ಮಂಗಳೂರು, ಎಪ್ರಿಲ್ 14 : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆ ವಿಜಯ ಸಂಕಲ್ಪ್ ರ‍್ಯಾಲಿಯಲ್ಲಿ ಭಾಗವಹಿಸಿ ಎರಡು ಲಕ್ಷಕ್ಕೂ ಮೀರಿ ನೆರೆದ ಸಾಗರೋಪಾದಿಯ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದರು.
ಎರಡು ಲಕ್ಷಕ್ಕೂ ಅಧಿಕ ಮಂದಿ ಪಕ್ಷದ ಕಾರ್ಯಕರ್ತರು, ಮೋದಿ ಅಭಿಮಾನಿಗಳು ಪಾಲ್ಗೊಂಡಿದ್ದ ಈ ಕಾರ್ಯಕ್ರಮಕ್ಕೆ ಸಂಬಂಧ ಪಟ್ಟ ಬಹುತೇಕ ಚಿತ್ರಗಳನ್ನು ಈ ವರದಿಯ ಜೊತೆ ಪ್ರಕಟಿಸಲಾಗಿದೆ.
ಭಾಷಣದ ಪ್ರಮುಖ ಅಂಶಗಳು : ಮಂಗಳೂರು, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಆತ್ಮೀಯ ನಾಗರಿಕ ಬಂಧುಗಳಿಗೆ, ನಿಮ್ಮ ಚೌಕೀದಾರ್ ನರೇಂದ್ರ ಮೋದಿಯ ನಮಸ್ಕಾರಗಳು ಎಂದು ಕನ್ನಡದಲ್ಲಿ ಮಾತನಾಡಿದರು.
ಕಾಂಗ್ರೆಸ್‌ನದ್ದು ವಂಶೋದಯವಾದರೆ, ಬಿಜೆಪಿಯದ್ದು ಅಂತ್ಯೋದಯ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. ಕಾಂಗ್ರೆಸ್‌ನ ವಂಶೋದಯದಿಂದ ಭ್ರಷ್ಟಾಚಾರ ಮತ್ತು ಅನ್ಯಾಯ ಸೃಷ್ಟಿಯಾಗುತ್ತದೆ. ಬಿಜೆಪಿಯ ಅಂತ್ಯೋಯದಿಂದ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯ ಪ್ರತಿಷ್ಠೆ ಹೆಚ್ಚಾಗುತ್ತದೆ. ಕಾಂಗ್ರೆಸ್‌ನ ವಂಶೋದಯ ತಮ್ಮದೇ ಪಕ್ಷದ ವರಿಷ್ಠರನ್ನು ಕಡೆಗಣಿಸುತ್ತದೆ. ನಮ್ಮ ಅಂತ್ಯೋದಯ ಓರ್ವಚಹಾ ಮಾರುವವನ್ನು ಕೂಡಾ ಪ್ರಧಾನ ಮಂತ್ರಿಯನ್ನಾಗಿಸುತ್ತದೆ ಎಂದು ಮೋದಿ ಹೇಳಿದರು.
