ನಟ ಸಾರ್ವಭೌಮ ಕನ್ನಡಿಗರ ಕಣ್ಮಣಿ ಡಾ.ರಾಜ್ಕುಮಾರ್ ಅವರ ಕುಟುಂಬದಿಂದ ಮೂರನೇ ತಲೆಮಾರಿನ ನಟ-ನಟಿಯರ ಎಂಟ್ರಿ ಜೋರಾಗಿ ನಡೆಯುತ್ತಿದೆ. ಈಗಾಗಲೇ ವರನಟನ ಹಾದಿಯಲ್ಲಿ ವಿನಯ್ ರಾಜ್ಕುಮಾರ್ ಸ್ಯಾಂಡಲ್ವುಡ್ನಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಯುವರಾಜ್ ಕುಮಾರ್ ಹಾಗೂ ಧೀರನ್ ರಾಮ್ಕುಮಾರ್ ಮೊದಲ ಚಿತ್ರದ ಸಿದ್ಧತೆಯಲ್ಲಿದ್ದಾರೆ. ಹಾಗೆಯೇ ಅಣ್ಣಾವ್ರ ಕುಟುಂಬದಿಂದ ಮೊದಲ ಹೀರೋಯಿನ್ ಆಗಿ ಧನ್ಯಾ ರಾಮ್ಕುಮಾರ್ ಸಹ ಹೊಸ ಹೆಜ್ಜೆಯಿಡಲು ಅಣಿಯಾಗುತ್ತಿದ್ದಾರೆ.
ಈ ಪಟ್ಟಿಗೆ ಹೊಸ ಸೇರ್ಪಡೆ ಸೂರಜ್ ಕುಮಾರ್. ಇವರು ರಾಜ್ಕುಮಾರ್ ಅವರ ಪತ್ನಿ ಪಾರ್ವತಮ್ಮ ರಾಜ್ಕುಮಾರ್ ಅವರ ಸಹೋದರ ಎಸ್.ಎ ಶ್ರೀನಿವಾಸ್ ಅವರ ಪುತ್ರ. ಕನ್ನಡದಲ್ಲಿ ಒಂದಷ್ಟು ಚಿತ್ರಗಳನ್ನು ನಿರ್ಮಿಸಿರುವ ಶ್ರೀನಿವಾಸ್ ಮಗನಿಗೂ ಬಣ್ಣದ ಲೋಕದ ದಾರಿ ತೋರಿಸಿದ್ದಾರೆ.
ಹೀಗಾಗಿ ಸೂರಜ್ ಮೊದಲಿಂದಲೂ ಚಿತ್ರರಂಗ ಹಾಗು ಹೋಗುಗಳನ್ನು ಗಮನಿಸುತ್ತಾ ಬಂದಿದ್ದಾರೆ. ಈ ಹಿಂದೆ ದರ್ಶನ್ ಅಭಿನಯದ ‘ಐರಾವತ’ ಮತ್ತು ‘ತಾರಕ್’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಸಹ ಕೆಲಸ ಮಾಡಿದ ಅನುಭವವಿದೆ. ಇದೀಗ ನಾಯಕ ನಟನಾಗಿ ಭಡ್ತಿ ಪಡೆಯುವ ಹಾದಿಯಲ್ಲಿದ್ದಾರೆ ಸೂರಜ್.
ಈ ಹೊಸ ನಟನನ್ನು ಸ್ಯಾಂಡಲ್ವುಡ್ಗೆ ಪರಿಚಯಿಸುತ್ತಿರುವುದು ನಿರ್ದೇಶಕ ರಘು ಕೋವಿ. ಈಗಾಗಲೇ ಪ್ರಿ ಪೊಡಕ್ಷನ್ ಕೆಲಸಗಳನ್ನು ಆರಂಭಿಸಿರುವ ಚಿತ್ರತಂಡ ನಾಯಕಿಯಾಗಿ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ರನ್ನು ಕರೆ ತರುವ ಕಸರತ್ತಿನಲ್ಲಿದೆ. ಚಿತ್ರದಲ್ಲಿ ಕಾಣಿಸಿಕೊಳ್ಳುವ ಇತರೆ ಕಲಾವಿದರು ಮತ್ತು ತಂತ್ರಜ್ಞರ ಪಟ್ಟಿಯನ್ನು ಮತ್ತು ಟೈಟಲ್ ಅನ್ನು ಇದೇ ತಿಂಗಳ ಅಂತ್ಯದಲ್ಲಿ ಪ್ರಕಟಿಸಲು ರಘು ಮತ್ತು ತಂಡ ಯೋಜನೆ ಹಾಕಿಕೊಂಡಿದೆ.
ತಮ್ಮ ಚೊಚ್ಚಲ ಚಿತ್ರಕ್ಕಾಗಿ ಸಾಹಸ ಹಾಗೂ ನೃತ್ಯ ತರಬೇತಿ ಪಡೆದುಕೊಂಡಿರುವ ಸೂರಜ್, ನೀನಾಸಂ ಹಾಗೂ ಟೆಂಟ್ ಸಿನಿಮಾದಲ್ಲಿ ಅಭಿನಯ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ಒಟ್ಟಿನಲ್ಲಿ ಭರ್ಜರಿ ತಯಾರಿಯೊಂದಿಗೆ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡಲು ಅಣ್ಣಾವ್ರ ಕುಟುಂಬದಿಂದ ಮತ್ತೊಬ್ಬ ಹೀರೋ ರೆಡಿಯಾಗುತ್ತಿದ್ದಾರೆ.
Comments are closed.