ಬೆಂಗಳೂರು: ಚಾಮರಾಜನಗರ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇಂದು ಮಳೆರಾಯ ಅಬ್ಬರಿಸಿದ್ದು, ಮರಗಳು, ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಕೆಲವು ಕಡೆಗಳಲ್ಲಿ ಮಳೆ ಸಹಿತ ಬಿರುಗಾಳಿಯಿಂದಾಗಿ ಮನೆ ಹಾಗೂ ಅಂಗಡಿಯ ಶೀಟ್‍ಗಳು ಹಾರಿ ಹೋಗಿವೆ.
ಬೆಂಗಳೂರಿನ ಮೆಜೆಸ್ಟಿಕ್, ಯಶವಂತಪುರ, ಕೊಡಗೇನಹಳ್ಳಿಯಲ್ಲಿ ಮಳೆರಾಯ ತಂಪೆರೆದಿದ್ದಾನೆ. ಬಿರುಗಾಳಿ ಸಹಿತ ಮಳೆಯಿಂದಾಗಿ ಆರ್ ಎಂವಿ 2ನೇ ಹಂತದ 7ನೇ ಅಡ್ಡರಸ್ತೆಯಲ್ಲಿ ಮರವೊಂದು ಬುಡಸಮೇತ ಧರೆಗೆ ಉರುಳಿದೆ. ರಾಜ್ಯದಾದ್ಯಂತ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಭಾರೀ ಮಳೆ ಸಂಭವವಿದೆ. ಪ್ರತಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಚಿತ್ರದುರ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಹವಾಮಾನ ಇಲಾಖೆ ಸೂಚನೆ ನೀಡಿದೆ.
ನೆಲಮಂಗಲ ಪಟ್ಟಣದ ಬಸವಣ್ಣ ದೇವರ ಮಠದಲ್ಲಿ ಬಸವ ಜಯಂತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆದರೆ ಬಿರುಗಾಳಿ ಸಹಿತ ಮಳೆಯಿಂದಾಗಿ ಪೆಂಡಾಲ್ ನೆಲಸಮವಾಗಿದೆ. ಇತ್ತ ಕೆಲವು ಅಂಗಡಿಗಳ ಶೀಟ್‍ಗಳು ಗಾಳಿಗೆ ಹಾರಿಹೋಗಿವೆ. ನೆಲಮಂಗಲ ತರಕಾರಿ ಮಾರುಕಟ್ಟೆಗೆ ನೀರು ನುಗ್ಗಿದ್ದು, ವ್ಯಾಪಾರಸ್ಥರು ಮತ್ತು ಗ್ರಾಹಕರು ಪರದಾಡುವಂತಾಗಿದೆ. ಅಷ್ಟೇ ಅಲ್ಲದೆ ಎಂ.ಜಿ.ರಸ್ತೆ ಬದಿಯ ರಾಜಕಾಲುವೆ ತುಂಬಿಹರಿಯುತ್ತಿದ್ದು, ರಸ್ತೆ ಜಲಾವೃತವಾಗಿದ್ದು, ಮನೆ, ಅಂಗಡಿಗಳಿಗೆ ಕೊಳಚೆ ನೀರು ನುಗ್ಗುತ್ತಿದೆ.
ನೆಲಮಂಗಲ ತಾಲೂಕಿನ ಮಲ್ಲಾಪುರ ಗ್ರಾಮದ ಶಿವಣ್ಣ ಎಂಬವರ ಮನೆಯ ಶೀಟುಗಳು ಹಾರಿ ಅನಾಹುತ ಉಂಟಾಗಿದೆ. ತಕ್ಷಣವೇ ಸ್ಥಳೀಯರು ಮನೆಯಲ್ಲಿದ್ದವರನ್ನು ರಕ್ಷಣೆ ಮಾಡಿದ್ದಾರೆ. ಘಟನೆಯಲ್ಲಿ ಒಬ್ಬರಿಗೆ ಗಾಯವಾಗಿದ್ದು, ಮನೆಯಲ್ಲಿ ನೀರು ತುಂಬಿ ವಸ್ತುಗಳು ಹಾಳಾಗಿವೆ. ಬೆಂಗಳೂರು ಹೊರ ವಲಯದ ಆನೇಕಲ್ ತಾಲೂಕಿನ ಇಂಡ್ಲಬೆಲೆ ಗ್ರಾಮದಲ್ಲಿ ಆಲಿಕಲ್ಲು ಮಳೆಯಾಗಿದೆ. ಆನೇಕಲ್ ಪಟ್ಟಣ ಸೇರಿದಂತೆ ವಿವಿಧೆಡೆ ಮಳೆಯಾಗಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಮಿಂಚು ಗುಡುಗು ಸಹಿತ ಮಳೆಯಾಗಿದೆ. ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿ ಉರಿದಿದೆ. ಮಳೆ ಬರುತ್ತಿದ್ದರಿಂದ ಬೆಂಕಿ ನಂದಿ, ಭಾರೀ ಅನಾಹುತ ತಪ್ಪಿದೆ.