. ಕಾಂಗ್ರೆಸ್ ಕೇವಲ ಘೋಷಣೆಗಳನ್ನು ಮಾತ್ರವೇ ನೀಡಿದೆ. ನಮ್ಮ ಅಂತ್ಯೋದಯ ಬಡತವನ್ನು ಶೀಘ್ರಗತಿಯಲ್ಲಿ ಕಡಿಮೆಗೊಳಿಸಿದೆ. ಅವರ ವಂಶೋದಯ ದಲ್ಲಾಳಿಗಳು, ಮಧ್ಯವರ್ತಿಗಳನ್ನು ಸೃಷ್ಟಿಸಿದೆ. ನಮ್ಮ ಅಂತ್ಯೋದಯ ಜನ್‌ಧನ್, ಆಧಾರ್, ಮೊಬೈಲ್‌ಗಳನ್ನು ಸೇರಿಸಿ ಜೆಎಂಎಂ ಆಧುನಿಕ ವ್ಯವಸ್ಥೆಯನ್ನು ರೂಪಿಸಿದೆ. ಅವರ ವಂಶೋದಯತುಷ್ಟೀಕರಣವನ್ನು ತಮ್ಮ ರಾಜನೀತಿಯ ಆಧಾರವನ್ನಾಗಿಸಿದೆ. ನಮ್ಮ ಅಂತ್ಯೋದಯ ಸರ್ವರ ಸಹಕಾರ ಸರ್ವರ ವಿಕಾಸದ ಮಾರ್ಗವನ್ನು ಆಯ್ಕೆ ಮಾಡಿದೆ. ಅವರ ವಂಶೋದಯ ತಮ್ಮ ಪರಿವಾರವನ್ನೇ ಉದ್ಧಾರವಾಗಿಸಿದೆ. ನಮ್ಮ ಅಂತ್ಯೋದಯ ಸಮಾಜದ ಅನ್ಯ ಅಪರಿಚಿತ ಮುಖವನ್ನೂ ಸಮ್ಮಾನ ನೀಡುತ್ತದೆ
ಕಾಂಗ್ರೆಸ್- ಜೆಡಿಎಸ್ ಮತ್ತು ಇತರ ಎಲ್ಲಾ ದಳಗಳ ಪ್ರೇರಣೆ ಪರಿವಾರವಾದ. ನಮ್ಮ ಪ್ರೇರಣೆ ರಾಷ್ಟ್ರವಾದ. ಅವರು ತಮ್ಮ ಪರಿವಾರವನ್ನು ತಮ್ಮ ಕೊನೆಯ ಸದಸ್ಯನವರೆಗೆ ಅಧಿಕಾರ ಒದಗಿಸಲು ದಾರಿ ಹುಡುಕುತ್ತಿರುತ್ತಾರೆ. ನಾವು ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ದಿಗೆ ಶ್ರಮಿಸುತ್ತೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳನ್ನು ಟೀಕಿಸಿದರು.
ತನ್ನ ಸಾಮರ್ಥ್ಯ, ಕನಸಿನ ಮೇಲೆ ಭರವಸೆ ಹೊಂದಿರುವ ಭಾರತವನ್ನು ಸ್ವಾತಂತ್ರ ನಂತರ ಆಳಿದ ಕಾಂಗ್ರೆಸ್ ಭಾರತಕ್ಕೆ ತನ್ನ ಹಕ್ಕಾದ ಬಹುಶಾಸನ ನೀಡಿಲ್ಲ. ಕಾಂಗ್ರೆಸ್‌ಗೆ ಅವಕಾಶ ನೀಡಿದ್ದರೂ ಅದನ್ನುಒಂದು ಕುಟುಂಬಕ್ಕೆ ಅದು ಸಮರ್ಪಣೆ ಮಾಡಿತ್ತು.
ರಾಮನಾಥಪುರದಲ್ಲಿ ನಾವು ಅಬ್ದುಲ್ ಕಲಾಂರವರ ಸ್ಮಾರಕ ಮಾಡಿದ್ದೇವೆ. ಡಾ. ರಾಧಾಕೃಷ್ಣ ಭಾರತದ ರಾಷ್ಟ್ರಪತಿಯಾಗಿದ್ದರು. ಅವರ ಸ್ಮಾರಕವನ್ನುಮಾಡಲಾಗಿಲ್ಲ. ಬದಲಾಗಿ ತಮ್ಮ ಪರಿವಾರದವರ ಹಲವಾರು ಸ್ಮಾರಕಗಳನ್ನು ಕಾಂಗ್ರೆಸ್ ಮಾಡಿದೆ, ಆದರೆ ದೇಶದ ರಾಷ್ಟ್ರಪತಿಯೊಬ್ಬರಿಗೆ ಇಂತಹ ಸನ್ಮಾನವನ್ನು ನೀಡಿಲ್ಲ ಎಂದು ಮೋದಿ ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದರು.
