ಕರಾವಳಿ

ಪ್ರಾಪರ್ಟಿ ಕಾರ್ಡ್‌ ಕಡ್ಡಾಯ ಮಾಡುವುದನ್ನು ಮುಂದೂಡದಿದ್ದರೆ ಉಗ್ರ ಹೋರಾಟ: ಶಾಸಕ ಕಾಮಾತ್

Pinterest LinkedIn Tumblr

ಮಂಗಳೂರು : ಸುಮಾರು ಎರಡು ತಿಂಗಳ ಹಿಂದೆ ಕಡ್ಡಾಯವಾಗಿ ಪ್ರಾಪರ್ಟಿ ಕಾರ್ಡ್ ನೀಡಬೇಕಾದುದನ್ನು ಮುಂದೂಡುವ ಸಮಯದಲ್ಲಿ UPOR ಕಚೇರಿಯಲ್ಲಿ ಸಾರ್ವಜನಿಕರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ಪೂರೈಕೆ ಮಾಡಿದ ನಂತರವೇ ಪ್ರಾಪರ್ಟಿ ಕಾರ್ಡನ್ನು ಕಡ್ಡಾಯಗೊಳಿಸುವುದಾಗಿ ಭೂ ದಾಖಲೆಗಳ ಆಯುಕ್ತರು ತಿಳಿಸಿದ್ದು, ಇದೀಗ ನಗರದಲ್ಲಿ ಸ್ಥಿರಾಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯ ಮಾಡುವುದನ್ನು ತತ್‌ಕ್ಷಣವೇ ಮುಂದೂಡಬೇಕು. ಈ ಕುರಿತಂತೆ ಎದುರಾಗಿರುವ ಸಮಸ್ಯೆ, ಜನರ ಸಂಕಷ್ಟಗಳ ಬಗ್ಗೆ ಸರಕಾರ ಕೂಡಲೇ ಸ್ಪಂದಿ ಸಬೇಕು. ಇಲ್ಲವಾದರೆ, ಅನ್ನಸತ್ಯಾಗ್ರಹ ಮಾಡುವ ಮುಖೇನ ಸರಕಾರದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಶಾಸಕ ವೇದವ್ಯಾಸ ಕಾಮತ್‌ ಎಚ್ಚರಿಸಿದ್ದಾರೆ.

ಪ್ರಾಪರ್ಟಿ ಕಾರ್ಡ್‌ ವಿತರಣೆಯ ಅವ್ಯವಸ್ಥೆಯನ್ನು ಖಂಡಿಸಿ ಮಂಗಳೂರಿನ ಮಿನಿ ವಿಧಾನಸೌಧದ ಆವರಣದ ಪ್ರಾಪ ರ್ಟಿ ಕಾರ್ಡ್‌ ವಿತರಣೆ ಕೇಂದ್ರದ ಎದುರು ಬಿಜೆಪಿ ನೇತೃತ್ವದಲ್ಲಿ ನಡೆದ ಪ್ರತಿಭಟನ ಸಭೆಯಲ್ಲಿ ಅವರು ಮಾತನಾಡಿದರು. ದಿನಾಂಕ 25.10.2018 ರಂದು ಕರ್ನಾಟಕ ಸರಕಾರವು ನಂ RD 187 MUNOSA 2018 ರಂತೆ ಒಂದು ನೋಟಿಫಿಕೇಷನ್ ಮಾಡಿದ್ದು ಯಾವುದೇ ಸ್ಥಳ/ಅಪಾರ್ಟ್ಮೆಂಟ್,ಅಂಗಡಿ ಮುಂತಾದವುಗಳನ್ನು ಯಾವುದೇ ರೀತಿಯಲ್ಲಿ ಪರಭಾರೆ,ಆಡವು ಮತ್ತು ಕುಟುಂಬದೊಳಗೆ ಆಗುವ ವಿಭಾಗಪತ್ರ,ದಾನ,ಹಕ್ಕು ಖುಲಾಸೆ,ವ್ಯವಸ್ಥಾ ಪತ್ರ ಮಾಡುವ ಸಂಧರ್ಭದಲ್ಲಿ ಹಲವು ಮುಂದೂಡಿಕೆಗಳ ನಂತರ ದಿನಾಂಕ 10.06.2019 ರಿಂದ ಅನ್ವಯವಾಗುವಂತೆ ಯಾವುದೇ ಪರಭಾರೆಗೆ ಪ್ರಾಪರ್ಟಿ ಕಾರ್ಡನ್ನು ಕಡ್ಡಾಯಗೊಳಿಸಲಾಗಿದೆ.

