ಕ್ರೀಡೆ

ಡೆಲ್ಲಿಯ ಅದ್ಬುತ ಬೌಲಿಂಗ್ ದಾಳಿಗೆ ಬೆದರಿದ ಸನ್ ರೈಸರ್ಸ್ ಹೈದರಾಬಾದ್ ; 39 ರನ್ ಅಂತರದ ಗೆಲುವು ದಾಖಲಿಸಿದ ಡೆಲ್ಲಿ ಕ್ಯಾಪಿಟಲ್ಸ್

Pinterest LinkedIn Tumblr

ಹೈದರಾಬಾದ್: ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಸುಲಭ ಟಾರ್ಗೆಟ್, ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಚೇಸ್ ಮಾಡಲು ಸಾಧ್ಯವಾಗಿಲ್ಲ. ಡೆಲ್ಲಿ ತಂಡದ ಅದ್ಬುತ ಬೌಲಿಂಗ್ ದಾಳಿ ಗೆ ಹೈದರಾಬಾದ್ ತತ್ತರಿಸಿತು. ಹೀಗಾಗಿ ಡೆಲ್ಲಿ 39 ರನ್ ಗೆಲುವು ಸಾಧಿಸಿದೆ.

ಈ ಮೂಲಕ ಆಡಿರುವ ಎಂಟು ಪಂದ್ಯಗಳಲ್ಲಿ ಐದನೇ ಗೆಲುವು ದಾಖಲಿಸಿರುವ ಡೆಲ್ಲಿ ಒಟ್ಟು 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಅಲ್ಲದೆ ಸತತ ನಾಲ್ಕನೇ ಗೆಲುವು ದಾಖಲಿಸಿದೆ. ಅತ್ತ ಏಳು ಪಂದ್ಯಗಳಲ್ಲಿ ಆರು ಅಂಕಗಳನ್ನು ಮಾತ್ರ ಸಂಪಾದಿಸಿರುವ ಹೈದರಾಬಾದ್ ಆರನೇ ಸ್ಥಾನದಲ್ಲೇ ಮುಂದುವರಿದಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕಾಲಿನ್ ಮನ್ರೊ (40) ಹಾಗೂ ನಾಯಕ ಶ್ರೇಯಸ್ ಅಯ್ಯರ್ (45) ಉಪಯುಕ್ತ ಇನ್ನಿಂಗ್ಸ್‌ಗಳ ನೆರವಿನಿಂದ ಏಳು ವಿಕೆಟ್ ನಷ್ಟಕ್ಕೆ 155 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು.

ಬಳಿಕ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‌ಸ್ಟೋವ್ ಮೊದಲ ವಿಕೆಟ್‌ಗೆ 72 ರನ್‌‌ಗಳ ಜತೆಯಾಟ ನೀಡಿದಾಗ ಹೈದರಾಬಾದ್ ಸುಲಭ ಗೆಲುವು ದಾಖಲಿಸಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಸಾಂಘಿಕ ದಾಳಿ ಸಂಘಟಿಸಿದ ಕೀಮೊ ಪೌಲ್ (17/3), ಕ್ರಿಸ್ ಮೋರಿಸ್ (22/3) ಹಾಗೂ ಕಗಿಸೋ ರಬಡ (22/4) ನೆರವಿನಿಂದ ಡೆಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ವಾರ್ನರ್ ಹಾಗೂ ಬೈರ್‌ಸ್ಟೋವ್ ಹೊರತುಪಡಿಸಿ ಇತರೆ ಯಾವ ಎಸ್‌ಆರ್‌ಎಚ್ ಬ್ಯಾಟ್ಸ್‌ಮನ್ ಎರಡಂಕಿಯನ್ನು ತಲುಪಲು ಯಶಸ್ವಿಯಾಗಲಿಲ್ಲ.

ಸ್ಪರ್ದಾತ್ಮಕ ಮೊತ್ತ ಬೆನ್ನಟ್ಟಿದ ಹೈದರಾಬಾದ್ ತಂಡಕ್ಕೆ ಮಗದೊಮ್ಮೆ ಓಪನರ್‌ಗಳಾದ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‌ಸ್ಟೋವ್ ಉತ್ತಮ ಆರಂಭವೊದಗಿಸುವ ಮೂಲಕ ಆಸರೆಯಾದರು.

ಎಂದಿಗಿಂತಲೂ ವಿಭಿನ್ನವಾಗಿ ವಾರ್ನರ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರೆ ಬೈರ್‌ಸ್ಟೋವ್ ಬಿರುಸಿನ ಆಟವಾಡಿದರು. ಅಲ್ಲದೆ ಮೊದಲ ವಿಕೆಟ್‌ಗೆ 9.5 ಓವರ್‌ಗಳಲ್ಲಿ 72 ರನ್‌ಗಳ ಜತೆಯಾಟವನ್ನು ನೀಡಿದರು. ಈ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ಬೈರ್‌ಸ್ಟೋವ್ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. 31 ಎಸೆತಗಳನ್ನು ಎದುರಿಸಿದ ಬೈರ್‌ಸ್ಟೋವ್ ಐದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 41 ರನ್ ಗಳಿಸಿದರು.

