ಕರ್ನಾಟಕ

ನಿಖಿಲ್ ಪ್ರಮಾಣಪತ್ರದಲ್ಲಿ ಸುಳ್ಳು ಮಾಹಿತಿ – ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಆರೋಪ

Pinterest LinkedIn Tumblr


ಮಂಡ್ಯ: ಚುನಾವಣಾ ಆಯೋಗಕ್ಕೆ ನಿಖಿಲ್ ಕುಮಾರಸ್ವಾಮಿ ಸಲ್ಲಿಸಿದ ನಾಮಪತ್ರದಲ್ಲಿ ಯಡವಟ್ಟಾಗಿದೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರು ಈಗಾಗಲೇ ದೂರು ನೀಡಿದ್ದಾರೆ. ಈ ಸಂದರ್ಭದಲ್ಲೇ ಸಾಮಾಜಿಕ ಕಾರ್ಯಕರ್ತರ ಟಿ.ಜೆ. ಅಬ್ರಹಾಂ ಅವರು ನಿಖಿಲ್ ಕುಮಾರಸ್ವಾಮಿ ಅವರ ಪ್ರಮಾಣ ಪತ್ರದಲ್ಲಿ ಇನ್ನಷ್ಟು ದೋಷವನ್ನು ಎತ್ತಿಹಿಡಿದಿದ್ದಾರೆ. ಹಾಗೆಯೇ, ದೇವೇಗೌಡರ ಕುಟುಂದವರು ತಮ್ಮನ್ನು ನಂಬಿದ ಜನಸಾಮಾನ್ಯರಿಗೆ ವಿಶ್ವಾಸ ದ್ರೋಹ ಎಸಗಿದ್ದಾರೆ. ಅವರಿಗೆ ಯಾವ ಕಾರಣಕ್ಕೂ ವೋಟ್ ಹಾಕಬೇಡಿ ಎಂದು ಅಬ್ರಹಾಂ ಮನವಿ ಮಾಡಿದ್ದಾರೆ.

ನಿಖಿಲ್ ಕಮಾರಸ್ವಾಮಿ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಸುಳ್ಳುಗಳಿವೆ. ಮೈರೀಡ್ ಮಾರ್ಕೆಟಿಂಗ್ ಎಂಬ ಸಂಸ್ಥೆಯಿಂದ 50 ಲಕ್ಷ ರೂ ಸಾಲ ಪಡೆದಿರುವುದಾಗಿ ಅಫಿಡವಿಟ್​ನಲ್ಲಿ ನಮೂದಿಸಲಾಗಿದೆ. ಆದರೆ, ಅಂಥದ್ದೊಂದು ಸಂಸ್ಥೆಯೇ ಅಸ್ತಿತ್ವದಲ್ಲಿಲ್ಲ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಟಿ.ಜೆ. ಅಬ್ರಹಾಂ ಆಗ್ರಹಿಸಿದ್ದಾರೆ.

ಹಾಗೆಯೇ, ಫಿಜ್ಹಾ ಡೆಲಪರ್ಸ್ ಸಂಸ್ಥೆಯಿಂದ 11 ಕೋಟಿ ರೂ ಮುಂಗಡ ಪಡೆದುಕೊಂಡಿರುವುದಾಗಿ ನಿಖಿಲ್ ಪ್ರಸ್ತಾಪಿಸಿದ್ದಾರೆ. ಆದರೆ, ಯಾವ ಭೂಮಿಯನ್ನು ಪರಭಾರೆ ಮಾಡಲು ಮುಂಗಡ ಹಣ ಪಡೆದಿದ್ದಾರೆ? ಈ ಫಿಜ್ಹಾ ಡೆವಲಪರ್ಸ್ ಸಂಸ್ಥೆಯ ಅಧಿಕೃತ ಬಂಡವಾಳ ಕೇವಲ 10 ಕೋಟಿ ಮಾತ್ರ. ಕಂಪನಿಯ ನಗದು ವಹಿವಾಟು ಇರುವುದು ಕೇವಲ 8.5 ಕೋಟಿ ಮಾತ್ರವೇ. ಈ ಕಂಪನಿಯಿಂದ ನಿಖಿಲ್ ಕುಮಾರಸ್ವಾಮಿ 11 ಕೋಟಿ ಹೇಗೆ ಪಡೆಯಲು ಸಾಧ್ಯ? ಈ ಬಗ್ಗೆ ತನಿಖೆಯಾಗಬೇಕು ಎಂದೂ ಸಾಮಾಜಿಕ ಕಾರ್ಯಕರ್ತ ಅಬ್ರಹಾಂ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

