ರಾಷ್ಟ್ರೀಯ

ಮತ್ತೆ ಗುಜರಾತ್ ನತ್ತ ಮುಖ ಮಾಡಿದ ‘ವಾಯು’ ಚಂಡಮಾರುತ; ಕಚ್ ಬಂದರಿಗೆ ಅಪ್ಪಳಿಸುವ ಸಾಧ್ಯತೆ !

Pinterest LinkedIn Tumblr

ಅಹ್ಮದಾಬಾದ್: ಎರಡು ದಿನಗಳ ಹಿಂದಷ್ಟೇ ಗುಜರಾತ್ ನಲ್ಲಿ ಆತಂಕ ಮೂಡಿಸಿ ಬಳಿಕ ಪಥ ಬದಲಿಸಿ ನಿರಾಳತೆ ಮೂಡಿಸಿದ್ದ ವಾಯು ಚಂಡ ಮಾರುತ ಇದೀಗ ಮತ್ತೆ ಗುಜರಾತ್ ನತ್ತ ಮುಖ ಮಾಡಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಅಚ್ಚರಿ ಎಂದರೆ ವಾಯು ಚಂಡಮಾರುತವು ಪಥ ಬದಲಿಸಿದ್ದು, ಗುಜರಾತ್ ಗೆ ಯಾವುದೇ ಅಪಾಯವಿಲ್ಲ ಎಂದು ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರು ಘೋಷಿಸಿದ ಬೆನ್ನಲ್ಲೇ ಕೇಂದ್ರ ಭೂವಿಜ್ಞಾನ ಇಲಾಖೆಯು ಇದಕ್ಕೆ ವ್ಯತಿರಿಕ್ತವಾದ ಮಾಹಿತಿ ನೀಡಿದೆ. ಚಂಡಮಾರುತ ಬಗ್ಗೆ ಶುಕ್ರವಾರವಷ್ಟೆ ಮಾತನಾಡಿದ್ದ ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ, ‘ವಾಯು ಚಂಡಮಾರುತದಿಂದ ಗುಜರಾತ್ ಗೆ ಯಾವುದೇ ಅಪಾಯಗಳಿಲ್ಲ. ಅದು ಪಥ ಬದಲಿಸಿ ಪಶ್ಚಿಮಾಭಿಮುಖವಾಗಿ ಸಾಗಿದೆ ಎಂದು ಹೇಳಿದ್ದರು.

ಆದರೆ ವಾಯು ಚಂಡಮಾರುತ ಮತ್ತೆ ತನ್ನ ಪಥ ಬದಲಿಸಿದ್ದು, ಗುಜರಾತ್ ನತ್ತ ಮುಖ ಮಾಡಿದೆ. ಈ ಬಾರಿ ಚಂಡಮಾರುತ ಕಚ್ ಬಂದರಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಅಧಿಕಾರಿಗಳು ನೀಡಿರುವ ಮಾಹಿತಿ ಅನ್ವಯ ಇದೇ ಜೂನ್ 17-18ರಂದು ವಾಯು ಚಂಡಮಾರುತ ಗುಜರಾತ್ ನ ಕಚ್ ಗೆ ಅಪ್ಪಳಿಸುವ ಸಾಧ್ಯತೆಗಳಿವೆ ಎಂದು ಕೇಂದ್ರ ಭೂ ವಿಜ್ಞಾನ ಇಲಾಖೆಯ ಕಾರ್ಯದರ್ಶಿ ಎಂ. ರಾಜೀವನ್‌ ಅವರು ರಾಷ್ಟ್ರೀಯ ಸುದ್ದಿ ಸಂಸ್ಥೆ ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಚಂಡಮಾರುತದ ತೀವ್ರತೆ ಕಡಿಮೆಯಾಗುವ ಸಾಧ್ಯತೆಗಳಿವೆಯಾದರೂ, ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಾಗಲಿದೆ ಎಂದೂ ಇಲಾಖೆ ಎಚ್ಚರಿಸಿದೆ. ಆದರೆ, ಚಂಡಮಾರುತ ಮರಳಿ ಅಪ್ಪಳಿಸುವ ಸಾಧ್ಯತೆಗಳ ಬಗ್ಗೆ ಗುಜರಾತ್‌ನ ಅಹಮದಾಬಾದ್ ನಲ್ಲಿರುವ ಹವಾಮಾನ ಇಲಾಖೆಯೂ ಅನುಮಾನ ವ್ಯಕ್ತಪಡಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಹವಾಮಾನ ಇಲಾಖೆಯ ಹೆಚ್ಚುವರಿ ನಿರ್ದೇಶಕಿ ಮನೋರಮಾ ಮೊಹಾಂತಿ ಅವರು, ‘ಇನ್ನು 48 ಗಂಟೆಗಳಲ್ಲಿ ಚಂಡಮಾರುತ ಮರಳಿ ಬರುವ ಸಾಧ್ಯತೆಗಳಿವೆ ಎಂಬ ವರದಿಗಳು ನಮ್ಮ ಗಮನಕ್ಕೆ ಬಂದಿವೆ. ಹೀಗೆ ಆಗುವ ಸಾಧ್ಯತೆಗಳಿರುಬಹುದು. ಜತೆಗೇ ಅದರ ತೀವ್ರತೆಯೂ ಕಡಿಮೆಯಾಗಬಹುದು. ಚಂಡಮಾರುತ ಸಮುದ್ರದಲ್ಲೇ ಹರಡಿಕೊಳ್ಳಲೂಬಹುದು. ಅದು ಮರಳಿ ಬಂದು, ಕಚ್‌ ಅಥವಾ ಸೌರಾಷ್ಟ್ರ ಪ್ರಾಂತ್ಯವನ್ನು ಅಪ್ಪಳಿಸಲಿದೆ ಎಂದು ಈಗಲೇ ಹೇಳಲಾಗದು ಎಂದು ಹೇಳಿದ್ದಾರೆ.

ಇನ್ನು ವಾಯು ಚಂಡ ಮಾರುತ ತನ್ನ ಪಥ ಬದಲಿಸಿದ್ದರೂ ಗುರುವಾರದಿಂದ ಅದರ ಪರಿಣಾಮವಾಗಿ ಗುಜರಾತ್‌ ನ ಹಲವೆಡೆ ಗಾಳಿ ಸಹಿತಿ ಮಳೆಯಾಗುತ್ತಿದೆ. ಕರಾವಳಿ ಪ್ರದೇಶ, ಗಿರ್‌, ಸೋಮನಾಥ್‌, ಡಿಯು, ಜುನಾಘಡ್, ಪೋರ್ ಬಂದರ್ ಸೇರಿದಂತೆ ಹಲವೆಡೆ ಭಾರಿ ಮಳೆಯಾಗುತ್ತಿದೆ.

Comments are closed.