ಹಾಸನ: ಮೈತ್ರಿ ಮೂಲಕ ಚುನಾವಣೆ ಎದುರಿಸುತ್ತಿರುವ ದೇವೇಗೌಡರು ತಮ್ಮ ಮೊಮ್ಮಕ್ಕಳಿಗೆ ರಾಜಕೀಯದಲ್ಲಿ ನೆಲೆಯೊದಗಿಸಲು ಮುಂದಾಗಿದ್ದಾರೆ. ಆದರೆ, ಜೆಡಿಎಸ್ನ ಈ ನಡೆ ಹಲವು ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಗುರಿಯಾಗಿದೆ. ಮೈತ್ರಿ ಅಭ್ಯರ್ಥಿಗಳಾದ ಪ್ರಜ್ವಲ್ ಹಾಗೂ ನಿಖಿಲ್ ಬೆಂಬಲಿಸಲು ಕೆಲ ಕಾಂಗ್ರೆಸ್ ನಾಯಕರು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಕಣಕ್ಕೆ ಇಳಿಸಿದ್ದರಿಂದ ಸಿಟ್ಟಾದ ಕ್ಷೇತ್ರದ ಪ್ರಭಾವಿ ನಾಯಕ ಎ. ಮಂಜು ಈಗಾಗಲೇ ಪಕ್ಷ ತೊರೆದಿದ್ದು, ಅವರ ವಿರುದ್ಧವೇ ಕಣಕ್ಕೆ ಇಳಿದಿದ್ದಾರೆ. ಆದರೂ ಕೂಡ ಕಾಂಗ್ರೆಸ್ನ ಹಲವು ಮುಖಂಡರಲ್ಲಿ ಕೈ ನಾಯಕರ ವಿರುದ್ಧ ಅಸಮಾಧಾನ ಇನ್ನು ಶಮನವಾಗಿಲ್ಲ.
ಅರಸೀಕೆರೆ ಬಳಿಕ ಬೇಲೂರಿನಲ್ಲಿ ಕೈ ಗಲಾಟೆ
ಮೈತ್ರಿ ಮುಖಂಡರನ್ನು ಈಗಾಗಲೇ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿರುವ ರೇವಣ್ಣ ಬ್ರೇಕ್ ಫಾಸ್ಟ್ ರಾಜಕೀಯ ಪ್ರಮುಖ ನಾಯಕರ ಓಲೈಕೆ ಮಾಡಿದ್ದಾರೆ. ಆದರೆ, ಕಾರ್ಯಕರ್ತರಿಗೆ ಮಾತ್ರ ಅವರ ಮೇಲಿನ ಮುನಿಸು ಕಡಿಮೆಯಾಗುತ್ತಿಲ್ಲ. ನಿನ್ನೆ ಅರಸೀಕರೆಯಲ್ಲಿ ಜೆಡಿಎಸ್ ನಾಯಕರ ಬಗ್ಗೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇಂದು ಬೇಲೂರಿನಲ್ಲಿಯೂ ಅದೇ ರೀತಿ ಪರಿಸ್ಥಿತಿ ನಿರ್ಮಾಣವಾಗಿದೆ.
ಬೇಲೂರಿನ ಒಕ್ಕಲಿಗರ ಭವನದಲ್ಲಿ ನಡೆದ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ಸಭೆ ವೇಳೆ ನಾಯಕರ ಎದುರೇ ಆಕ್ರೋಶ ಭುಗಿಲೆದ್ದಿದೆ. ಮಾಜಿ ಸಚಿವ ಬಿ.ಶಿವರಾಂ, ಎಂ.ಎಲ್.ಸಿ. ಗೋಪಾಲಸ್ವಾಮಿ ಸಮ್ಮುಖದಲ್ಲೇ ಒಳಬೇಗುದಿ ವ್ಯಕ್ತಪಡಿಸಿದ ಕೈ ಕಾರ್ಯಕರ್ತರು, ಸಮ್ಮಿಶ್ರ ಸರಕಾರವಿದ್ದರೂ ನಮ್ಮನ್ನು ತುಳಿಯುತ್ತಿದ್ದಾರೆ. ಅಂಥವರಿಗೆ ನಾವು ಮತ ಹಾಕೋದು ಹೇಗೆಂದು ಗರಂ ಆದರು.
