ಕರಾವಳಿ

‘ಯುವ ಮನಸ್ಸುಗಳಿಗೆ ಕಡಿವಾಣವಿರಲಿ’ : ವಿದ್ಯಾರ್ಥಿಗಳಿಗೆ ಪ್ರೋ. ಭಾಸ್ಕರ ರೈ ಕುಕ್ಕುವಳ್ಳಿ ಕರೆ

Pinterest LinkedIn Tumblr

ಮಂಗಳೂರು: ‘ ಬದಲಾಗುತ್ತಿರುವ ಸಾಮಾಜಿಕ ಪರಿಸರದಲ್ಲಿ ಯುವಜನರು ಸ್ವಯಂ ಶಿಸ್ತಿನಿಂದ ಕಾರ್ಯವೆಸಗಬೇಕಾಗಿದೆ. ಎಲ್ಲೆಂದರಲ್ಲಿ ಹರಿದುಹೋಗುವ ಯುವ ಮನಸ್ಸುಗಳಿಗೆ ಕಡಿವಾಣ ಅಗತ್ಯ. ತರುಣ ತರುಣಿಯರು ಆಧುನಿಕತೆಯ ಸೋಗಿನಲ್ಲಿ ತಮ್ಮನ್ನು ನಂಬಿದವರು ತಲೆತಗ್ಗಿಸುವಂತೆ ಮಾಡಬಾರದು ‘ ಎಂದು ಕರ್ನಾಟಕ ಜಾನಪದ, ಯಕ್ಷಗಾನ ಹಾಗೂ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ದೇರಳಕಟ್ಟೆ ಕ್ಷೇಮ ಸಭಾಂಗಣದಲ್ಲಿ ಜರಗಿದ ನಿಟ್ಟೆ ವಿಶ್ವವಿದ್ಯಾನಿಲಯದ ಎನ್.ಜಿ.ಸಿ.ಎಂ. ಫಾರ್ಮಾಸ್ಯುಟಿಕಲ್ ಕಾಲೇಜಿನ 36 ನೇ ವಾರ್ಷಿಕೋತ್ಸವದ ಮುಖ್ಯ ಅತಿಥಿಗಳಾಗಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣದೊಂದಿಗೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಚಟುವಟಿಕೆಗಳಿದ್ದಾಗ ವಿದ್ಯಾರ್ಥಿಗಳು ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು’ ಎಂದವರು ನುಡಿದರು. ಇದೇ ಸಂದರ್ಭದಲ್ಲಿ ‘ಅಂತರಾಳ-2019’ ವಾರ್ಷಿಕ ಸಂಚಿಕೆಯನ್ನು ಭಾಸ್ಕರ ರೈ ಕುಕ್ಕುವಳ್ಳಿ ಬಿಡುಗಡೆಗೊಳಿಸಿದರು.ನಿಟ್ಟೆ ವಿಶ್ವವಿದ್ಯಾನಿಲಯದ ಸಹ ಉಪಕುಲಪತಿ ಡಾ‌.ಎಂ.ಎಸ್.ಮೂಡಿತ್ತಾಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಎಸ್.ಶಾಸ್ತ್ರಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸಂಸ್ಥೆಯ ವರದಿಯನ್ನು ಮಂಡಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನಯ್ ಪ್ರಭು ವಾರ್ಷಿಕ ಕಾರ್ಯಕ್ರಮಗಳ ವರದಿ ನೀಡಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅತಿಥಿಗಳು ಬಹುಮಾನ ವಿತರಣೆ ಮಾಡಿದರು. ಉಪ ಪ್ರಾಂಶುಪಾಲ ಡಾ.ಆರ್.ನಾರಾಯಣ್ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಧನುಶ್ರೀ ವಂದಿಸಿದರು. ಸಾಂಸ್ಕೃತಿಕ ಸಮನ್ವಯಾಧಿಕಾರಿ ಡಾ.ಸ್ನೇಹಪ್ರಿಯಾ ನೇತ್ರತ್ವದಲ್ಲಿ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರಗಿದವು.

Comments are closed.