ಪಿಎಂ ಕಿಸಾನ್ ಯೋಜನೆಯ ಪ್ರಥಮ ಮತ್ತು ದ್ವಿತೀಯ ಹಂತದ ಹಣ ಕೃಷಿಕ ಕುಟುಂಬಗಳಿಗೆ ದೇಶದ ಹಲವಾರು ರಾಜ್ಯಗಳಲ್ಲಿ ಸಿಗಲಾರಂಭಿಸಿದೆ. ಆದರೆ ಕರ್ನಾಟಕದ ಕಾಂಗ್ರೆಸ್ ಜೆಡಿಎಸ್ ಸರಕಾರ ಇದರಲ್ಲಿಯೂ ಆಟವಾಡುತ್ತಿದೆ. ಕೃಷಿಕರ ಪಟ್ಟಿಯನ್ನು ನೀಡುವಲ್ಲಿಯೂ ರಾಜನೀತಿ ಮಾಡುತ್ತಿದೆ. 10 ಬಾರಿ ಕೇಳಿದರೆ ಸಣ್ಣ ಪತ್ರವೊಂದನ್ನು ನೀಡುತ್ತಾರೆ. ಇದರಿಂದಾಗಿ ಇಲ್ಲಿನ ಕೃಷಿಕರಿಗೆ ಆ ಯೋಜನೆ ದೊರೆಯದಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆಪಾದಿಸಿದರು.
ಸಾಲ ಮನ್ನಾದ ಘೋಷಣೆ ಮಾಡಿ ಅದನ್ನು ನಿಭಾಯಿಸಲಿಲ್ಲ. ಇದೀಗ ಕೇಂದ್ರ ಸರಕಾರ ಮಾಡಿದರೂ ಅದಕ್ಕೂ ಅಡ್ಡಿ ಪಡಿಸುತ್ತಾರೆ. ಹಾಗಾಗಿ ಮುಂಬರುವ ಚುನಾವಣೆಯಲ್ಲಿ ಈ ಮೈತ್ರಿ ಸರಕಾರಕ್ಕೆ ಬುದ್ಧಿ ಕಲಿಸಬೇಕು ಎಂದು ಅವರು ಹೇಳಿದರು.
ಬಿಜೆಪಿ ನೇತೃತ್ವದ ಸರಕಾರ ಮೀನುಗಾರರ ಬಗ್ಗೆ ಹೆಚ್ಚಿನ ಒತ್ತು ನೀಡಿದ್ದು, ಮೇ 26ರ ಬಳಿಕ ಮತ್ತೆ ಮೋದಿ ಸರಕಾರ ಬಂದಾಗ ನಾವು ಮೀನುಗಾರರಿಗೆ ಪ್ರತ್ಯೇಕ ಮಂತ್ರಾಲಯದ ಜತೆಗೆ, ಪ್ರತ್ಯೇಕ ಸಚಿವರೂ ನೇಮಕವಾಗಲಿದ್ದಾರೆ ಎಂದು ಮೋದಿ ಹೇಳಿದರು.
ನವ ಭಾರತಕ್ಕಾಗಿ ಚೌಕೀದಾರ ಮಾಡಿರುವ ಎಲ್ಲಾ ಸಂಕಲ್ಪಗಳನ್ನು ಅವುಗಳು ಈಡೇರಿಸಲು ಸಹಕಾರ ನೀಡಬೇಕು. ಮತ್ತೊಮ್ಮೆ ಕಮಲವನ್ನು ಅರಳಿಸಿ, ಚೌಕೀದಾರನನ್ನು ಸಶಕ್ತಗೊಳಿಸಬೇಕು ಎಂದು ಮನವಿ ಮಾಡಿದರು.
