ಕುಂದಾಪುರ: ಮೂಲತ: ಕುಂದಾಪುರದವರಾದ ಪ್ರಸ್ತುತ ಮುಂಬೈಯಲ್ಲಿ ನೆಲೆಸಿರುವ ಮೀರಾ ಸತೀಶ್ ಕುಂದಾಪುರ ವಿದೇಶ ಪ್ರವಾಸದ ವೇಳೆ ಸಾವನ್ನಪ್ಪಿದ್ದು ಅವರ ಮೃತ ದೇಹವನ್ನು ದೇಶಕ್ಕೆ ತರಲು ಮಾಜಿ ಸಚಿವ ಕೆ. ಜಯಪ್ರಕಾಶ ಹೆಗ್ಡೆ ಸಹಕರಿಸಿದ್ದಾರೆ.
ನಡೆದಿದ್ದೇನು?
ಮೀರಾ ಸತೀಶ್ ಮತ್ತು ಸತೀಶ್ ಕುಂದಾಪುರ ದಂಪತಿಗಳು ವಿದೇಶ ಪ್ರವೇಶದ ಸಲುವಾಗಿ ಮೇ. 14 ರಂದು ಸ್ಪೇನ್ ದೇಶಕ್ಕೆ ತೆರಳಿದ್ದರು. ಪ್ರವಾಸದ ಕೊನೆಯ ದಿನವಾದ ಮೇ.24 ರಂದು ಬಾರ್ಸಿಲೋನಾದ ಪ್ರವಾಸಿ ಹಡಗಿ (ಕ್ರೂಸರ್)ನಲ್ಲಿ ಪ್ರಯಾಣಿಸುತ್ತಿದ್ದಾಗ ಸತೀಶ್ ರವರ ಪತ್ನಿ ಮೀರಾ 55 ವರ್ಷ ತೀವೃ ಹೃದಯಾಘಾತದಿಂದ ಮೃತರಾದರು. ತದನಂತರ ಮೃತ ದೇಹವನ್ನು ಸಂಬಂದಪಟ್ಟವರ ವಶಕ್ಕೆ ಪಡೆದು ಭಾರತಕ್ಕೆ ಕರೆತರಲು, ಅಲ್ಲಿನ ಕಾನೂನು ಮತ್ತು ನಿಯಮದಂತೆ ಅಷ್ಟೊಂದು ಸುಲಭವಾದ ಕೆಲಸವಾಗಿರಲಿಲ್ಲ. ಆ ದೇಶದ ಒಂದೊಂದು ಷರತ್ತುಗಳನ್ನು ಪಾಲನೆ ಮಾಡುವುದು ಮತ್ತು ದಾಖಲಾತಿಗಳನ್ನು ಒದಗಿಸುವುದರೊಳಗಾಗಿ, ಅದಾಗಲೆ ಮೀರಾರವರು ಮರಣಿಸಿ ಎಂಟು ದಿನ ಕಳೆದಿತ್ತು. ಮೃತ ದೇಹವನ್ನು ಸ್ವಾದೀನ ಪಡೆಯಲು ವಿಳಂಬವಾಗುತ್ತಿರುವುದನ್ನು ಅರಿತ ಸತೀಶ್ ರವರು ಆ ಸಂದರ್ಭದಲ್ಲಿ ಕಲಾಕ್ಷೇತ್ರ-ಕುಂದಾಪುರದ ಅಧ್ಯಕ್ಷ ಕಿಶೋರ್ ಕುಮಾರ್ ಮುಖೇನ, ಮಾಜಿ ಮಂತ್ರಿ ಹಾಗೂ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆಯವರನ್ನು ಸಂಪರ್ಕಿಸಿ ತನ್ನ ತೊಂದರೆಯನ್ನು ಹೇಳಿಕೊಂಡು ಸಹಾಯ ಹಸ್ತ ಯಾಚಿಸಿದರು.
ಸಹಕರಿಸಿದ ಜೆ.ಪಿ ಹೆಗ್ಡೆ…
ವಿಷಯದ ಗಂಭೀರತೆಯನ್ನು ಅರಿತ ಹೆಗ್ಡೆಯವರು ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್‌ರವರನ್ನು ತಕ್ಷಣವೇ ಸಂಪರ್ಕಿಸಿ ಅವರ ಮೂಲಕ ವಿದೇಶಾಂಗ ಇಲಾಖೆಯ ಅಧಿಕಾರಿಗಳ ಸಹಕಾರದಿಂದ, ಸ್ಪೇನ್ ದೇಶದ ಸಂಬಂಧಪಟ್ಟ ಅಧಿಕಾರಿಗಳ ನಿರಂತರ ಸಂಪರ್ಕ ಮತ್ತು ಪ್ರಯತ್ನದ ಫಲವಾಗಿ ಮೃತ ದೇಹವನ್ನು ಸ್ವಾದೀನಪಡಿಸಿಕೊಂಡು ಜೂನ್.2 ರಂದು ಮುಂಬೈಗೆ ತರುವ ವ್ಯವಸ್ಥೆ ಮಾಡಲಾಯಿತು ಎಂದು ಸತೀಶ್ ಕುಂದಾಪುರ ಇವರು ಮಾದ್ಯಮಕ್ಕೆ ತಿಳಿಸಿರುತ್ತಾರೆ. ನಮ್ಮ ಕುಟುಂಬದ ನೋವು ಮತ್ತು ಸ್ಪೇನ್ ದೇಶದ ಕಾನೂನಾತ್ಮಕ ಸಮಸ್ಯೆಗೆ ಸ್ಪಂಧಿಸಿದ ಜಯಪ್ರಕಾಶ್ ಹೆಗ್ಡೆಯವರಿಗೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ತಿಳಿಸಿರುತ್ತಾರೆ.
ಮೃತರು ಪತಿ ಸತೀಶ್ ಕುಮಾರ್ ಕುಂದಾಪುರ ಸೇರಿದಂತೆ ಅವರ ಇಬ್ಬರು ಗಂಡು ಮಕ್ಕಳಾದ ರೋಹನ್ ಮತ್ತು ರಕ್ಷಿತ್ ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
Comments are closed.