ ಅವರ ಅಕಾಲಿಕ ಮರಣ ಹಾಗೂ ಕಾಂಗ್ರೆಸ್ನ ಇಬ್ಬರು ಸದಸ್ಯರ ರಾಜೀನಾಮೆಯಿಂದಾಗಿ 40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಸದ್ಯ 36 ಶಾಸಕರು ಇದ್ದಾರೆ. ಹಾಗಾಗಿ ಬಹುಮತ ಸಾಬೀತುಪಡಿಸಲು 19 ಶಾಸಕರು ಸಾಕಾಗುತ್ತದೆ.
ಕಾಂಗ್ರೆಸ್ 15 ಶಾಸಕರನ್ನು ಹೊಂದಿದ್ದರೆ ಬಿಜೆಪಿಯ ಸಂಖ್ಯಾಬಲ 12ಕ್ಕೆ ಕುಸಿದಿದೆ. ಜಿಎಫ್ಪಿ, ಎಂಜಿಪಿ ಮತ್ತು ಪಕ್ಷೇತರರು ತಲಾ 3 ಜನರಿದ್ದು, ಇವರೆಲ್ಲರೂ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಎನ್ಸಿಪಿಯ ಒಬ್ಬರು ಸದಸ್ಯರಿದ್ದಾರೆ.
Comments are closed.