ರಾಷ್ಟ್ರೀಯ

ರಾತ್ರೋ ರಾತ್ರಿ ತನ್ನ ಪಥ ಬದಲಿಸಿದ ವಾಯು ಚಂಡಮಾರುತ; ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ

Pinterest LinkedIn Tumblr

ಅಹ್ಮದಾಬಾದ್: ಗುಜರಾತ್ ನಲ್ಲಿ ವ್ಯಾಪಕ ಆತಂಕಕ್ಕೆ ಕಾರಣವಾಗಿದ್ದ ವಾಯು ಚಂಡಮಾರುತ ರಾತ್ರೋ ರಾತ್ರಿ ತನ್ನ ಪಥ ಬದಲಿಸಿದ್ದು, ಗುಜರಾತ್ ಕರಾವಳಿಯಕ್ಕ ಧಾವಿಸುತ್ತಿದ್ದ ಚಂಡಮಾರುತ ಇದೀಗ ಸಮುದ್ರದತ್ತ ತಿರುಗಿದೆ.

ಚಂಡಮಾರುತ ಬದಲಿಸಿದೆಯಾದರೂ ಅದರ ಪರಿಣಾಮ ಗುಜರಾತ್ ಕರಾವಳಿ ಪ್ರದೇಶಗಳ ಮೇಲಾಗುತ್ತಿದ್ದು, ಗುಜರಾತ್ ಕರಾವಳಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಪ್ರಸ್ತುತ ವೆರವಲ್ ನ ಜಲೇಶ್ವರ್ ನಲ್ಲಿ ಭಾರಿ ಗಾಳಿ ಸಹಿತ ಮಳೆಯಾಗುತ್ತಿದ್ದು, ವಾಯು ಚಂಡಮಾರುತ ಪೋರ್ ಬಂದರ್ ಮತ್ತು ಮಹುವಾ ಬೀಚ್ ಗಳ ನಡುವೆ ಹಾದುಹೋಗಲಿದೆ ಎನ್ನಲಾಗಿದೆ. ಹೀಗಾಗಿ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಏಳುತ್ತಿದ್ದು, ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಗಿರ್ ಸೋಮನಾಥ್ ಜಿಲ್ಲೆಯಲ್ಲಿ ಸೋಮನಾಥ ದೇಗುಲದ ಅವರಣದಲ್ಲಿದ್ದ ಶೆಡ್ ಗಳ ಮೇಲ್ಛಾವಣಿಗಳು ಗಾಳಿಯ ವೇಗಕ್ಕೆ ಹಾರಿ ಹೋಗಿದ್ದು, ಅದೃಷ್ಟವಶಾತ್ ಯಾವುದೇ ಸಾವು-ನೋವುಗಳಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಗುಜರಾತ್ ಕರಾವಳಿಯಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಅಲ್ಲದೆ ತುರ್ತು ಕ್ರಮವಾಗಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಅಗತ್ಯ ಪ್ರಮಾಣದ ಆಹಾರ ಪೊಟ್ಟಣಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ.

ಉಳಿದಂತೆ ಸೌರಾಷ್ಟ್ರ, ಅಮ್ರೇಲಿ, ಗಿರ್ ಸೋಮನಾಥ್, ಡಿಯು, ಜುನಾಘಡ್, ಪೋರ್ ಬಂದರ್, ರಾಜ್ ಕೋಟ್, ದ್ವಾರಕಾ, ದೇವ್ ಭೂಮಿ, ಕಚ್ ಮತ್ತು ಮಹುವಾದಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಇಲ್ಲಿ ಪ್ರತೀ ಗಂಟೆಗೆ 155-165 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ವಾಯು ಚಂಡಮಾರುತ ಹಾದುಹೋಗುವ ಸಂದರ್ಭದಲ್ಲಿ ಇದರ ವೇಗ ಪ್ರತೀ ಗಂಟೆಗೆ 180 ಕಿಮೀ ದಾಟಲಿದೆ ಎನ್ನಲಾಗಿದೆ.

ಗುಜರಾತ್ ಮಾತ್ರವಲ್ಲದೇ ಮಹಾರಾಷ್ಟ್ರದಲ್ಲಿಯೂ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, ಅಲ್ಲದೆ ಕರ್ನಾಟಕದಲ್ಲೂ ವಾಯು ಚಂಡಮಾರುತ ಪರಿಣಾಮ ಉಂಟಾಗಿದ್ದು, ಭಾರಿ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Comments are closed.