ಬಹರೈನ್ ; ದಶಮಾನೋತ್ಸವದ ಸಂಭ್ರಮದಲ್ಲಿರುವ ಇಲ್ಲಿನ “ರಾಯಲ್ ತುಳುಕೂಟ ಫೌಂಡೇಶನ್ ” ಶ್ರೀ ಕರ್ಮಾರ್ ನಾಗೇಶ್ ಶೆಟ್ಟಿ ಯವರ ಸಾರಥ್ಯದಲ್ಲಿ ಸ್ಥಳೀಯ ಇಂಡಿಯನ್ ಕ್ಲಬ್ಬಿನ ಸಹಯೋಗದೊಂದಿಗೆ ಆಯೋಜಿಸರುವ ತುಳು ಪರ್ಬ ಕಾರ್ಯಕ್ರಮಕ್ಕೆ ಈಗಾಗಲೇ ಕ್ಷಣ ಗಣನೆ ಆರಂಭವಾಗಿದೆ .
ಏಪ್ರಿಲ್ 12 ರ ಶುಕ್ರವಾರ ಸಂಜೆ 5:30 ಗೆ ಘಂಟೆಗೆ ಸರಿಯಾಗಿ ತುಳು ಪರ್ಬ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ದೊರಕಲಿದ್ದು ವೈವಿಧ್ಯಮಯವಾದ ಮನೋರಂಜನಾ ಕಾರ್ಯಕ್ರಮಗಳ ಜೊತೆಗೆ ದ್ವೀಪದ ತುಳು ನಾಟಕ ಪ್ರೇಮಿಗಳು ಬಹಳ ದಿನಗಳಿಂದ ಕಾಯುತ್ತಿರುವಂತಹ “ಎಡ್ದೆ೦ತಿನಾ ” ಎನ್ನುವ ವಿಭಿನ್ನ ರೀತಿಯ ಕುತೂಹಲಕಾರಿ ನಾಟಕವು ಬಹರೈನ್ ನ ಹವ್ಯಾಸಿ ಕಲಾವಿದರುಗಳಿಂದ ಪ್ರದಶನಗೊಳ್ಳಲಿದೆ .
ಸದಾ ಹೊಸ ಹೊಸ ಪ್ರಯೋಗಗಳಿಂದ ದ್ವೀಪದ ರಂಗಭೂಮಿಯಲ್ಲಿ ವಿಭಿನ್ನ ಛಾಪು ಮೂಡಿಸಿರುವ ಖ್ಯಾತ ನಾಟಕಕರ್ತ ಶ್ರೀ ಕರುಣಾಕರ್ ಪದ್ಮಶಾಲಿಯವರು ಈ ನಾಟಕವನ್ನು ರಚಿಸಿ ನಿರ್ದೇಶಿಸುತ್ತಿದ್ದರೆ , ತುಳು ನಾಡಿನ ಖ್ಯಾತ ಸಂಗೀತಗಾರ ಶ್ರೀ ಶಶಿ ಹೆಜಮಾಡಿಯವರು ಈ ನಾಟಕಕ್ಕೆ ಸಂಗೀತ ನೀಡುತ್ತಿದ್ದಾರೆ . ವಿಶಿಷ್ಟ ರೀತಿಯ ಬೆಳಕು ,ರಂಗ ಸಜ್ಜಿಕೆ ಹಾಗು ವಿಶೇಷ ತಾಂತ್ರಿಕತೆಯೊಂದಿಗೆ ರಂಗದ ಮೇಲೆ ಪ್ರದರ್ಶನಗೊಳ್ಳಲಿರುವ ಈ ನಾಟಕವು ದ್ವೀಪದ ಕಲಾಪ್ರೇಮಿಗಳಿಗೆ ಹೊಸ ಅನುಭವ ನೀಡುವುದರ ಜೊತೆಗೆ ದ್ವೀಪದ ರಂಗ ಭೂಮಿಯಲ್ಲಿ ಹೊಸ ಸಂಚಲನ ಮೂಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ .
ಈ ನಾಟಕಕ್ಕೆ ಸಂಗೀತ ನೀಡಲು ತುಳು ರಂಗಭೂಮಿಯ ಖ್ಯಾತ ಸಂಗೀತ ನಿರ್ದೇಶಕ ಶಶಿ ಹೆಜಮಾಡಿ ಯವರು ಇದಾಗಲೇ ದ್ವೀಪಕ್ಕೆ ಆಗಮಿಸಿದ್ದು ನಾಟಕದ ಕೊನೆಯ ಸುತ್ತಿನ ಅಭ್ಯಾಸ ಬಿರುಸಿನಿಂದ ಸಾಗಿದೆ . ರಂಗ ಸಜ್ಜಿಕೆ,ಬೆಳಕು ಹಾಗು ಧ್ವನಿಯನ್ನು ವಿಶೇಷವಾಗಿ ಈ ನಾಟಕಕ್ಕೆ ವಿನ್ಯಾಸಗೊಳಿಸಿದ್ದು ಇದು ಈ ಕುತೂಹಲಕಾರಿ ನಾಟಕಕ್ಕೆ ಇನ್ನಷ್ಟು ಮೆರಗನ್ನು ನೀಡಲಿದೆ.
