ಕುಂದಾಪುರ: ಕರಾವಳಿಯಲ್ಲಷ್ಟೆ ಅಲ್ಲ. ರಾಜ್ಯದಲ್ಲಿಯೂ ಈ ಬಾರಿ ಮೋದಿ ಅಲೆಯಿಲ್ಲ. ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ ಯಾವುದೇ ಕೊಡುಗೆ ಇಲ್ಲ. ಕರಾವಳಿಯ ಮೂರು ಲೋಕಸಭಾ ಕ್ಷೇತ್ರಗಳು ಮೈತ್ರಿ ಪಾಲಾಗುತ್ತದೆ ಎಂದು ಸಿಎಂ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಬುಧವಾರ ಸಂಜೆ ಇಲ್ಲಿನ ನೆಹರೂ ಮೈದಾನದಲ್ಲಿ ಜಾತ್ಯಾತೀತ ಜನತಾ ದಳ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಮಹಿಳಾ ಮೀನುಗಾರರ ಸಮಾವೇಶಕ್ಕೆ ಆಗಮಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.
ಅಭ್ಯರ್ಥಿಗಳಿಗೆ ತಮ್ಮ ಸಾಧನೆಗಳನ್ನು ಹೇಳಿ ಮತ ಕೇಳಲು ಆಗುತ್ತಿಲ್ಲ. ನರೇಂದ್ರ ಮೋದಿಯವರ ಹೆಸರಲ್ಲಿ ಬಿ.ಜೆ.ಪಿಯವರು ಮತ ಕೇಳುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜನರ ಬಳಿ ಹೋಗಿ ಮತ ಕೇಳಲು ಬಿಜೆಪಿಯವರಲ್ಲಿ ಬೇರೆ ಯಾವುದೇ ಬಂಡವಾಳ ಇಲ್ಲ. ಕೇವಲ ಮಾತಿನಿಂದ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ. ಸುಳ್ಳುಗಳನ್ನೇ ಹೇಳಿ ಯುವಕರ ದಾರಿ ತಪ್ಪಿಸುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಯುವಕರು ಈ ಬಾರಿ ಮೋದಿಗೆ ಮತ ಹಾಕಲ್ಲ. ಬಿಜೆಪಿ ಈ ಭಾರಿ ಸೋಲನ್ನು ಸ್ವೀಕಾರ ಮಾಡಲೇಬೇಕು ಎಂದು ಕುಮಾರಸ್ವಾಮಿ ಹೇಳಿದರು.
ಬಿಜೆಪಿ ಮುಖಂಡ ಈಶ್ವರಪ್ಪನವರ ಹೇಳಿಕೆ ಪ್ರತಿಕ್ರಿಯಿಸಿದ ಸಿಎಂ ಕುಮಾರಸ್ವಾಮಿ, ಈಶ್ವರಪ್ಪ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಅವರ ನಾಯಕರ ಹೇಳಿಕೆಗಳಲ್ಲೆ ಗೊಂದಲ ಇದೆ
ಶಿವರಾಮೇಗೌಡರ ಸುಮಲತಾ ನಾಯ್ಡು ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶಿವರಾಮೇಗೌಡರ ಹೇಳಿಕೆಗೆ ನಾನೇನು ಹೇಳೋಕೆ ಹೋಗೋದಿಲ್ಲ. ನಾನು ಜಾತಿ ವ್ಯಾಮೋಹಕ್ಕೆ ಒಳಗಾಗಲ್ಲ. ನಾನು ಇದುವರೆಗೆ ಯಾರನ್ನೂ ಜಾತಿ ಆಧಾರದಲ್ಲಿ ನೋಡಿಲ್ಲ ಎಂದರು.
ಕನ್ನಡ ನ್ಯೂಸ್ ಚಾನಲ್‌ಗಳಲ್ಲಿ ಮಂಡ್ಯದಲ್ಲಿ ಮಾತ್ರ ಚುನಾವಣೆ ಎಂಬಂತೆ ಬಿಂಬಿಸಲಾಗುತ್ತಿದೆ. ಮಂಡ್ಯ ಚುನಾವಣೆಗೆ ಪ್ರಚಾರ ನೀಡುತ್ತಿದ್ದಾರೆ. ಕ್ಷಣ ಕಾಲ ಬೇಜಾರಾದ್ರೆ ಹಾಸನ, ತುಮಕೂರು ತೋರಿಸ್ತಾರೆ. ಯಾರೇ ಪ್ರಚಾರಕ್ಕೆ ಬಂದರೂ ನಿಖಿಲ್ ಗೆಲ್ಲುವಲ್ಲಿ ಸಂಶಯವೇ ಬೇಡ. ಯಾವುದೇ ಅಪಪ್ರಚಾರ ನಡೆದರೂ ನಿಖಿಲ್ ಗೆಲ್ಲುತ್ತಾರೆ. ಮಂಡ್ಯದಲ್ಲಿ ದೊಡ್ಡಮಟ್ಟದ ಅಂತರದಲ್ಲಿ ಗೆಲ್ಲುತ್ತೇವೆ ಎಂದರು.
ಮೈತ್ರಿಗೆ ಸೋಲಾಗುತ್ತದೆ ಎಂಬ ಸಮೀಕ್ಷೆಗಳು ಬರುತ್ತಿದೆ. ಈ ಸಮೀಕ್ಷೆಗಳೆಲ್ಲವೂ ಸುಳ್ಳು. ಬಿಜೆಪಿಯವರು 550 ಕೋಟಿ ರೂ. ಮಾಧ್ಯಮದವರಿಗೆ ಜಾಹಿರಾತು ಕೊಟ್ಟಿದ್ದಾರೆ. ವಾಸ್ತವ ಪರಿಸ್ಥಿತಿ ನ್ಯೂಸ್ ಚಾನೆಲ್‌ಗಳಲ್ಲಿ ಬರುತ್ತಿಲ್ಲ. ಎಲ್ಲದಕ್ಕೂ ಮೇ ೨೩ ರಂದು ಉತ್ತರಿಸುತ್ತೇನೆ. ರಾಜ್ಯದಲ್ಲಿ 20ರಿಂದ 22 ಸೀಟು ಮೈತ್ರಿ ಪಾಲಾಗುತ್ತದೆ ಎಂದರು.
Comments are closed.