ನಾಯಕರ ಸಮ್ಮುಖದಲ್ಲೇ ಕುರ್ಚಿ ಎಸೆದು ಸಿಟ್ಟು ಹೊರಹಾಕಿದ ಕಾರ್ಯಕರ್ತರು ಚುನಾವಣಾ ಅಭ್ಯರ್ಥಿ ಪ್ರಜ್ವಲ್ ಹಾಗೂ ಸಚಿವ ರೇವಣ್ಣ ವಿರುದ್ಧ ಘೋಷಣೆ ಕೂಗಿದರು. ಸಿಟ್ಟಾದವರನ್ನು ಸಮಾಧಾನ ಪಡಿಸಲು ನಾಯಕರು ಹರಸಾಹಸ ನಡೆಸಿದರು ವಿಫಲರಾದರು. ಈ ವೇಳೆ ಕೆಲ ಕಾಂಗ್ರೆಸ್ ಕಾರ್ಯಕರ್ತರು ಸಭೆಯಿಂದ ಹೊರನಡೆದಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಭುಗಿಲೆದ್ದ ಆಕ್ರೋಶ
ಮಂಡ್ಯ ಅಭ್ಯರ್ಥಿ ನಿಖಿಲ್ಗೆ ಬೆಂಬಲಿಸುವಂತೆ ಕಾಂಗ್ರೆಸ್ ನಾಯಕರು ಕರೆದ ಸಭೆಯಲ್ಲಿ ಕೂಡ ಅಪಸ್ವರ ಕೇಳಿ ಬಂದಿದೆ. ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಮೇಶ್ ಬಂಡಿಸಿದ್ದೇಗೌಡ ಗೈರಾಗುವ ಮೂಲಕ ಅತೃಪ್ತಿ ಹೊರಹಾಕಿದರು.
ಇನ್ನು ಸಭೆಯಲ್ಲಿ ಹಾಜರಿದ್ದ ಕಾರ್ಯಕರ್ತರು, ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುವ ಕುರಿತು ಸೂಚನೆ ನೀಡಿದಾಗ ಯಾವುದೇ ಕಾರಣಕ್ಕೂ ಬೆಂಬಲ ನೀಡಲ್ಲ ಎಂದು ಸ್ಪಷ್ಟಪಡಿಸಿದರು. ಜಿಲ್ಲೆಯಲ್ಲಿ ಜೆಡಿಎಸ್ ನಾಯಕರು ದೌರ್ಜನ್ಯ ಮಾಡುತ್ತಿದ್ದಾರೆ. ನಾವೇಕೆ ಅವರನ್ನು ಬೆಂಬಲಿಸಬೇಕು. ನಮ್ಮ ಬೆಂಬಲ ಸ್ವಾಭಿಮಾನಿ ಸುಮಲತಾಗೆ ಎಂದು ಸಭೆ ಮೊಟಕುಗೊಳಿಸಿ ಅರ್ಥದಲ್ಲಿಯೇ ಎದ್ದುಹೋದರು.
ಇನ್ನೇನು ಚುನಾವಣೆಗೆ ದಿನಗಣನೆ ಶುರುವಾಗಿರುವ ಸಮಯದಲ್ಲಿ ವ್ಯಕ್ತವಾಗುತ್ತಿರುವ ಈ ಅಸಮಾಧಾನಗಳು ಅಭ್ಯರ್ಥಿಗಳ ವರ್ಚಸ್ಸಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಂಡು ಬಂದಿದೆ.
Comments are closed.