ನವದೆಹಲಿ: ಮೊಮ್ಮಗನಿಗಾಗಿ ಕ್ಷೇತ್ರ ಬಿಟ್ಟುಕೊಟ್ಟಿರುವ ದೇವೇಗೌಡರಿಗೆ ಈಗ ಕ್ಷೇತ್ರವಿಲ್ಲದಂತೆ ಆಗಿದೆ. ಬೆಂಗಳೂರು ಉತ್ತರ ಅಥವಾ ತುಮಕೂರಿನಲ್ಲಿ ನಿಲ್ಲುವುದಾ ಎಂಬ ಲೆಕ್ಕಾಚಾರದಲ್ಲಿಯೇ ದೇವೇಗೌಡರು ಇದ್ದಾರೆ. ಯಾವ ಕ್ಷೇತ್ರದಲ್ಲಿ ನಿಂತುಕೊಳ್ಳುತ್ತೇನೆ ಎಂಬ ಗುಟ್ಟು ಬಿಟ್ಟುಕೊಡದ ದೇವೇಗೌಡರ ನಡೆ ಮೇಲೆ ಪ್ರಧಾನಿ ಮೋದಿ ಕೂಡ ಕಣ್ಣಿಟ್ಟಿದ್ದಾರೆ.
ಮಾಜಿ ಪ್ರಧಾನಿಯಾಗಿದ್ದು, ಮಹಾಘಟ್ಬಂಧನ್ನ ಹಿರಿಯ ನಾಯಕರಾಗಿರುವ ದೇವೇಗೌಡರು ಸ್ಪರ್ಧೆ ಬಿಜೆಪಿ ನಾಯಕರಿಗೂ ಒಂದು ರೀತಿ ನಿದ್ದೆಗೆಡಿಸಿದೆ. ಮೈತ್ರಿ ಮೂಲಕ ಸ್ಪರ್ಧಿಸುತ್ತಿರುವ ಗೌಡರಿಗೆ ಈ ಚುನಾವಣೆ ಪ್ರತಿಷ್ಠೆಯ ಕಣ ಕೂಡ ಆಗಿದೆ. ಈ ಹಿನ್ನೆಲೆಯಲ್ಲಿ ಅವರು ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಬಗ್ಗೆ ಬಿಜೆಪಿ ಉತ್ಸುಕವಾಗಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ಚುನಾವಣಾ ಸಮಿತಿ ಸಭೆಯಲ್ಲಿ ದೇವೇಗೌಡರ ವಿಚಾರ ಕೂಡ ಪ್ರಸ್ತಾಪವಾಗಿದೆ. ದೇವೇಗೌಡರು ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ ಎಂದು ಖುದ್ದು ಪ್ರಧಾನಿ ಮೋದಿಯೇ ವಿಚಾರಿಸಿದ್ದಾರೆ ಎನ್ನಲಾಗಿದೆ. ಬೆಂಗಳೂರು ಉತ್ತರ, ತುಮಕೂರು ಕ್ಷೇತ್ರದಿಂದ ಅವರು ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ರಾಜ್ಯ ನಾಯಕರು ತಿಳಿಸಿದ್ದಾರೆ. ಈ ವೇಳೆ ಅವರನ್ನು ಸೋಲಿಸುವ ತಂತ್ರದ ಬಗ್ಗೆ ಕೂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮಾಹಿತಿ ಕೇಳಿದ್ದಾರೆ.
