ಬೆಂಗಳೂರು: ‘ದಾಮಾಯಣ’ ಎಂಬ ಕನ್ನಡ ಸಿನೆಮಾವೊಂದು ತನ್ನ ಹೆಸರಿನಿಂದಲೇ ಬಹಳಷ್ಟು ಸುದ್ದಿ ಮಾಡುತ್ತಿದೆ. ಹೆಸರಿನಷ್ಟೇ ವಿಶೇಷವಾದ ಕಥೆಯಿರುವ ಚಲನಚಿತ್ರದ ಮೇಲೆ ಸಿನಿ ಪ್ರಿಯರು ತುಂಬು ನಿರೀಕ್ಷೆ ಹೊಂದಿದ್ದಾರೆ. ಇದೇ ದಾಮಾಯಣದ ನಾಯಕಿಯ ಪಾತ್ರದ ಆಯ್ಕೆಯ ಹಿಂದೆಯೂ ಇದೆ ಒಂದು ಇಂಟರೆಸ್ಟಿಂಗ್ ಕಥೆ.
ಚಲನಚಿತ್ರದಲ್ಲಿನ ಕಥೆಯ ನಿರೂಪಣೆಯಲ್ಲಿ ಪಾತ್ರಧಾರಿಗಳು ಮುಖ್ಯವಾಗುತ್ತಾರೆ. ದಾಮಾಯಣದಲ್ಲಿ ಹೊಸತನ ತರಬೇಕು ಎನ್ನುವ ದೃಷ್ಟಿಯಿಂದ ತಂಡ ಬಹುತೇಕ ಎಲ್ಲಾ ಪಾತ್ರಗಳಿಗೂ ಹೊಸ ಮುಖಗಳನ್ನೇ ಹುಡುಕುತ್ತಿತ್ತು. ಆನ್ ಲೈನ್ ಮೂಲಕ ಪಾತ್ರಗಳ ಆಡಿಷನ್ ನಡೆಸಿತ್ತು. ಚಿತ್ರತಂಡದ ಮುಂದಿದ್ದ ಮುನ್ನೂರಕ್ಕೂ ಹೆಚ್ಚು ಆಡಿಷನ್ ವೀಡಿಯೋಗಳಲ್ಲಿ ದಾಮಾಯಣದ ನಾಯಕಿ ಅನಘ ಅವರ ಆಡಿಷನ್ ವೀಡಿಯೋ ಕೂಡ ಒಂದು. ಆದರೆ, ಅನಘ ನೀಡಿದ್ದ ಆಡಿಷನ್ ತಂಗಿಯ ಪಾತ್ರಕ್ಕೆ!
ಅನಘ ಉಜಿರೆಯ ಎಸ್.ಡಿ.ಎಮ್ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದ ಹುಡುಗಿ. ವೃತ್ತಿ ಮುಂದುವರಿಸಿದ್ದು ಮಾತ್ರ ಬೆಂಗಳೂರಿನಲ್ಲಿ ವೆಡ್ಡಿಂಗ್ ಪ್ಲಾನರ್ ಆಗಿ. ಜೀವನದಲ್ಲಿ ಹೊಸ ಅನುಭವಗಳು ಮುಖ್ಯ ಎಂದು ನಂಬುವ ಅನಘ ಫೇಸ್ ಬುಕ್ ನಲ್ಲಿ ಕಂಡ ಆಡಿಷನ್ ಕುರಿತ ಮಾಹಿತಿಯ ಬಗ್ಗೆ ಆಸಕ್ತಿ ತೋರಿ ದಾಮಾಯಣ ಚಿತ್ರ ತಂಡವನ್ನು ಸಂಪರ್ಕಿಸಿದ್ದಾರೆ. ತಂಗಿಯ ಪಾತ್ರದ ಸಂಭಾಷಣೆ ಪಡೆದು ಆಡಿಷನ್ ನೀಡಿದ್ದಾರೆ.
ದಾಮಾಯಣದ ನಿರ್ದೇಶಕ ಶ್ರೀಮುಖ, ಸಹ ನಿರ್ದೇಶಕ ಅಕ್ಷಯ್ ರೇವಣ್ಕರ್ ಆಡಿಷನ್ ನಡೆಸುತ್ತಿದ್ದರು. ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಪ್ರಣೀತ್ ಎಮ್.ಬಿ. ಹೊತ್ತಿದ್ದರು. ಅನಘರವರ ಅಭಿನಯ ತಂಡದ ಗಮನ ಸೆಳೆದಿತ್ತು. ತಂಗಿಯ ಪಾತ್ರದ ಮುಂದೆ ಅನಘರವರ ಹೆಸರು ಬರೆದದ್ದೂ ಆಗಿತ್ತು.
ನಾಯಕಿಯ ಆಡಿಷನ್ ನಡೆಯುವ ಸಂದರ್ಭದಲ್ಲಿ ಅನಘರವರ ಹೆಸರು ಮತ್ತೆ ಪ್ರಸ್ತಾಪಕ್ಕೆ ಬಂತು, ಅನಘ ಅವರಿಗೆ ನಾಯಕಿ ಪಾತ್ರದ ಸಂಭಾಷಣೆ ಕೊಟ್ಟು ನೋಡೋಣ ಎಂದು ತಂಡಕ್ಕೆ ಮೇಲ್ವಿಚಾರಕ ಪ್ರಣೀತ್ ಸಲಹೆ ನೀಡಿದ್ದಾರೆ. ಕೊಟ್ಟ ಅವಕಾಶವನ್ನು ಸರಿಯಾಗಿಯೇ ಬಳಸಿದ ಅನಘ ತಮ್ಮ ಪ್ರತಿಭೆಯನ್ನು ನಿರೂಪಿಸಿಯೇ ಬಿಟ್ಟಿದ್ದರು.
ಪಾತ್ರದ ಕುರಿತ ಹೆಚ್ಚೇನು ಗುಟ್ಟು ಬಿಟ್ಟು ಕೊಡದ ನಿರ್ದೇಶಕ ಶ್ರೀಮುಖ, ಪಾತ್ರಕ್ಕೆ ನಟನೆಯೇ ಮಾನದಂಡವಾಗಿತ್ತು. ಪಾತ್ರದ ಲಕ್ಷಣಗಳನ್ನೂ ಅನಘ ಹೋಲುತ್ತಿದ್ದರು. ಅವರ ಆಯ್ಕೆಯನ್ನು ಚಿತ್ರದಲ್ಲಿ ಅವರು ಪ್ರಾಮಾಣಿಕವಾಗಿ ನಿರೂಪಿಸಿದ್ದಾರೆ ಎಂದರು. ಸದ್ಯಕ್ಕೆ ಚಿತ್ರತಂಡ ಕೊನೆಯ ಹಂತದ ನಿರ್ಮಾಣ ಕಾರ್ಯ ನಡೆಸುತ್ತಿದ್ದು, ಜೊತೆಗೆ ಪೋಸ್ಟರ್ ಬಿಡುಗಡೆಯ ತಯಾರಿಯನ್ನೂ ಮಾಡುತ್ತಿದೆ.
Comments are closed.