ಬೆಂಗಳೂರು: ಫಿಲ್ಟರಿಲ್ಲದ ಕಹಿ ಸತ್ಯಗಳನ್ನು ವಿಶಿಷ್ಟ ಡೈಲಾಗುಗಳ ಮೂಲಕ ದಾಟಿಸುತ್ತಲೇ ರಿಯಲ್ ಸ್ಟಾರ್ ಅನ್ನಿಸಿಕೊಂಡಿರುವವರು ಉಪೇಂದ್ರ. ನವಿರು ಪ್ರೇಮ ಕಥಾನಕಗಳ ಮೂಲಕವೇ ಯಶಸ್ವಿ ನಿರ್ದೇಶಕರಾಗಿ ಗುರುತಿಸಿಕೊಂಡಿರುವವರು ಆರ್ ಚಂದ್ರು. ಇದೀಗ ಬಿಡುಗಡೆಯ ಸನ್ನಾಹದಲ್ಲಿರುವ ಐ ಲವ್ ಯೂ ಚಿತ್ರದ ಮೂಲಕ ಎರಡನೇ ಸಲ ಇವರಿಬ್ಬರ ಸಮಾಗಮ ಸಂಭವಿಸಿದೆ!
ಆರ್ ಚಂದ್ರು ಮತ್ತು ಉಪೇಂದ್ರ ಈ ಹಿಂದೆ ಬ್ರಹ್ಮ ಎಂಬ ಚಿತ್ರವನ್ನು ಜೊತೆಯಾಗಿ ಮಾಡಿದ್ದರು. ಇದೀಗ ಅವರಿಬ್ಬರೂ ಐ ಲವ್ ಯೂ ಮೂಲಕ ಮತ್ತೆ ಹೊಸ ಅಲೆ ಸೃಷ್ಟಿಸಲು ಅಣಿಯಾಗಿದ್ದಾರೆ. ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಬಿಡುಗಡೆಗೊಳಿಸಿರೋ ಟ್ರೈಲರ್ನ ಮೂಲಕವಂತೂ ಈ ಜೋಡಿ ಖಂಡಿತಾ ಮತ್ತೆ ಕಮಾಲ್ ಮಾಡುತ್ತದೆಯೆಂಬ ನಂಬಿಕೆ ಪ್ರೇಕ್ಷಕರಲ್ಲಿಯೂ ಮೂಡಿಕೊಂಡಿದೆ.
ಅದಕ್ಕೆ ಕಾರಣವಾಗಿರೋದು ಈ ಟ್ರೈಲರಿನಲ್ಲಿ ಕಾಣಿಸಿಕೊಂಡಿರೋ ಉಪ್ಪಿ ಫ್ಲೇವರಿನ ಘಮಲು. ಈ ಹಿಂದೆ ಎ, ಉಪೇಂದ್ರ ಮುಂತಾದ ಚಿತ್ರಗಳಲ್ಲಿ ಉಪ್ಪಿ ಡೈಲಾಗುಗಳು ಪ್ರಸಿದ್ಧಿ ಪಡೆದುಕೊಂಡಿದ್ದವಲ್ಲಾ? ಅಂಥಾದ್ದೇ ಧಾಟಿಯ ಡೈಲಾಗುಗಳು ಉಪ್ಪಿ ಕಡೆಯಿಂದ ಹೊರ ಬಿದ್ದಿವೆ. ಹಾಗಾದರೆ ಚಂದ್ರು ಈ ಸಿನಿಮಾವನ್ನು ಉಪ್ಪಿ ಫ್ಲೇವರಿಗೆ ಒಗ್ಗಿಕೊಂಡು ಮಾಡಿದ್ದಾರಾ? ಇಡೀ ಚಿತ್ರದಲ್ಲಿ ಅದುವೇ ಮುಂದುವರೆದಿದೆಯಾ ಅಂತೆಲ್ಲ ಪ್ರಶ್ನೆಗಳು ಸಹಜ. ಅದಕ್ಕೆ ಚಂದ್ರು ಅವರ ಕಡೆಯಿಂದ ಮಜವಾದ ಉತ್ತರವೇ ಎದುರುಗೊಳ್ಳುತ್ತದೆ!
ಐ ಲವ್ ಯೂ ಚಿತ್ರದಲ್ಲಿ ಉಪ್ಪಿ ಶೈಲಿ ಇರೋದು ನಿಜ. ಹಾಗೆ ಆರಂಭವಾಗಿ ಸಾಗಿ ಬರೋ ಕಥನ ನಂತರ ತಾಜ್ ಮಹಲ್, ಚಾರ್ ಮಿನಾರ್ನಂಥಾ ಫ್ಲೇವರಿನೊಂದಿಗೆ ಬ್ಲೆಂಡ್ ಆಗುತ್ತದೆ. ಐ ಲವ್ ಯೂ ಚಿತ್ರದ ಪ್ರಧಾನ ಆಕರ್ಷಣೆಯೇ ಈ ಅಂಶ. ಹೀಗೆ ಉಪೇಂದ್ರ ಮತ್ತು ಆರ್ ಚಂದ್ರು ಫ್ಲೇವರ್ಗಳು ಹಿತವಾಗಿ ಬ್ಲೆಂಡ್ ಆಗಿರೋ ಈ ಲವ್ ಯೂ ಚಿತ್ರ ಜೂನ್ ಹದಿನಾಲಕ್ಕರಂದು ಪ್ರೇಕ್ಷಕರ ಮುಂದೆ ಬರಲಿದೆ.
Comments are closed.