ದೆಹಲಿ: ಬಿಜೆಪಿಯ ಭೀಷ್ಮ ಅಡ್ವಾಣಿ ಅವರು ಸತತವಾಗಿ ಗೆಲ್ಲುತ್ತಿದ್ದ ಗಾಂಧಿನಗರದಿಂದ ಅಮಿತ್ ಶಾ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ನೋಡಿದರೆ ಮೋದಿ ಕೇವಲ ಪಕ್ಷದಲ್ಲಿ ಅಷ್ಟೇ ಅಲ್ಲ, ಸರ್ಕಾರದಲ್ಲಿಯೂ ಶಾ ತನ್ನ ಉತ್ತರಾಧಿಕಾರಿ ಎನ್ನುವ ಸೂಚನೆ ಕೊಡುವಂತೆ ಕಾಣುತ್ತಿತ್ತು.
ಗಾಂಧಿನಗರದಲ್ಲಿ ಮಿತ್ರ ಪಕ್ಷಗಳ ನಾಯಕರು ಅದರಲ್ಲೂ ಪ್ರಕಾಶ ಸಿಂಗ್ ಬಾದಲ್, ಉದ್ಧವ್ ಠಾಕ್ರೆ, ಪಾಸ್ವಾನ್ ಹೋಗಿದ್ದು ಜೊತೆಗೆ ರಾಜನಾಥ್ ಸಿಂಗ್, ಜೇಟ್ಲಿ, ಗಡ್ಕರಿ ಎಲ್ಲರೂ ನಾ ಮುಂದೆ ನೀ ಮುಂದೆ ಎಂದು ಕಾಣಿಸಿಕೊಂಡಿದ್ದು, ಮುಂದಿನ ಭವಿಷ್ಯದ ಸೂಚನೆ ಕೊಡುವಂತೆಯೇ ಇತ್ತು. ಇಲ್ಲವಾದಲ್ಲಿ ಮೋದಿ ಸಾಹೇಬರು ಬಿಟ್ಟರೆ ಉಳಿದ ಯಾರಿಗೂ ಬಿಜೆಪಿಯಲ್ಲಿ ಈ ಹಂತದ ಶಕ್ತಿ ಪ್ರದರ್ಶನದ ಸಾಮರ್ಥ್ಯ, ಮುಕ್ತ ಹಸ್ತ ಸದ್ಯದ ಮಟ್ಟಿಗೆ ಇಲ್ಲ.
ಮೋದಿ ಗುಜರಾತ್‌ನಲ್ಲಿದ್ದಾಗ ಅಮಿತ್ ಶಾ ಸರ್ಕಾರದಲ್ಲಿ ನಂಬರ್ 2 ಆಗಿದ್ದರಾದರೂ ದಿಲ್ಲಿಗೆ ಬರುವಾಗ ಜಾತಿ ಕಾರಣಗಳಿಂದ ಅಮಿತ್ ಶಾಗೆ ಸಿಎಂಹುದ್ದೆ ಕೊಡದೆ ಪಟೇಲ್‌ರಿಗೆ ಮಣೆ ಹಾಕಿದ್ದರು. ಆದರೆ ಈಗ ದಿಲ್ಲಿಯಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಸರ್ಕಾರದಲ್ಲೂ ನಂಬರ್ 2 ಸ್ಥಾನ ಕೊಡುವ ಸ್ಪಷ್ಟ ಸಂದೇಶ ಮೋದಿ ಗಾಂಧಿನಗರದ ಮೂಲಕ ಕೊಡುತ್ತಿದ್ದಾರೆ ಅನಿಸುತ್ತಿದೆ. ಈ ಪರೋಕ್ಷ ಸೂಚನೆಯ ನಂತರ ಒಂದು ವೇಳೆ ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರವೇ ಬಂದಲ್ಲಿ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಭವಿಷ್ಯ ಏನಾಗಬಹುದು ಎಂಬ ಕುತೂಹಲ ಇದ್ದೇ ಇದೆ.
ಬಿಜೆಪಿಯಲ್ಲಿ ಅಟಲ್, ಅಡ್ವಾಣಿ ಅವರದ್ದು ಒಂದು ತರಹದ ಜೋಡಿ. ಅದರಲ್ಲಿ ಮಧ್ಯೆ ಮಧ್ಯೆ ಸ್ವಾಭಾವಿಕ ಭಿನ್ನ ಅಭಿಪ್ರಾಯಗಳೂ ಇರುತ್ತಿದ್ದವು. ಆದರೆ ಮೋದಿ-ಅಮಿತ್ ಶಾರದ್ದು ಇನ್ನೊಂದು ತರಹದ ಜೋಡಿ. ಅಲ್ಲಿ ಇಬ್ಬರ ನಡುವೆ ವಿಚಿತ್ರ ಎನಿಸುವಷ್ಟು ತಾಳ-ಮೇಳ ಇದ್ದು, ಇಬ್ಬರ ಮಧ್ಯೆ ಏನೇ ನಡೆದರೂ ಅದು ಮೂರನೆಯ ವ್ಯಕ್ತಿಯ ಕಿವಿಗೆ ಬಿದ್ದಿಲ್ಲ. ಒಬ್ಬರ ಬೆನ್ನಿಗೆ ಇನ್ನೊಬ್ಬನು ಕಣ್ಣಿಡುವ ಈ ಕಾಲದಲ್ಲಿ ಇಂಥ ಜೋಡಿಗಳು ಅಪರೂಪ ಬಿಡಿ.
