ಕರ್ನಾಟಕ

ಪ್ರಜ್ವಲ್​ ರೇವಣ್ಣ ಸುಳ್ಳು ಅಫಿಡವಿಟ್ ಸಲ್ಲಿಕೆ ಆರೋಪ; ಬಿಜೆಪಿ ಅಭ್ಯರ್ಥಿ ಎ.ಮಂಜು ವಿಚಾರಣೆ

Pinterest LinkedIn Tumblr


ಹಾಸನ: ಹಾಸನ ಲೋಕಸಭಾ ಕ್ಷೇತ್ರ ಮೈತ್ರಿ ಪಕ್ಷಗಳ ಅಭ್ಯರ್ಥಿ ಪ್ರಜ್ವಲ್​ ರೇವಣ್ಣ ನಾಮಪತ್ರದ ಜೊತೆಗೆ ಸುಳ್ಳು ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಎ.ಮಂಜು ನೀಡಿದ್ದ ದೂರು ಆಧರಿಸಿ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ತುರ್ತು ವಿಚಾರಣೆ ನಡೆಯಿತು.

ಮೈಸೂರು ಪ್ರಾದೇಶಿಕ ಆಯುಕ್ತ ಟಿ.ಕೆ.ಅನಿಲ್ ಕುಮಾರ್, ಜಿಲ್ಲಾ ಚುನಾವಣಾ ಅಧಿಕಾರಿ ಪ್ರಿಯಾಂಕಾ ಮೇರಿ, ಬಿಜೆಪಿ ಅಭ್ಯರ್ಥಿ ಮಂಜು ಹಾಗೂ ಅವರ ವಕೀಲರ ಸಮ್ಮುಖದಲ್ಲಿ ವಿಚಾರಣೆ ನಡೆಸಿದರು. ಸುಮಾರು ಎರಡು ತಾಸು ನಡೆದ ವಿಚಾರಣೆಯಲ್ಲಿ ದೂರದಾರರ ಅಹವಾಲನ್ನು ಕೂಲಂಕಷವಾಗಿ ಮಾಹಿತಿ ಕೇಳಲಾಯಿತು.

ಪ್ರಜ್ವಲ್ ರೇವಣ್ಣ ಅಧಿಕಾರ್ ವೆಂಚರ್ಸ್​ ಲಿಮಿಟೆಡ್​ ಮತ್ತು ಡ್ರೋಣ್​ ವಕ್ಫೋರ್ಸ್​ ಲಿಮಿಟೆಡ್​ ಹೆಸರಿನ ಎರಡು ಕಂಪನಿಗಳಲ್ಲಿ ಈಗಲೂ ಪಾಲುದಾರರಾಗಿದ್ದಾರೆ. ಅದರಲ್ಲಿ ಹಣವನ್ನೂ ತೊಡಗಿಸಿದ್ದಾರೆ. ಆದರೆ, ನಾಮಪತ್ರ ಸಲ್ಲಿಕೆ ವೇಳೆ, ತಾವು ಷೇರುದಾರರಾಗಿರುವ ಕಂಪನಿ ಬಗ್ಗೆ ಉಲ್ಲೇಖ ಮಾಡದೆ ಸತ್ಯವನ್ನು ಮರೆ ಮಾಚಿದ್ದಾರೆ. ಹೀಗಾಗಿ ಅವರ ನಾಮಪತ್ರವನ್ನು ತಿರಸ್ಕಾರ ಮಾಡಬೇಕು ಎಂದು ಬಿಜೆಪಿ ಅಭ್ಯರ್ಥಿ ಮಂಜು ಅವರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.

ವಿಚಾರಣೆ ಬಳಿಕ ಮಾತನಾಡಿದ ಮಂಜು ಪರ ವಕೀಲ ವಿಜಯ್​ ಕುಮಾರ್, ಪ್ರಜ್ವಲ್ ಸುಳ್ಳು ಮಾಹಿತಿಯಿರುವ ಅಫಿಡವಿಟ್ ಸಲ್ಲಿಸಿದ್ದಾರೆ. ಈ ರೀತಿಯ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್​ ನೀಡಿರುವ ತೀರ್ಪು ಉಲ್ಲೇಖಿಸಿ, ಪ್ರಜ್ವಲ್ ನಾಮಪತ್ರ ತಿರಸ್ಕರಿಸುವಂತೆ ದೂರು ನೀಡಿದ್ದೇವೆ. ನಾಮಪತ್ರದಲ್ಲಿ ತಪ್ಪು ಮಾಹಿತಿ ಇದ್ದರೂ ಸ್ವೀಕಾರ ಮಾಡಲಾಗಿದೆ ಎಂದು ತಕರಾರು ಹಾಕಿದ್ದೇವೆ. ನಮ್ಮ ವಾದ ಆಲಿಸಿರುವ ಅಧಿಕಾರಿಗಳು ಮುಖ್ಯ ಚುನಾವಣಾ ಅಧಿಕಾರಿಗೆ ವರದಿ ನೀಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ವಿಚಾರಣೆಗೆ ಹಾಜರಾಗಿ ಮಾತನಾಡಿದ ಅಭ್ಯರ್ಥಿ ಎ.ಮಂಜು, ಅಧಿಕಾರಿಗಳಿಗೆ ನಮ್ಮ ಬಳಿಯಿದ್ದ ಎಲ್ಲ ಮಾಹಿತಿ ಹಾಗೂ ದಾಖಲೆಗಳನ್ನು ಸಲ್ಲಿಸಿದ್ದೇವೆ. ಚುನಾವಣಾ ಆಯೋಗ ನ್ಯಾಯಸಮ್ಮತ ತೀರ್ಮಾನ ಕೈಗೊಳ್ಳುವ ಭರವಸೆ ಇದೆ ​ ಎಂದು ಹೇಳಿದರು.

Comments are closed.