ದೇವೇಗೌಡರು ಎಲ್ಲಿಂದ ನಿಂತರೂ ಅವರನ್ನು ಮಣಿಸಲೇಬೇಕು. ಅವರ ವಿರುದ್ಧ ಪ್ರಬಲ ಸ್ಪರ್ಧಿ ಹಾಕಿ, ಪ್ರಚಾರ ನಡೆಸುವಂತೆ ಕಟ್ಟಪ್ಪಣೆ ಮಾಡಿದ್ದಾರೆ. ಇನ್ನು ಬೆಂಗಳೂರು ಉತ್ತರದ ಅಭ್ಯರ್ಥಿ ಸದಾನಂದಗೌಡ ಸಭೆಗೆ ಏಕೆ ಬಂದಿಲ್ಲವೆಂದು ಮೋದಿ ಪ್ರಶ್ನಿಸಿದ್ದಾರೆ. ಈ ವೇಳೆ ಅವರು ಅನುಮತಿ ಪಡೆದು ಬೆಂಗಳೂರಿಗೆ ತೆರಳಿದ್ದಾರೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಬೆಂಗಳೂರು ಉತ್ತರದ ಸಂಸದರಾಗಿರುವ ಸದಾನಂದ ಗೌಡ ದೇವೇಗೌಡ ಅವರು ಎದುರಾಳಿಯಾಗಿ ನಿಂತರೆ ಸೋಲಿಸುತ್ತಾರಾ ಎಂಬ ಪ್ರಶ್ನೆ ಕೂಡ ಪ್ರಧಾನಿಯಲ್ಲಿ ಮೂಡಿದೆ ಎನ್ನಲಾಗಿದೆ. ಈ ವೇಳೆ ಸದಾನಂದಗೌಡ ಅವರ ಬಗ್ಗೆ ರಾಜ್ಯ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದು, ಕ್ಷೇತ್ರ ಹಲವು ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿದೆ ಎಂದು ಮನವರಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ವೇಳೆ ತುಮಕೂರು ಕ್ಷೇತ್ರದ ಬಗ್ಗೆ ಕೂಡ ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರಧಾನಿ ಚರ್ಚಿಸಿದ್ದಾರೆ. ತುಮಕೂರಿನಲ್ಲಿ ಪ್ರಬಲ ಬಿಜೆಪಿ ಅಭ್ಯರ್ಥಿ ಇಲ್ಲದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಲಿ ಸಂಸದ ಮುದ್ದಹನುಮೇಗೌಡ ಅವರನ್ನು ಪಕ್ಷಕ್ಕೆ ಕರೆ ತರುವ ಬಗ್ಗೆ ಕೂಡ ಮಾತು ಕೇಳಿ ಬಂದಿದೆ. ತುಮಕೂರು ಕ್ಷೇತ್ರ ಜೆಡಿಎಸ್ ಪಾಲಾಗಿರುವ ಹಿನ್ನೆಲೆ ಮುದ್ದಹನುಮೇಗೌಡಗೆ ಈ ಬಾರಿ ಟಿಕೆಟ್ ಸಿಗುವುದು ಕಷ್ಟವಾಗಿದೆ, ಈ ಹಿನ್ನೆಲೆಯಲ್ಲಿ ಅವರ ಮನವೊಲಿಸುವಂತೆ ಕೂಡ ತಿಳಿಸಿದರು. ಈ ಕಾರ್ಯ ಈಗಾಗಲೇ ನಡೆದಿದ್ದು, ಡಿಸಿಎಂ ಪರಮೇಶ್ವರ್ ಆಪ್ತರಾಗಿರುವ ಅವರು ತಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲವೆಂದು ಹೇಳಿದ್ದಾರೆ.
ಇನ್ನು ಕ್ಷೇತ್ರ ಬಿಟ್ಟುಕೊಡುವಂತೆ ಡಿಸಿಎಂ ಪ್ರಯತ್ನ ಮಾಡುತ್ತಲೆ ಇರುವ ಹಿನ್ನೆಲೆಯಲ್ಲಿ ಕಾದು ನೋಡುವ ತಂತ್ರ ಅನುಸರಿಸಿ. ಜೆಡಿಎಸ್ಗೆ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಇಲ್ಲದ ಕಾರಣ ಅವರು ಟಿಕೆಟ್ ಆಸೆಗಾಗಿ ಕಡೆ ಗಳಿಗೆಯಲ್ಲಿ ಬರುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಸತತವಾಗಿ ಅವರ ಮನವೊಲಿಕೆಗೆ ಮುಂದಾಗಿ ಎಂಬ ಸೂಚನೆ ನೀಡಲಾಗಿದೆ ಎನ್ನಲಾಗಿದೆ.
Comments are closed.