ಕರಾವಳಿ

ಮೊದಲ ಮಳೆಗೆ ಮಂಗಳೂರು ತತ್ತರ : ನಗರದಲ್ಲಿ ಹಲವಾರು ಅವಾಂತರಗಳು ಸೃಷ್ಟಿ – ರಸ್ತೆಯಲ್ಲೇ ಹರಿದ ಡ್ರೈನೇಜ್ ನೀರು – ವಾಹನ ಸವಾರರ ಪರದಾಟ

Pinterest LinkedIn Tumblr

ಮಂಗಳೂರು, ಜೂನ್.13: ಕರಾವಳಿಯಲ್ಲಿ ಮುಂಗಾರು ಮಳೆ ಆರಂಭಗೊಂಡಿದ್ದು, ಮೊದಲ ಮಳೆಗೆ ಮಂಗಳೂರು ತತ್ತರಿಸಿದೆ. ಮಂಗಳೂರು ಸೇರಿದಂತೆ ಜಿಲ್ಲೆಯ ವಿವಿದೆಡೆಗಳಲ್ಲಿ ಕಳೆದೆರಡು ದಿನಗಳಿಂದ ಮುಂಗಾರು ಮಳೆ ಬಿರುಸು ಪಡೆಯುತ್ತಿದ್ದು, ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಕೆಲವು ಕಡೆಗಳಲ್ಲಿ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸವಾರರು ಹಾಗೂ ಸಾರ್ವಜನಿಕರು ಸಂಕಷ್ಟಕ್ಕೊಳಗಾದರು.

ಈ ನಡುವೆ ನಗರದ ಶರವು ಮಹಾಗಣಪತಿ ರಸ್ತೆಯಲ್ಲಿ ಅಸಮರ್ಪಕವಾದ ಒಳಚರಂಡಿ ವ್ಯವಸ್ಥೆಯಿಂದಾಗಿ ಡ್ರೈನೇಜ್ ನೀರು ನಡು ರಸ್ತೆಯಲ್ಲಿ ಧಾರಾಕಾರವಾಗಿ ಹರಿಯುತ್ತಿದ್ದು, ಪಾದಾಚಾರಿಗಳು ಹಾಗೂ ವಾಹನ ಸವಾರರು ಸಂಕಷ್ಟಕೀಡಾಗಿದ್ದಾರೆ.

ಮಳೆ ನೀರು ಹರಿದು ಹೋಗಲು ಒಳಚರಂಡಿ ವ್ಯವಸ್ಥೆ ಮಾಡಲಾಗಿದೆಯಾದರೂ ಧಾರಾಕಾರ ಮಳೆಯಿಂದಾಗಿ ರಸ್ತೆಯಿಂದ ಒಳಚರಂಡಿಗೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಮಳೆ ನೀರು ರಸ್ತೆಯಲ್ಲೇ ನಿಂತು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿ ಪರಿಣಮಿಸಿದೆ.

ಇದೇ ವೇಳೆ ನಗರದ ಹಳೆಯ ಬಸ್ ನಿಲ್ದಾಣ ಪರಿಸರದಲ್ಲಿ ಕೂಡ ಚರಂಡಿ ಬ್ಲಾಕ್ ಆಗಿ ಮಳೆ ನೀರು ರಸ್ತೆಯಲ್ಲಿ ಹರಿದುಹೋಗುವ ದೃಶ್ಯ ಕಂಡುಬರುತ್ತಿದೆ. ಈ ಪ್ರದೇಶದಲ್ಲಿ ಕಳೆದ ಹಲವಾರು ವರ್ಷಗಳಿಂದ ಇದೇ ಸಮಸ್ಯೆ ಕಂಡುಬಂದಿದ್ದು, ಮಂಗಳೂರು ಮಹಾನಗರ ಪಾಲಿಕೆಗೆ ಹಲವಾರು ಬಾರಿ ದೂರು ಕೊಟ್ಟರೂ ಅಧಿಕಾರಿಗಳು ಕ್ಯಾರೇ ಮಾಡುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಕೆಲವೊಂದು ಕಡೆಗಳಲ್ಲಿ ಒಳಚರಂಡಿ ಕೆಲಸಗಳು ನಡೆಯುತ್ತಿವೆ. ಇದೇ ವೇಳೆ ಎಲ್ಲೆಡೆ ಅವ್ಯವಸ್ಥೆ, ಅಪೂರ್ಣ ಕಾಮಗಾರಿಗಳಿಂದ ಹಾಗೂ ಕೆಲವೆಡೆ ಫುಟ್ ಪಾತ್ ಸ್ಲ್ಯಾಬ್ ಗಳು ಮುರಿದು ಬಿದ್ದಿದ್ದು, ಚರಂಡಿ ತುಂಬಿ ಹರಿಯುತ್ತಿರುವುದರಿಂದ ಪಾದಚಾರಿಗಳು ಹಾಗೂ ವಾಹನಗಳ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿದೆ.

ಭಾರೀ ನಿರೀಕ್ಷೆಯ ನಂತರ ಮಂಗಳೂರಿನಲ್ಲಿ ಸುರಿದ ಮೊದಲ ಮಳೆಗೆ ನಗರದಲ್ಲಿ ಹಲವಾರು ಅವಾಂತರಗಳು ಸೃಷ್ಟಿಯಾಗಿವೆ. ನಗರದ ಹಲವು ಕಡೆಗಳಲ್ಲಿ ಮಳೆನೀರು ಸರಾಗವಾಗಿ ಹರಿದುಹೋಗಲು ಸ್ಥಳಾವಕಾಶವಿಲ್ಲದೆ ನೀರು ರಸ್ತೆಯಲ್ಲೇ ಹರಿಯುವ ದೃಶ್ಯಗಳು ಕಂಡುಬರುತ್ತಾ ಇದೆ. ಇದರಿಂದಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆಗೆ ಒಳಗಾಗಿದ್ದಾರೆ.

Comments are closed.