ಕೋಲಾರ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಜೋರು ಮಳೆಯಾಗುತ್ತಿದ್ದು, ಮಳೆಗೆ ಕೆಲವೆಡೆ ವಿದ್ಯುತ್ ಕಂಬಗಳು ಹಾಗೂ ತೆಂಗಿನ ಮರಗಳು ನೆಲಕ್ಕುರುಳಿವೆ. ಜಿಲ್ಲೆಯ ಕೋಲಾರ, ಮಾಲೂರು, ಬಂಗಾರಪೇಟೆ, ಮುಳಬಾಗಲು ಹಾಗೂ ಕೆಜಿಎಫ್ ತಾಲೂಕಿನ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಮಾಲೂರು ತಾಲೂಕಿನ ದೊಡ್ಡ ಕಡತೂರು ಗ್ರಾಮದ ಸಪ್ತಗಿರಿ ಎಂಬವರ ಪಾಲಿ ಹೌಸ್ ಗಾಳಿ, ಮಳೆಗೆ ನಾಶವಾಗಿದ್ದು, ಲಕ್ಷಾಂತರ ರೂಪಾಯಿಯ ವಿವಿಧ ಬೆಳೆಗಳು ಹಾಳಾಗಿವೆ.
ಉತ್ತಮ ಭರಣಿ ಮಳೆಗೆ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ರೈತರು ಉಳುಮೆ ಮಾಡಲು ಅನುಕೂಲವಾದ ಮಳೆಯಾಗಿದೆ. ಸುಮಾರು ಒಂದುವರೆ ಗಂಟೆಯಿಂದ ಬಿಡದೆ ಸುರಿದ ಮಳೆಗೆ ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರಿಳಿವೆ. ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರ ಪರದಾಡುತ್ತಿದ್ದು, ಕೆಜಿಎಫ್ ತಾಲೂಕಿನ ಬೇತಮಂಗಲದಲ್ಲಿ ಮನೆ ಮೇಲೆ ತೆಂಗನ ಮರ ಹಾಗೂ ವಿದ್ಯುತ್ ಕಂಬ ಬಿದ್ದಿದೆ. ಸರಿಯಾದ ಸಮಯಕ್ಕೆ ವಿದ್ಯುತ್ ಕಡಿತವಾಗಿದ್ದು ಯಾವುದೆ ಪ್ರಾಣಾಪಾಯ ಸಂಭವಿಸಿಲ್ಲ. ಕೆಲವೆಡೆ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದು, ರಸ್ತೆಗಳೆಲ್ಲಾ ಹೊಂಡಗಳಾಗಿದ್ದು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊಡಗು ಜಿಲ್ಲೆಯ ಮಡಿಕೇರಿ, ಸುಂಟಿಕೊಪ್ಪ, ಸಿದ್ದಾಪುರ ಸೇರಿದಂತೆ ವಿವಿಧಡೆ ಮಳೆರಾಯ ತಂಪೆರೆದಿದ್ದಾನೆ. ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗಿದ್ದು, ಕೆಲವೆಡೆ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದೆ. ಮೈಸೂರು ನಗರ ಸೇರಿದಂತೆ ಹಲವೆಡೆ ಭರ್ಜರಿ ಮಳೆಯಾಗಿದೆ. ಇದರಿಂದಾಗಿ ವಾಹನ ಸವಾರರ ಪರದಾಟ, ಅಲ್ಲಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.
Comments are closed.