ಮಂಗಳೂರು, ಜೂನ್ 7: ಐಷಾರಾಮಿ ಕಾರಿನಲ್ಲಿ ಅಕ್ರಮವಾಗಿ, ಹಿಂಸಾತ್ಮಕವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಉರುಳಿದ ಪರಿಣಾಮ ಕಾರಿನಲ್ಲಿದ್ದ ಆರು ಜಾನುವಾರುಗಳು ಅಸುನೀಗಿದ ಘಟನೆ ಮುಂಡಾಜೆ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಪರಶುರಾಮ ದೇವಸ್ಥಾನದ ಚಾರ್ಮಾಡಿ ರಸ್ತೆ ತಿರುವಿನಲ್ಲಿ ಇಂದು ಮುಂಜಾನೆ ಐಷಾರಾಮಿ ಕಾರೊಂದು ಅಪಘಾತಕ್ಕೀಡಾಗಿದೆ. ಅಪಘಾತಕ್ಕೀಡಾಗಿದ್ದ ಈ ಐಷಾರಾಮಿ ಕಾರಿನಲ್ಲಿ ಅಕ್ರಮವಾಗಿ ಹಸುಗಳನ್ನು ಸಾಗಾಟ ಮಾಡಲಾಗುತ್ತಿದ್ದದ್ದು ಬೆಳಕಿಗೆ ಬಂದಿದೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಕಡೆಯಿಂದ ಉಜಿರೆ ಕಡೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಕಾರು ಜಖಂಗೊಂಡಿದ್ದು, ಕಾರಿನಲ್ಲಿದ್ದವರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
KA 05 MQ 4824 ಬೆಂಗಳೂರು ನೊಂದಣಿಯ ನಂಬರ್ ಪ್ಲೇಟ್ ಅನ್ನು ಈ ಕಾರು ಹೊಂದಿದ್ದರೂ ಅಕ್ರಮ ಗೋ ಸಾಗಾಟಕ್ಕೆ ಬಳಸುವ ಉದ್ದೇಶದಿಂದ ಕಾರಿಗೆ ನಕಲಿ ನೊಂದಣಿ ಪ್ಲೇಟ್ ಹಾಕಿರುವ, ಕಳ್ಳತನ ಮಾಡಿರುವ ಕಾರನ್ನು ಬಳಸಿರುವ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಅಕ್ರಮವಾಗಿ ಕಸಾಯಿಖಾನೆಗೆ ಸಾಗಾಟ ಮಾಡಲು ಸುಮಾರು ಆರು ದನಗಳನ್ನು ಈ ಐಷಾರಾಮಿ ಕಾರಿನಲ್ಲಿ ತುಂಬಿಸಲಾಗಿತ್ತು ಎನ್ನಲಾಗಿದೆ. ದನಗಳನ್ನು ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು ಎಂದು ಹೇಳಲಾಗಿದ್ದೂ, ಈ ಮಧ್ಯೆ ಕಾರು ಪರಶುರಾಮ ದೇವಸ್ಥಾನದ ಚಾರ್ಮಾಡಿ ರಸ್ತೆ ತಿರುವಿನಲ್ಲಿ ಅಪಘಾತಕ್ಕೀಡಾಗಿದೆ. ಕಾರಿನಲ್ಲಿದ್ದ 5 ಹಸುಗಳು ಸಾವನ್ನಪ್ಪಿದ್ದು, ಒಂದು ಹಸುವಿನ ಸ್ಥಿತಿ ಗಂಭೀರವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
Comments are closed.