ಮಂಗಳೂರು ಸಬ್ ರಿಜಿಸ್ಟ್ರಾರ್ ತಾಲೂಕು ಮತ್ತು ನಗರದಲ್ಲಿ ಒಟ್ಟು 1,70,000ಕ್ಕೂ ಅಧಿಕ ಆಸ್ತಿಗಳಿದ್ದು ಈಗ ದೊರಕಿರುವ ಮಾಹಿತಿ ಪ್ರಕಾರ ಕೇವಲ 30 ರಿಂದ 25 ಸಾವಿರ ಆಸ್ತಿಗಳಿಗೆ ಮಾತ್ರ ಪ್ರಾಪರ್ಟಿ ಕಾರ್ಡ್ ನೀಡಲಾಗಿದೆ (ಅಂದರೆ ಸುಮಾರು 20%)ಶಿವಮೊಗ್ಗ ಜಿಲ್ಲೆಯಲ್ಲಿ ಆಸ್ತಿ ಪರಭಾರೆಗೆ ಪ್ರಾಪರ್ಟಿ ಕಾರ್ಡೇ ಕಡ್ಡಾಯಗೊಳಿಸುವಾಗ ಹೆಚ್ಚು ಕಡಿಮೆ 80% ಪ್ರಾಪರ್ಟಿ ಕಾರ್ಡನ್ನು ಜನರಿಗೆ ವಿತರಿಸಲಾಗಿತ್ತು ಆದರೆ ಮಂಗಳೂರಿನ ಜನತೆಯ ತಾಳ್ಮೆಯನ್ನು ಪರಿಶೀಲಿಸುವುದಕ್ಕಾಗಿಯೇ ಅಥವ ಮಂಗಳೂರಿನ ಜನರಿಗೆ ತೊಂದರೆ ನೀಡುವ ಏಕಮೇವ ಉದ್ಧೇಶದಿಂದ ಸರಕಾರವು ಇದನ್ನು ಹೇರಿರುವುದನ್ನು ಖಂಡಿಸುವುದಾಗಿ ಶಾಸಕರು ಹೇಳಿದರು.

ಯುಪಿಒಆರ್‌ ಎಲ್ಲ ವ್ಯವಸ್ಥೆಗಳು ಸದ್ಯಕ್ಕೆ ಸಂಪೂರ್ಣ ಅವ್ಯವಸ್ಥೆಯಲ್ಲಿದೆ. ಇಲ್ಲಿ ಯಾರಿಗೂ ಸರಿಯಾದ ಮಾಹಿತಿ ಪ್ರಥಮವಾಗಿ ಸಿಗುವುದಿಲ್ಲ. ಬೇಕಾದ ಕಂಪ್ಯೂಟರ್‌, ಸ್ಕಾನರ್‌ ವ್ಯವಸ್ಥೆಯೂ ಇಲ್ಲ. ಬರುವ ನಾಗರಿ ಕರಿಗೆ ಕುಳಿತುಕೊಳ್ಳಲು ಸ್ಥಳಾವಕಾಶ, ಆಸನ ವ್ಯವಸ್ಥೆ ಯೂ ಇಲ್ಲ. ಇದರ ಮಧ್ಯೆಯೇ ಪ್ರಾಪರ್ಟಿ ಕಾರ್ಡ್‌ ಕಡ್ಡಾಯ ಮಾಡುತ್ತಿರುವುದು ಯಾವ ನ್ಯಾಯ ಎಂದವರು ಪ್ರಶ್ನಿಸಿದರು.