ವಿಮಾನ ನಿಲ್ದಾಣದಿಂದ ಇಲ್ಲಿಯವರೆಗೆ ಮಾನವ ಗೋಡೆಯೇ ನಿರ್ಮಾಣವಾಗಿತ್ತು. ಅದನ್ನು ನೋಡಿದಾಗ ಇಲ್ಲಿ ಯಾರು ಇರುತ್ತಾರೋ ಇಲ್ಲವೋ ಎಂಬ ಶಂಕೆಯಾಗಿತ್ತು. ಆದರೆ ಅಲ್ಲಿಯೂ ಜನಸಾಗರ ಇಲ್ಲಿಯೂ ಜನಸಾಗರ. ನಾನು ಇಲ್ಲಿಗೆ ಬಂದಾಗ ನಿಮ್ಮ ಈ ಸ್ನೇಹ ನೋಡಿ ಸಂತಸವಾಗುತ್ತದೆ. ಈ ವಿಶ್ವಾಸದಿಂದಲೇ ನಾನು ದೇಶ ಹಿತಕ್ಕಾಗಿ ಹಿರಿದಾದ ಹಾಗೂ ಕಠಿಣವಾದ ನಿರ್ಣಯಗಳನ್ನು ಕೈಗೊಳ್ಳಲು ತಾಕತ್ತು ಬರುತ್ತಿದೆ. ಈ ಮೋದಿ ಕೇವಲ ಬೆಣ್ಣೆಯಲ್ಲಿ ಗೆರೆ ಎಳೆಯುವವನಲ್ಲ. ಬದಲಿಗೆ ಕಲ್ಲಿನಲ್ಲಿಯೂ ಗೆರೆ ಹಾಕಬಲ್ಲ ಎಂದು ಮೋದಿ ಹೇಳಿಕೊಂಡರು.
ಕಳೆದ ಐದು ವರ್ಷ ನಾನು ಏನು ಮಾಡಲು ಸಾಧ್ಯವಾಯಿತೋ ಅದರಿಂದಾಗಿ ಇಂದು ಪ್ರಪಂಚದಲ್ಲಿ ಭಾರತದ ಜೈಕಾರ ಕೇಳುತ್ತಿದೆ. ಇದೆಲ್ಲಾ ಹೇಗೆ ಸಾಧ್ಯವಾಯಿತು ಎಂದಾಗ, ಸೇರಿದ್ದ ಜನತೆ ಮೋದಿ ಮೋದಿ ಎಂದು ಹೇಳಲಾರಂಭಿಸಿದರು. ಮೋದಿಯವರು ಇದು ತಪ್ಪು, ಇದು ಮೋದಿಯಿಂದ ಅಲ್ಲ. ಇದು ನಿಮ್ಮ ಒಂದು ಮತದಿಂದ ಎಂದರು.
2014ರಲ್ಲಿ ನೀವು ನನಗೆ ಆಶೀರ್ವಾದ ನೀಡಿದ್ದರಿಂದ ನನಗೆ ತಾಕತ್ತು ದೊರಕಿದೆ. ಅದರಿಂದಾಗಿ ನಾನು ಕಠಿಣ ನಿರ್ಣಯ ಕೈಗೊಳ್ಳಲು ಸಾಧ್ಯವಾಯಿತು. ಅದಕ್ಕಾಗಿ ಇಂದು ನಾನು ಮಂಗಳೂರು ಜನತೆಗೆ ತಲೆ ತಗ್ಗಿಸಿ ಧನ್ಯವಾದ ಹೇಳಲು ಬಂದಿದ್ದೇನೆ ಎಂದು ಮೋದಿ ಹೇಳಿದರು.
ವೇದಿಕೆಯಲ್ಲಿ ವೇದವ್ಯಾಸ ಕಾಮತ್, ಸಿ.ಟಿ. ರವಿ, ಕೋಟ ಶ್ರೀನಿವಾಸ ಪೂಜಾರಿ, ರಾಜೇಶ್ ನಾಯ್ಕ್, ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ಸುಕುಮಾರ್ ಶೆಟ್ಟಿ, ಲಾಲಾಜಿ ಮೆಂಡನ್, ಪ್ರತಾಪ್ಸಿಂಹ ನಾಯಕ್, ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಮೋನಪ್ಪ ಭಂಡಾರಿ, ಭರತ್ ಶೆಟ್ಟಿ, ರಘುಪತಿ ಭಟ್, ಗಣೇಶ್ ಕಾರ್ಣಿಕ್, ರತ್ನಾಕರ ಹೆಗಡೆ ವೊದಲಾವದರು ಉಪಸ್ಥಿತರಿದ್ದರು.
ಸಂಜೀವ ಮಠಂದೂರು ಸ್ವಾಗತಿಸಿದರು. ಸುದರ್ಶನ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೂ ವೊದಲು ರಾಷ್ಟ್ರ ಭಕ್ತಿ ಗೀತೆಗಳನ್ನು ಹಾಡಲಾಯಿತು.