ಕ್ಷಣ ,ಕ್ಷಣಕ್ಕೂ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಾ ಪ್ರೇಕ್ಷಕರನ್ನು ಆಸನದ ತುದಿಯಲ್ಲಿ ಕುಳಿತುಕೊಳ್ಳುವಂತೆ ಮಾಡುವ ಈ ನಾಟಕದಲ್ಲಿ ಸರೌಂಡ್ ಸೌಂಡ್ ,3D ಇಫೆಕ್ಟ್ ಇರುವ ರಂಗ ವಿನ್ಯಾಸ , ರಂಗದಲ್ಲಿ ಮಳೆ ಸುರಿಯುವುದು ಇವೇ ಮುಂತಾದ ಅನೇಕ ಪ್ರಯೋಗಗಳನ್ನು ನಿರ್ದೇಶಕರಾದ ಶ್ರೀ ಕರುಣಾಕರ್ ಪದ್ಮಶಾಲಿ ಯವರು ಮಾಡಿದ್ದು ಕತೆ ,ಚಿತ್ರ ಕತೆ ,ಸಂಭಾಷಣೆ ಹಾಗು ನಿರ್ದೇಶನದ ಹೊಣೆಯನ್ನೂ ಇವರು ಹೊತ್ತಿದ್ದಾರೆ . ರಂಗಭೂಮಿಯಲ್ಲಿ ವಿನೂತನ ಪ್ರಯತ್ನವೊಂದನ್ನು ಮಾಡಿ ,ನಾಯತಕಾ ಪ್ರೇಮಿಗಳಿಗೆ ಹೊಸತನವನ್ನು ನೀಡಲೆಂದೇ ಧ್ವನಿ,ಬೆಳಕು, ಹಾಗು ರಂಗ ವಿನ್ಯಾಸಕ್ಕಾಗಿ ನುರಿತ ರಂಗ ಕರ್ಮಿಗಳ ತಂಡವೊಂದು ಹಗಲು ರಾತ್ರಿಯೆನ್ನದೆ ದುಡಿಯುತ್ತಿದೆ . ನಾಟಕಕ್ಕೆ ಪ್ರವೇಶ ಮುಕ್ತವಾಗಿದ್ದು,ನಾಟಕವು ಶುಕ್ರವಾರದ ಸಂಜೆ ಸರಿಯಾದ ಸಮಯಕ್ಕೆ ಪ್ರಾರಂಭವಾಗಲಿದ್ದು ನಾಟಕ ಪ್ರೇಮಿಗಳು ಸಮಯಕ್ಕೆ ಸರಿಯಾಗಿ ಬಂದು ಯಶಸ್ವೀಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ .
ಕಳೆದ ಮೂರು ದಶಕಗಳಿಂದ ಬಹರೈನ್ ದ್ವೀಪ ರಾಷ್ಟ್ರದಲ್ಲಿ ನೆಲೆಸಿರುವ ಶ್ರೀ ಕರ್ಮಾರ್ ನಾಗೇಶ್ ಶೆಟ್ಟಿ ಯವರು ಇಲ್ಲಿನ ಸಾಂಸ್ಕ್ರತಿಕ ಲೋಕಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದು , ಇದಾಗಲೇ ಅನೇಕ ಯಶಸ್ವೀ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ . ತುಳು ಭಾಷೆ ,ಕಲೆ ,ಸಂಸ್ಕ್ರತಿಯ ಮೇಲೆ ಅತೀವ ಪ್ರೀತಿಯಿರುವ ಇವರು ಇದೀಗ ತಮ್ಮ ರಾಯಲ್ ತುಳು ಕೂಟ ಫೌಂಡೇಶನ್ ನ ಆಶ್ರಯದಲ್ಲಿ ಬ್ರಹತ್ “ತುಳು ಪರ್ಬ ” ಆಯೋಜಿಸುತಿದ್ದಾರೆ . ಈ ಸಂದರ್ಭದಲ್ಲಿ ಮಾತನಾಡಿದ ಅವರು ತಮ್ಮೀ ಪ್ರಯತ್ನಕ್ಕೆ ದ್ವೀಪದ ಎಲ್ಲಾ ತುಳು ಭಾಂದವರ ಸಂಪೂರ್ಣ ಸಹಕಾರ ಬೇಕೆಂದು ಮನವಿ ಮಾಡಿಕೊಂಡರಲ್ಲದೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಶ್ರೀ ನಾಗೇಶ್ ಶೆಟ್ಟಿ ಯವರನ್ನು ದೂರವಾಣಿ ಸಂಖ್ಯೆ 33622442 ಮುಖೇನ ಸಂಪರ್ಕಿಸಬಹುದು .
ವರದಿ- ಕಮಲಾಕ್ಷ ಅಮೀನ್ .
Comments are closed.