ಮಂಗಳೂರಿನ 32 ಗ್ರಾಮಗಳಲ್ಲಿರುವ ಆಸ್ತಿಗಳ ಪೈಕಿ ಶೇ.75ಕ್ಕಿಂತಲೂ ಅಧಿಕ ಆಸ್ತಿಗಳಿಗೆ ಪ್ರಾಪರ್ಟಿ ಕಾರ್ಡ್‌ ನೀಡಿದ ನಂತರ ಕಡ್ಡಾಯ ಮಾಡುವುದು ಸಮಂಜಸ. ಆದರೆ, ಮಂಗಳೂರಿನಲ್ಲಿ ಶೇ.20ರಷ್ಟು ಕೂಡ ಪ್ರಾಪರ್ಟಿ ಕಾರ್ಡ್‌ ನೀಡದೆ ಈಗ ಏಕಾಏಕಿ ಕಡ್ಡಾಯ ಮಾಡುವುದು ಸರಿಯಲ್ಲ. ಯಾವುದೇ ವ್ಯವಸ್ಥೆಗಳನ್ನು ಪೂರ್ಣವಾಗಿ ಮಾಡದೆ ಇದೀಗ ಸರಕಾರ ಪ್ರಾಪರ್ಟಿ ಕಾರ್ಡ್‌ ಕಡ್ಡಾಯ ಮಾಡಲು ಮುಂದಾಗಿರುವುದು ಖಂಡನೀಯ ಎಂದು ಶಾಸಕ ವೇದವ್ಯಾಸ ಕಾಮತ್‌ ಹೇಳಿದರು.

ಪ್ರಾರ್ಪಟಿ ಕಾರ್ಡ್ ಗೆ ಶಾಸಕರು ವಿರುದ್ಧ ಇಲ್ಲ. ಹೊಸದಾಗಿ ಅನುಷ್ಟಾನಕ್ಕೆ ತರುವಾಗ ಇದನ್ನೆಲ್ಲ ನೋಡಬೇಕಾಗಿರುವ ಜವಾಬ್ದಾರಿ ಸಾಮಾನ್ಯವಾಗಿ ಅಧಿಕಾರಿಗಳದ್ದು. ನೀವು ನೋಡದೇ ಇದ್ದದ್ದು ನಿಮ್ಮದೇ ತಪ್ಪು.ಸರಕಾರ ಮಾಡಿದ ತಪ್ಪಿಗೆ ಇವತ್ತು ಸಾರ್ವಜನಿಕರು ಬಲಿಯಾಗುತ್ತಿದ್ದಾರೆ. ಈ ಹಿಂದೆ ಜಗದೀಶ್ ಪಿ ಎನ್ನುವವರು ಉದ್ದೇಶಿತ ನಗರ ಮಾಪನ ದಾಖಲಾತಿಯ ವಿಷಯದ ಬಗ್ಗೆ ಆಗುತ್ತಿರುವ ಎಲ್ಲಾ ಅವ್ಯವಸ್ಥೆಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.ಅದನ್ನೂ ಕೂಡ ಮಾಧ್ಯಮದ ದಾಖಲೆಯನ್ನು ಸಲ್ಲಿಸುತ್ತಿದ್ದೇನೆ. ಅದರಲ್ಲಿ ಸೆಂಟ್ಸ್ ಮೆಂಶನ್ ಇಲ್ಲ, ಅನ್ ಡಿವೈಡ್ ರೈಟ್ ಮೆಂಶನ್ ಇಲ್ಲ ಮತ್ತು ಸರ್ವೆ ನಂಬರ್ ಮೆಂಶನ್ ಇಲ್ಲ. ಒಂದು ಫ್ಲಾಟಿನಲ್ಲಿ ಎಲ್ಲರಿಗೂ ಪಾರ್ಕಿಂಗ್ ನಿಗದಿಪಡಿಸಿ ಫ್ಲಾಟ್ ಅನ್ನು ಖರೀದಿಸುವಾಗ ಪಾರ್ಕಿಂಗ್ ಕೊಟ್ಟಿರುತ್ತಾರೆ. ಅಲ್ಲಿ ಪಾರ್ಕಿಂಗ್ ಪಡೆದುಕೊಂಡಿರುವ ದಾಖಲೆ ಸಬ್ ರಿಜಿಸ್ಟಾರ್ ಮೂಲಕ ಅವರು ರಿಜಿಸ್ಟ್ರೀಶನ್ ಮಾಡಿಕೊಂಡಿರುವುದು ಎಲ್ಲಾ ದಾಖಲೆ ಇದೆ.

