ರಾಷ್ಟ್ರೀಯ

ಟಿಕೆಟ್​ ನೀಡದ್ದಕ್ಕೆ ಕಾಂಗ್ರೆಸ್​ ಶಾಸಕ ಮಾಡಿದ್ದೇನು ಗೊತ್ತಾ?

Pinterest LinkedIn Tumblr


ಔರಂಗಾಬಾದ್​ : ಚುನಾವಣೆ ಎಂದಮೇಲೆ ಒಂದು ಪಕ್ಷದಿಂದ ಆಕಾಂಕ್ಷಿಗಳ ಪಟ್ಟಿ ದೊಡ್ಡದೇ ಇರುತ್ತದೆ. ತನಗೆ ಟಿಕೆಟ್​ ಸಿಗಲಿಲ್ಲ ಎಂಬ ಅಸಮಾಧಾನದಿಂದ ಬೇರೆ ಪಕ್ಷಕ್ಕೆ ಹೋದವರನ್ನು ನೋಡಿದ್ದೇವೆ, ಬಹಿರಂಗವಾಗಿ ತಮ್ಮ ಬಂಡಾಯವನ್ನು ಹೊರಹಾಕುವವರನ್ನು ನೋಡಿದ್ದೇವೆ, ಚುನಾವಣಾ ಪ್ರಚಾರಕ್ಕೆ ಬಾರದೆ ಮನೆಯೊಳಗೇ ಕೂರುವವರನ್ನೂ ನೋಡಿದ್ದೇವೆ. ಆದರೆ, ಮಹಾರಾಷ್ಟ್ರದ ಕಾಂಗ್ರೆಸ್​ ಶಾಸಕ ಕುರ್ಚಿಗಳನ್ನೇ ಎತ್ತಿಕೊಂಡು ಹೋಗಿದ್ದಾರೆ.

ಲೋಕಸಭಾ ಚುನಾವಣೆಗೆ ತನಗೆ ಟಿಕೆಟ್ ನೀಡಲಿಲ್ಲ ಎಂದು ಅಸಮಾಧಾನಗೊಂಡ ಕಾಂಗ್ರೆಸ್​ ಶಾಸಕ ಅಬ್ದುಲ್ ಸತ್ತಾರ್​ ನಿನ್ನೆ ತನ್ನ ಪ್ರಾದೇಶಿಕ ಕಚೇರಿಯ 300 ಕುರ್ಚಿಗಳು ಸೇರಿದಂತೆ ತಾನು ಕೂರುತ್ತಿದ್ದ ಕುರ್ಚಿಯನ್ನೂ ಎತ್ತಿಕೊಂಡು ಹೋಗಿದ್ದಾರೆ!

ತನ್ನ ಬೆಂಬಲಿಗರೊಂದಿಗೆ ಕಚೇರಿಯಲ್ಲಿದ್ದ ಕುರ್ಚಿಗಳನ್ನು ಎತ್ತಿಕೊಂಡು ಹೋಗಿರುವ ಮಹಾರಾಷ್ಟ್ರದ ಸಿಲ್ಲೋದ್​ ಕ್ಷೇತ್ರದ ಕಾಂಗ್ರೆಸ್​ ಶಾಸಕ ಅಬ್ದುಲ್ ಸತ್ತಾರ್​, ನನಗೆ ಟಿಕೆಟ್​ ನೀಡಿದಿರುವ ಹಿನ್ನೆಲೆಯಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ನನಗೆ ಸೇರಿದ ಕುರ್ಚಿಗಳನ್ನೂ ತೆಗೆದುಕೊಂಡು ಹೋಗಿದ್ದೇನೆ. ಅದರಲ್ಲಿ ತಪ್ಪೇನಿದೆ? ಎಂದಿದ್ದಾರೆ.

ಸತ್ತಾರ್​ ಕಾಂಗ್ರೆಸ್​ಗೆ ರಾಜೀನಾಮೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಎನ್​ಸಿಪಿ ಜೊತೆಗೆ ಕಾಂಗ್ರೆಸ್​ ಜಂಟಿ ಸಭೆ ನಡೆಸಿದೆ. ಸಿಲ್ಲೋದ್​ನ ಪ್ರಭಾವಿ ನಾಯಕರಾಗಿರುವ ಸತ್ತಾರ್​ ರಾಜೀನಾಮೆ ನೀಡಿರುವುದರಿಂದ ಪಕ್ಷಕ್ಕೆ ಹೊಡೆತ ಬಿದ್ದಂತಾಗಿದೆ. ಈ ಕ್ಷೇತ್ರದಲ್ಲಿ ಎಂಎಲ್​ಸಿ ಸುಭಾಷ್​ ಜಂಬದ್ ಅವರನ್ನು ಕಾಂಗ್ರೆಸ್​ ಕಣಕ್ಕಿಳಿಸಿರುವುದರಿಂದ ಸತ್ತಾರ್​ ಅಸಮಾಧಾನಗೊಂಡಿದ್ದರು.

Comments are closed.