ಬಿಗಿ ಪೊಲೀಸ್ ಬಂದೋಬಸ್ತ್: ಬೆಳಗ್ಗಿನಿಂದಲೇ ನಗರದ ಪ್ರಮುಖ ಸ್ಥಳಗಳಲ್ಲಿ ಖಾಕಿ ಪಡೆಯನ್ನು ನಿಯೋಜಿ ಸಲಾಗಿತ್ತು. ನಗರದಲ್ಲಿ ಓಡಾಡುತ್ತಿದ್ದ ವಾಹನಗಳು, ಜನ ಸಂಚಾರದ ಮೇಲೆ ತೀವ್ರ ನಿಗಾ ವಹಿಸಿದ್ದರು. ಏರ್‌ಪೋರ್ಟ್ ರಸ್ತೆಯುದ್ದಕ್ಕೂ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಈ ರಸ್ತೆಯ ಇಕ್ಕೆಲಗಳಲ್ಲೂ ಪ್ಲಾಸ್ಟಿಕ್ ಟೇಪು ಹಾಕಿ ಬೆಳಗ್ಗೆ 8 ಗಂಟೆಯಿಂದ ಅವರು ನಿರ್ಗಮಿ ಸುವವರೆಗೆ ವಾಹನ ಪಾರ್ಕಿಂಗ್ ನಿರ್ಬಂಧಿ ಸಲಾಗಿತ್ತು. ಸಮಾವೇಶ ನಡೆಯುವ ನೈಹರೂ ಮೈದಾನದ ಸುತ್ತ-ಮುತ್ತಲಿನ ರಸ್ತೆಗಳಲ್ಲಿಯೂ ವಾಹನ ಸಂಚಾರವನ್ನು ಮಧ್ಯಾಹ್ನದಿಂದ ಮೋದಿ ಅವರು ಕಾರ್ಯಕ್ರಮಕ್ಕೆ ಬಂದು ಹೋಗುವ ತನಕ ನಿಷೇಧಿಸಲಾಗಿತ್ತು. ಶನಿವಾರ ವೀಕೆಂಡ್ ಆಗಿದ್ದರೂ ನಗರದ ಮಾಲ್‌ಗಳು, ಸಿನೆಮಾ ಮಂದಿರ, ಶಾಪಿಂಗ್ ಅಂಗಡಿಗಳಲ್ಲಿ ಎಂದಿನಂತೆ ಜನದಟ್ಟನೆ ಕಂಡುಬರಲಿಲ್ಲ. ಇನ್ನೊಂದೆಡೆ, ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಾಗಿದ್ದು, ಶಾಪಿಂಗ್ ಹೋಗುವವರ ಸಂಖ್ಯೆ ಕೂಡ ಕಡಿಮೆಯಿತ್ತು.
ಭದ್ರತಾ ದೃಷ್ಟಿಯಿಂದ ಮತ್ತು ಸಂಚಾರ ದಟ್ಟನೆೆಯನ್ನು ಗಮನಿಸಿಕೊಂಡು ನಗರ ದೊಳಗೆ ಪ್ರವೇಶವಾಗುವ ವಾಹನ ಗಳ ಸಂಚಾರವನ್ನು ತಾತ್ಕಾಲಿಕವಾಗಿ ಮಾರ್ಪಾಡು ಮಾಡಲಾಗಿತ್ತು. ಸಿಟಿ ಬಸ್‌ಗಳು, ಸರ್ವಿಸ್ ಬಸ್‌ಗಳು, ಅಂತರ್ ಜಿಲ್ಲಾ ಬಸ್‌ಗಳು ಮಧ್ಯಾಹ್ನ ಒಂದು ಗಂಟೆಯಿಂದ ಸಂಜೆ 7ರ ವರೆಗೆ ಡ್ರಾಪಿಂಗ್ ಪಾಯಿಂಟ್‌ಗಳಾದ ಜ್ಯೋತಿ, ಮಂಗಳಾದೇವಿ, ನವಭಾರತ ಸರ್ಕಲ್‌ನಲ್ಲಿ ಪ್ರಯಾಣಿಕರನ್ನು ಇಳಿಸಿ ವಾಪಾಸ್ ಹೋಗುವ ವ್ಯವಸ್ಥೆ ಕಲ್ಪಿಸಲಾ ಗಿತ್ತು. ಕೆಎಸ್ಸಾರ್ಟಿಸಿ ಬಸ್‌ಗಳು ಪಂಪ್‌ವೆಲ್- ನಂತೂರು- ಕೆಪಿಟಿ- ಕುಂಟಿಕಾನ ಮೂಲಕ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಹಾಗೂ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಹೊರಡುವ ಬಸ್‌ಗಳು ಅದೇ ಮಾರ್ಗದಲ್ಲಿ ವಾಪಾಸ್ ಹೋಗಿತ್ತು.