ನಿಖಿಲ್ ವಿರುದ್ಧ ಅಬ್ರಹಾಂ ಆರೋಪಿಸಿರುವ 2 ಅಂಶಗಳು:
1) ನಿಖಿಲ್ 50 ಲಕ್ಷ ಸಾಲ ಪಡೆದಿರುವ ಮೈರೀಡ್ ಮಾರ್ಕೆಟಿಂಗ್ ಸಂಸ್ಥೆ ಅಸ್ತಿತ್ವದಲ್ಲೇ ಇಲ್ಲ
2) ನಿಖಿಲ್​ಗೆ 11 ಕೋಟಿ ಅಡ್ವಾನ್ಸ್ ನೀಡಿರುವ ಫಿಜ್ಹಾ ಡೆವಲಪರ್ಸ್ ಸಂಸ್ಥೆಯ ಅಧಿಕೃತ ಬಂಡವಾಳವೇ 10 ಕೋಟಿ. ಅದು ಹೇಗೆ ನಿಖಿಲ್​ಗೆ ಇಷ್ಟು ದೊಡ್ಡ ಮೊತ್ತ ಕೊಡಲು ಸಾಧ್ಯ?

ಮಂಡ್ಯ ಚುನಾವಣೆಯ ಪ್ರತಿಯೊಂದು ಹಂತದಲ್ಲೂ ನಿಖಿಲ್ ಕುಮಾರಸ್ವಾಮಿ ಅವರ ಬೆನ್ನಿಗೆ ನಿಂತಿರುವ ಸಚಿವ ಸಿಎಸ್ ಪುಟ್ಟರಾಜು ಅವರನ್ನೂ ಟಿಜೆ ಅಬ್ರಹಾಂ ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಮಾಣಪತ್ರ ಸಲ್ಲಿಸುವುದರಲ್ಲಿ ಪಿಹೆಚ್​ಡಿ ಮಾಡಿರುವವರು ಸಲ್ಲಿಸಿರುವ ಪ್ರಮಾಣಪತ್ರದಲ್ಲೇ ಲೋಪವಿದೆ ಎಂದು ಅಬ್ರಹಾಂ ವ್ಯಂಗ್ಯವಾಡಿದ್ದಾರೆ.

ತಾನು ಪ್ರಮಾಣಪತ್ರ ಸಲ್ಲಿಸುವುದರಲ್ಲಿ ಪಿಎಚ್​ಡಿ ಮಾಡಿದ್ದೇನೆಂದು ಸಿಎಸ್ ಪುಟ್ಟರಾಜು ಅವರು ಇತ್ತೀಚೆಗೆ ಹೇಳಿಕೊಂಡಿದ್ದರು. ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರ ಸಲ್ಲಿಕೆಯಲ್ಲೂ ಪುಟ್ಟರಾಜು ಜೊತೆಯಲ್ಲಿದ್ದರು. ಈ ಹಿನ್ನೆಲೆಯಲ್ಲಿ ಟಿ.ಜೆ. ಅಬ್ರಹಾಂ ಅವರು ಪುಟ್ಟರಾಜು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರು ಸಲ್ಲಿಸಿರುವ ಪ್ರಮಾಣಪತ್ರದಲ್ಲಿರುವ ದೋಷಗಳನ್ನ ಉಲ್ಲೇಖಿಸಿ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಅಬ್ರಹಾಂ ಹೇಳಿದ್ದಾರೆ.

