ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆಪ್ತ ಪರಮೇಶ್ ಮನೆ ಮೇಲೆ ನಡೆದ ಐಟಿ ದಾಳಿ ಪ್ರಕರಣದ ವೇಳೆ ಬರೋಬ್ಬರಿ 6 ಕೋಟಿ ರೂ. ಸಿಕ್ಕಿರುವ ವಿಚಾರ ನ್ಯೂಸ್18 ಕನ್ನಡಕ್ಕೆ ಲಭ್ಯವಾಗಿದೆ.
ಪರಮೇಶ್ ಅವರ ಮನೆಯ ಮೇಲೆ ಐಟಿ ದಾಳಿ ನಡೆಸಿತ್ತು. ಈ ವೇಳೆ ಲಾಕರ್ ಕೀ ಕಳೆದುಹೋಗಿದೆ ಎಂದು ಪರಮೇಶ್ ಹೇಳಿಕೊಂಡಿದ್ದರು. ದಾಳಿ ಬಳಿಕ ಪರಮೇಶ್ ಅವರ ಬ್ಯಾಂಕ್ ವಿವರವನ್ನು ಐಟಿ ಸಂಗ್ರಹ ಮಾಡಿತ್ತು. ಅಷ್ಟೇ ಅಲ್ಲ, ಬ್ಯಾಂಕ್ ಲಾಕರ್ ಒಡೆಯುತ್ತೇವೆ ಎಂದು ಐಟಿ ಅಧಿಕಾರಿಗಳು ಹೇಳಿದ್ದರು. ಈ ವೇಳೆ ಪರಮೇಶ್ ಲಾಕರ್ ಕೀ ನೀಡಿದ್ದರು. ಲಾಕರ್ ತೆಗೆದ ಸಂದರ್ಭದಲ್ಲಿ 6 ಕೋಟಿ ರೂ. ಪತ್ತೆಯಾಗಿದೆ. ಗುತ್ತಿಗೆದಾರರಿಂದ ಪರಮೇಶ್ ಹಣ ಸಂಗ್ರಹ ಮಾಡುತ್ತಿದ್ದರು ಎನ್ನಲಾಗಿದೆ.
ಐಟಿ ದಾಳಿ ನಡೆದ ಬೆನ್ನಲ್ಲೇ ಇದು ಚುನಾವಣೆ ಗೆಲ್ಲಲ್ಲು ಬಿಜೆಪಿ ತಂತ್ರ ಎಂದು ಜೆಡಿಎಸ್ ನಾಯಕರು ಆರೋಪಿಸಿದ್ದರು. ಜೊತೆಗೆ ನಮ್ಮ ಆಪ್ತರ ಬಳಿ ಯಾವುದೇ ಅಕ್ರಮ ಹಣವಿಲ್ಲ ಎಂದು ರಾಜ್ಯ ಜೆಡಿಎಸ್ ನಾಯಕರು ಹೇಳಿಕೊಂಡಿದ್ದರು. ಆದರೆ, ಇಷ್ಟು ಪ್ರಮಾಣದಲ್ಲಿ ಹಣ ಸಿಕ್ಕಿರುವುದಕ್ಕೆ ಸಾಕ್ಷ್ಯ ಸಿಕ್ಕಿರುವುದು ಜೆಡಿಎಸ್ ನಾಯಕರಿಗೆ ತೀವ್ರ ಹಿನ್ನಡೆ ಉಂಟುಮಾಡಿದೆ.
ರಾಜ್ಯದಲ್ಲಿ ಏಕಕಾಲಕ್ಕೆ 10 ಉದ್ಯಮಿಗಳೂ ಸೇರಿದಂತೆ 15ಕ್ಕೂ ಹೆಚ್ಚು ಕಡೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಇಷ್ಟೇ ಅಲ್ಲ ರೇವಣ್ಣ ಆಪ್ತ ಗುತ್ತಿಗೆದಾರರ ಮೇಲೆ ಐಟಿ ದಾಳಿ ನಡೆಸಿತ್ತು. ಚುನಾವಣೆ ವೇಳೆ ಕೋಟ್ಯಂತರ ಹಣ ಸಾಗಣೆ ಶಂಕೆ ಹಿನ್ನೆಲೆ ಐಟಿ ದಾಳಿ ನಡೆಸಲಾಗಿತ್ತು. ತುಮಕೂರು, ಹಾಸನ, ಬೆಂಗಳೂರು ಗ್ರಾಮಾಂತರ, ಮಂಡ್ಯ ಭಾಗದಲ್ಲಿ ಹಣ ಸಾಗಣೆ ಶಂಕೆ ಹಿನ್ನೆಲೆ ದಾಳಿ ನಡೆದಿದೆ ಎನ್ನಲಾಗಿತ್ತು. ಮಂಡ್ಯಕ್ಕೆ ಹಣ ಸಾಗಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ.
Comments are closed.