ಕರ್ನಾಟಕ

ಬಿಗ್ ಲೀಡರ್ ಬಿಟ್ಟು ಗುಬ್ಬಿ ಮೇಲೆ ಕಾಂಗ್ರೆಸ್ ಬ್ರಹ್ಮಾಸ್ತ್ರ: ಮಂಡ್ಯ ರಾಜಕಾರಣದಲ್ಲಿ ಸುಮಲತಾ ಪರ ನಿಂತವರ ಮೇಲೆ ಶಿಸ್ತು ಕ್ರಮ

Pinterest LinkedIn Tumblr


ಬೆಂಗಳೂರು: ಮಂಡ್ಯ ಲೋಕಸಭಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಒಂದು ಕಡೆ ನಿಖಿಲ್ ಕುಮಾರಸ್ವಾಮಿ ಅಬ್ಬರ ಪ್ರಚಾರ ಮಾಡುತ್ತಿದರೆ, ಮತ್ತೊಂದೆಡೆ ಸುಮಲತಾ ಕೂಡ ಮತ ಬೇಟೆಗಿಳಿದಿದ್ದಾರೆ.

ಈ ಮಧ್ಯೆ ಸುಮಲತಾ ಅಂಬರೀಶ್ ಅವರಿಗೆ ಕೆಲ ಕಾಂಗ್ರೆಸ್ ನಾಯಕರು ಬೆಂಬಲ ನೀಡುತ್ತಿರುವುದರಿಂದ ದಳಪತಿಗಳ ಕಣ್ಣು ಕೆಂಪಾಗಿಸಿದೆ. ಈ ಹಿನ್ನಲೆಯಲ್ಲಿ ಮಂಡ್ಯ ಕಾಂಗ್ರೆಸ್ ಅನ್ನು ಹದ್ದುಬಸ್ತಿನಲ್ಲಿಡುವಂತೆ ಕುಮಾರಸ್ವಾಮಿ ಅವರು ಡಿ.ಕೆ.ಶಿವಕುಮಾರ್ ಮೊರೆ ಹೋಗಿದ್ದಾರೆ.

ಇದ್ರಿಂದ ಮಂಡ್ಯ ಅಖಾಡಕ್ಕಿಳಿದಿರುವ ಡಿಕೆಶಿ, ಕಾಂಗ್ರೆಸ್ ನಾಯಕರನ್ನು ಮನವೋಲಿಸುವ ಕೆಲಸ ಮಾಡುತ್ತಿದ್ದಾರೆ. ಇದರ ನಡುವೆ ಕೆಪಿಸಿಸಿ ಸದಸ್ಯನನ್ನು ಕಾಂಗ್ರೆಸ್ ನಿಂದ ಉಚ್ಚಾಟಿಸುವ ಮೂಲಕ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್​ಗೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಅಂಬರೀಶ್ ಹಾಗೂ ಸಚಿವ ಎಂ.ಬಿ.ಪಾಟೀಲ್ ಆಪ್ತ ಎಂದೇ ಗುರುತಿಸಿಕೊಂಡಿರುವ ಸಚ್ಚಿದಾನಂದರನ್ನು ಕೆಪಿಸಿಸಿ ಸದಸ್ಯ ಸ್ಥಾನದಿಂದ ಉಚ್ಚಾಟನೆ ಮಾಡಲಾಗಿದೆ.

ಮೈತ್ರಿ ಹಿನ್ನೆಲೆ ಕಾಂಗ್ರೆಸ್,​ ಮಂಡ್ಯ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟಿದೆ. ಅಲ್ಲದೇ, ದೋಸ್ತಿ ಅಭ್ಯರ್ಥಿಯಾಗಿ ನಿಖಿಲ್​ ಕುಮಾರಸ್ವಾಮಿ ಅಖಾಡಕ್ಕಿಳಿದಿದ್ದಾರೆ. ಈ ಹಿನ್ನೆಲೆ ಕಾಂಗ್ರೆಸ್​​ ಹೈಕಮಾಂಡ್​ ನಿಖಿಲ್​ ಕುಮಾರಸ್ವಾಮಿಗೆ ಬೆಂಬಲಿಸುವಂತೆ ಹೇಳಿತ್ತು.

ಆದ್ರೆ ಕಾಂಗ್ರೆಸ್​ ಕಾರ್ಯಕರ್ತ ಸಚ್ಚಿದಾನಂದ ಬಹಿರಂಗವಾಗಿಯೇ ಸುಮಲತಾ ಅಂಬರೀಶ್​ಗೆ ಬೆಂಬಲ ನೀಡುತ್ತಿದ್ದಾರೆ. ಇದ್ರಿಂದ ಕೆಪಿಸಿಸಿ ಕಚೇರಿಯಿಂದ ನೊಟೀಸ್​ ನೀಡಲಾಗಿತ್ತು.

ಆದ್ರೂ ಕೂಡಾ ಸಚ್ಚಿದಾನಂದ ತಮ್ಮ ನಿರ್ಧಾರ ಬದಲಿಸದೇ ಸುಮಲತಾ ಅವರ ಬೆಂಬಲಕ್ಕೆ ನಿಂತಿದ್ದಾರೆ. ಈ ಹಿನ್ನೆಲೆ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ವೈ. ಘೋರ್ಪಡೆ ಸಚ್ಚಿದಾನಂದರನ್ನು ಉಚ್ಚಾಟನೆ ಮಾಡಿ ಆದೇಶಿಸಿದ್ದಾರೆ.

ರಮೇಶ್ ಬಂಡಿಸಿದ್ದೇಗೌಡ, ಚಲುವರಾಯ ಸ್ವಾಮಿ ಅವರಂತಹ ದೊಡ್ಡ ಲೀಡರ್ ವಿರುದ್ಧ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಹಿಂದೇಟು ಹಾಕಿದ್ದು, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದೆ.

Comments are closed.