ದೇವೇಗೌಡರ ಕುಟುಂಬಕ್ಕೆ ವೋಟ್ ಹಾಕಬೇಡಿ: ಅಬ್ರಹಾಂ ಮನವಿ

ಮಂಡ್ಯ, ರಾಮನಗರದ ರೈತರ ಸುಲಿಗೆ ಮಾಡಿದ ನೈಸ್ ಯೋಜನೆ ವಿಚಾರದಲ್ಲಿ ಜೆಡಿಎಸ್​ನವರು ಜನರಿಗೆ ಮೋಸ ಮಾಡಿದ್ದಾರೆ. ಇಂಥವರಿಗೆ ವೋಟ್ ಹಾಕಿದರೆ ರೈತರು ಆತ್ಮಹತ್ಯೆ ಮಾಡಿಕೊಂಡಂತಾಗುತ್ತದೆ ಎಂದು ಟಿ.ಜೆ. ಅಬ್ರಹಾಂ ಹೇಳಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ನೈಸ್ ರಸ್ತೆಯ ಟೌನ್​ಶಿಪ್ ನಿರ್ಮಾಣವಿಚಾರದಲ್ಲಿ ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಪರವಾಗಿ ಸಿಎಂ ಕುಮಾರಸ್ವಾಮಿ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದ್ದಾರೆ. ಇದು ಜೆಡಿಎಸ್​ನ ಇಬ್ಬಗೆ ಧೋರಣೆಯಾಗಿದೆ. ಜೆಡಿಎಸ್ ಪಾಲಿಗೆ ಜೀವನಾಡಿಯಾಗಿರುವ ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದ ರೈತರಿಗೆ ಮುಖ್ಯಮಂತ್ರಿಗಳು ಅನ್ಯಾಯ ಮಾಡಿದ್ದಾರೆ. ರೈತರಿಗೆ ಅನ್ಯಾಯ ಮಾಡಿರುವ ದೇವೇಗೌಡರ ಕುಟುಂಬಕ್ಕೆ ವೋಟ್ ಹಾಕಲೇಬೇಡಿ ಎಂದು ಸಾಮಾಜಿಕ ಕಾರ್ಯಕರ್ತ ಕರೆ ನೀಡಿದ್ದಾರೆ.

ಇದೆಲ್ಲವೂ ಬಾಯಿ ಮಾತಿನ ಆರೋಪವನ್ನ, ವಾಸ್ತವ ಅಂಶಗಳಾಗಿವೆ. ಈ ಪ್ರತಿಯೊಂದೂ ತನಿಖೆಯಾಗಬೇಕು ಎಂದವರು ಆಗ್ರಹಿಸಿದ್ಧಾರೆ.

ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರ ವಿಚಾರದಲ್ಲಿ ಈಗಾಗಲೇ ಒಂದೆರಡು ತಕರಾರುಗಳು ಎದ್ದಿವೆ. ನಾಮಪತ್ರ ಸಲ್ಲಿಕೆ ವೇಳೆ ನಿಖಿಲ್ ಕೆಲ ಅಫಿಡವಿಟ್​ಗಳನ್ನೇ ಸಲ್ಲಿಸಿಲ್ಲ. ಇದು ನಾಮಪತ್ರ ದೋಷವಾಗಿದೆ. ಆದರೂ ಚುನಾವಣಾಧಿಕಾರಿಗಳು ನಿಖಿಲ್ ನಾಮಪತ್ರವನ್ನು ಅಂಗೀಕರಿಸಿದ್ದಾರೆಂದು ಸುಮಲತಾ ಅಂಬರೀಷ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

(ವರದಿ: ರಾಘವೇಂದ್ರ ಗಂಜಾಂ)

Comments are closed.