ಮುನ್ನೆಚ್ಚರಿಕೆ ಕ್ರಮವಾಗಿ ಮೈದಾನದೊಳಗೆ ಆ್ಯಂಬುಲೆನ್ಸ್ ವ್ಯವಸ್ಥೆಗೊಳಿಸಲಾಗಿತ್ತು. ನಗರದಲ್ಲಿ ಸಾರ್ವಜನಿಕರಿಗೆ ಸಂಚಾರಿ ವ್ಯವಸ್ಥೆಯಿಂದ ತೊಂದರೆ ಆಗ ಬಾರದು ಎಂಬ ಉದ್ದೇಶದಿಂದ ಪ್ರಮುಖ ಜಂಕ್ಷನ್‌ಗಳಲ್ಲಿ ಬಿಜೆಪಿ ಕಾರ್ಯ ಕರ್ತರೇ ನಿಂತು ಸುಗಮ ಸಂಚಾರಕ್ಕೆ ನೆರವಾಗುತ್ತಿದ್ದ ದೃಶ್ಯ ಕಂಡುಬಂತು.
ಭಾರತ್ ಮಾತಾಕಿ ಜೈ ಎಂದು ಹೇಳುತ್ತಾ, ಮೈದಾನದ ಹೊರಗಿನ ಮರದ ಮೇಲೆ ಹತ್ತಿ ಕುಳಿತಿದ್ದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನೀವು ಸುರಕ್ಷಿತರಿದ್ದೀರಾ ಎಂದು ಕೇಳಿದರು. ಮಾತ್ರವಲ್ಲದೆ ಮರದಿಂದ ಇಳಿಯುವಂತೆ ಮನವಿ ಮಾಡಿದರು. ಈ ರೀತಿಯ ಅಪಾಯವನ್ನು ಹೊಂದಬಾರದು. ನಾನು ನಿಮ್ಮವನೇ, ಮತ್ತೊಮ್ಮೆ ಬರುವೆ ಎಂದರು.
ನೆಹರೂ ಮೈದಾನದಲ್ಲಿ ಪ್ರಚಾರ ಸಭೆಗೆ ಕಾರ್ಯಕರ್ತರನ್ನು ಕರೆ ತರಲು ಹತ್ತಾರು ಸಿಟಿ ಬಸ್‌ಗಳು ತೆರಳಿದ್ದರಿಂದ ನಗರದ ಅನೇಕ ಕಡೆಗಳಿಗೆ ತೆರಳುವ ಸಿಟಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದಾಗಿ ಪ್ರಯಾ ಣಿಕರು ಪರದಾಡು ವಂತಾ ಗಿತ್ತು. ನಗರದ ಸಂಚಾರ ವ್ಯವಸ್ಥೆ ಯಲ್ಲಿ ಮಾರ್ಪಾಡು ಮಾಡಿದ ವಿಚಾರ ತಿಳಿಯದ ಕೆಲವು ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಲು ಕಷ್ಟಪಟ್ಟರು. ಇನ್ನು, ಜ್ಯೋತಿ, ಹಂಪನಕಟ್ಟೆ, ಪಿವಿಎಸ್ ವೃತ್ತ, ಲಾಲ್‌ಬಾಗ್, ಸಿಟಿಸೆಂಟರ್ ಬಸ್ ನಿಲ್ದಾಣ ಸಹಿತ ಬಹುತೇಕ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ಕಾಯು ತ್ತಿದ್ದ ದೃಶ್ಯ ಕಂಡುಬಂತು.
__Sathish Kapikad
Comments are closed.