ಬೈರ್‌ಸ್ಟೋವ್ ಬೆನ್ನಲ್ಲೇ ನಾಯಕ ಕೇನ್ ವಿಲಿಯಮ್ಸನ್ (3) ಹೊರದಬ್ಬಿದ ಕೀಮೊ ಪಾಲ್ ಡಬಲ್ ಆಘಾತವನ್ನು ನೀಡಿದರು. ಇದರೊಂದಿಗೆ ಪಂದ್ಯವು ಮತ್ತಷ್ಟು ರೋಚಕ ಹಂತವನ್ನು ತಲುಪಿತು.

ಈ ಹಂತದಲ್ಲಿ ಗೇರ್ ಬದಲಾಯಿಸಿದ ವಾರ್ನರ್, ಡೆಲ್ಲಿ ಬೌಲರ್‌ಗಳನ್ನು ದಂಡಿಸತೊಡಗಿದರು. ಅಂತಿಮ ಐದು ಓವರ್‌ಗಳಲ್ಲಿ ಎಸ್‌ಆರ್‌ಎಚ್ ಗೆಲುವಿಗೆ 56 ರನ್‌ಗಳ ಅವಶ್ಯಕತೆಯಿತ್ತು.

ರಿಕಿ ಬೂಯಿ (7) ಹಾಗೆ ಬಂದು ಹೀಗೆ ಹೋದರು. ಅತ್ತ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ಕೇವಲ 17 ರನ್ ತೆತ್ತು ಮೂರು ವಿಕೆಟುಗಳನ್ನು ಕಬಳಿಸಿದ ಕೀಮೊ ಪೌಲ್ ಹೈದರಾಬಾದ್‌ಗೆ ಕಂಟಕ ಒಡ್ಡಿದರು.

ಅತ್ತ 46 ಎಸೆತಗಳಲ್ಲಿ ವಾರ್ನರ್ ಅರ್ಧಶತಕ ಬಾರಿಸಿದರು. ಆದರೆ ಫಿಪ್ಟಿ ಬೆನ್ನಲ್ಲೇ ಕಗಿಸೋ ರಬಡ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಈ ಮೂಲಕ ರಬಡ ಡೆಲ್ಲಿಗೆ ನಿರ್ಣಾಯಕ ಬ್ರೇಕ್ ಒದಗಿಸಿದರು. 47 ಎಸೆತಗಳನ್ನು ಎದುರಿಸಿದ ವಾರ್ನರ್ ಮೂರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 51 ರನ್ ಗಳಿಸಿದರು.

ವಾರ್ನರ್ ಪತನದ ಬೆನ್ನಲ್ಲೇ ಪೆವಿಲಿಯನ್ ಪರೇಡ್ ಆರಂಭವಾಯಿತು. ಅಷ್ಟೇ ಯಾಕೆ ಕೊನೆಯ ಎಂಟು ವಿಕೆಟುಗಳನ್ನು ಕೇವಲ 15 ರನ್ ಅಂತರದಲ್ಲಿ ಕಳೆದುಕೊಳ್ಳುವ ಮೂಲಕ 18.5 ಓವರ್‌ಗಳಲ್ಲೇ 116 ರನ್‌ಗಳಿಗೆ ಸರ್ವಪತನವನ್ನು ಕಂಡಿತು. ಇನ್ನುಳಿದಂತೆ ವಿಜಯ್ ಶಂಕರ್ (1), ದೀಪಕ್ ಹೂಡಾ (3), ಅಭಿಷೇಕ್ ಶರ್ಮಾ (2), ರಶೀದ್ ಖಾನ್ (0), ಭುವನೇಶ್ವರ್ ಕುಮಾರ್ (2), ಖಲೀಲ್ ಅಹ್ಮದ್ (0) ಹಾಗೂ ಸಂದೀಪ್ ಶರ್ಮಾ (1*)ನಿರಾಸೆ ಮೂಡಿಸಿದರು.

ಡೆಲ್ಲಿ ಪರ ಘಾತಕ ದಾಳಿ ಸಂಘಟಿಸಿದ ಕೀಮೊ ಪೌಲ್, ಕಗಿಸೋ ರಬಡ ಹಾಗೂ ಕ್ರಿಸ್ ಮೊರಿಸ್ ಗೆಲುವಿನ ರೂವಾರಿ ಎನಿಸಿಕೊಂಡರು.

Comments are closed.