ಆದರೆ ಆ ಪಾರ್ಕಿಂಗ್ ಜಾಗ ಪ್ರಾರ್ಪಟಿ ಕಾರ್ಡ್ ನಲ್ಲಿ ತೋರಿಸಿಕೊಡುವುದು ಆಗುತ್ತಾ ಇಲ್ಲ. ಹಾಗಾದರೆ ಆ ಪಾರ್ಕಿಂಗ್ ಜಾಗವನ್ನು ಅವರು ಬಿಟ್ಟುಕೊಡಬೇಕಾ ಎನ್ನುವುದು ಇದೆ. ತಂದೆಯೊಬ್ಬರು ಮಗಳಿಗೆ ಮದುವೆ ಮಾಡಿಸುವಾಗ ದಾನಪತ್ರದ ಮುಖಾಂತರ ಒಂದು ಜಾಗವನ್ನು ಕೊಡುತ್ತಾರೆ. ಆದರೆ ತಂದೆ ಮಗಳಿಗೆ ಕೊಡುವ ದಾನಪತ್ರದ ಮುಖಾಂತರ ಕೊಡುವಂತದ್ದು ಪ್ರಾರ್ಪಟಿ ಕಾರ್ಡ್ ನಲ್ಲಿ ಎಲ್ಲಿ ಕೂಡ ತೋರಿಸಲು ಆಗುವುದಿಲ್ಲ. ಇದನ್ನೆಲ್ಲಾ ಸರಿಪಡಿಸುವುದು ಯಾರು?

ಇದನ್ನೆಲ್ಲಾ ಸರಿಪಡಿಸುವುದಾಗಿ ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಒಂದು ವೇಳೆ ಕೆಲವು ದಿನಗಳ ಒಳಗೆ ಸರಿಯಾಗದಿದ್ದರೆ ಮುಂದಿನ ದಿನಗಳಲ್ಲಿ ಒಂದು ದಿನದ ಅನ್ನ ಸತ್ಯಾಗ್ರಹ, ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ಒಂದು ವೇಳೆ ಆಗಲೂ ಸರಿಯಾಗದಿದ್ದರೆ ಜನರನ್ನೆಲ್ಲಾ ಸೇರಿಸಿಕೊಂಡು ಉಗ್ರ ಪ್ರತಿಭಟನೆಯನ್ನು ಮಾಡಲಾಗುವುದು ಎಂದು ಶಾಸಕರು ಹೇಳಿದರು.

ಪಕ್ಷದ ಪ್ರಮುಖರಾದ ಮೋನಪ್ಪ ಭಂಡಾರಿ, ಪ್ರೇಮಾನಂದ ಶೆಟ್ಟಿ, ಸುಧೀರ್‌ ಶೆಟ್ಟಿ ಕಣ್ಣೂರು,  ಜಿ.ಆನಂದ್‌, ನಿತಿನ್‌ ಕುಮಾರ್‌, ರಮೇಶ್‌ ಕಂಡೆಟ್ಟು, ಭಾಸ್ಕರಚಂದ್ರ ಶೆಟ್ಟಿ, ಪ್ರಭಾ ಮಾಲಿನಿ, ಸಂಧ್ಯಾ ವೆಂಕಟೇಶ್‌, ಶಿವರಾಮ್‌ ಮಣಿಯಾಣಿ, ಪುರಂದರ ಶೆಟ್ಟಿ, ಶ್ರೀಧರ್‌ ಸುವರ್ಣ, ಪ್ರವೀಣ್‌ ಕುಮಾರ್‌ ಅದ್ಯಪಾಡಿ, ವಿಕ್ರಮ್‌, ಭರತ್‌, ರವಿ ಪ್ರಸಾದ್‌, ಸಂಜಯ್ ಪ್ರಭು ಮುಂತಾದವರು ಉಪಸ್ಥಿತರಿದ್ದರು.

Comments are closed.