ಯಾರು ಮುಂದಿನ ಉತ್ತರಾಧಿಕಾರಿ?
ಪ್ರಾಚೀನ ಕಾಲದಲ್ಲಿ ಉತ್ತರಾಧಿಕಾರಿ ರಾಜನ ಕುಟುಂಬದ ದೊಡ್ಡ ಮಗನ ರೂಪದಲ್ಲಿ ಸಿಕ್ಕರೆ, ಮೊಘಲರ ಕಾಲದಲ್ಲಿ ಮಕ್ಕಳ ನಡುವೆ ಕಲಹವಾಗಿ ತಂದೆಯನ್ನೇ ಸೆರೆಯಲ್ಲಿಟ್ಟ ಪ್ರಸಂಗಗಳೂ ನಡೆದಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ತಿಲಕರ ವೈಚಾರಿಕ ಉತ್ತರಾಧಿಕಾರತ್ವ ಸಾವರ್ಕರ್ ವಹಿಸಿಕೊಂಡರೆ, ಮಹಾತ್ಮಾ ಗಾಂಧಿ ತನ್ನ ಉತ್ತರಾಧಿಕಾರಿ ಪಂಡಿತ್ ನೆಹರು ಎಂದು ಹೇಳಿಯೇ ಬಿಟ್ಟಿದ್ದರು. ಆಗಿನ ತಿಲಕ್, ಗಾಂಧಿ ನಡುವಿನ ವೈಚಾರಿಕ ಭಿನ್ನತೆಯೇ ಇವತ್ತು ಪಕ್ಷದ ರೂಪ ತಾಳಿ ಬಿಜೆಪಿ, ಕಾಂಗ್ರೆಸ್ ಎಂಬ ರೀ ತಿಯಲ್ಲಿ ಕಾಣುತ್ತಿದೆ.
ಅದಿರಲಿ, ಪಂಡಿತ್ ನೆಹರು ಕೂಡ ತನ್ನ ಜೀವಿತ ಅವಧಿಯಲ್ಲಿ ನೇರ ಘೋಷಣೆ ಮಾಡದೆ ಇದ್ದರೂ ಕೂಡ ಇಂದಿರಾರನ್ನು ರಾಜಕೀಯಕ್ಕೆ ತಂದಿದ್ದರು. ಹೀಗಾಗಿ ಮಧ್ಯೆ ಶಾಸ್ತ್ರಿ ಬಂದರೂ ಇಂದಿರಾ ಕೈಯಲ್ಲಿ ಸಿಕ್ಕ ಕಾಂಗ್ರೆಸ್, ನಂತರ ರಾಜೀವ್ ಗಾಂಧಿ, ಮಧ್ಯ ನರಸಿಂಹರಾವ್, ಮತ್ತೆ ಸೋನಿಯಾ ರಾಹುಲ್‌ರಿಂದ ಪ್ರಿಯಾಂಕಾವರೆಗೆ ಬಂದಿದೆ. ಆದರೆ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಪಟ್ಟ ಕಷ್ಟದಿಂದ ಉದ್ಭವವಾದ ಜನಸಂಘ ಮತ್ತು ಬಿಜೆಪಿಯಲ್ಲಿ ಬಲರಾಜ್ ಮುಧೋಕ್‌ರನ್ನು ಪಕ್ಕಕ್ಕೆ ಸರಿಸಿ ಅಟಲ್-ಅಡ್ವಾಣಿ ನಂತರ ಈಗ ಮೋದಿ-ಅಮಿತ್ ಶಾ ಕೈಯಲ್ಲಿ ಬಂದಿದೆ.
ಕಾಂಗ್ರೆಸ್‌ಗೆ ಗಾಂಧಿ ಕುಟುಂಬವೇ ಪಕ್ಷವನ್ನು ಒಟ್ಟಾಗಿ ಹಿಡಿದಿಡುವ ಗುರುತ್ವಾಕರ್ಷಣ ಶಕ್ತಿ. ಆದರೆ ಬಿಜೆಪಿಗೆ ಆರ್‌ಎಸ್‌ಎಸ್. ಎರಡೂ ಪಕ್ಷಗಳು ಆ ಗುರುತ್ವದ ಆಕರ್ಷಣೆಯಿಂದ ದೂರ ಬಂದಲ್ಲಿ ಉತ್ತರಾಧಿಕಾರಿ ಆಯ್ಕೆ ಇಷ್ಟೊಂದು ಸಲೀಸಾಗಿ ನಡೆಯಲ್ಲ ಬಿಡಿ.
– ಪ್ರಶಾಂತ್ ನಾತು, (ಸುವರ್ಣ ನ್ಯೂಸ್ )
Comments are closed.