ಬೆಂಗಳೂರು: ಜನಪ್ರತಿನಿಧಿಗಳು ವಿಧಾನಸೌಧ ಮತ್ತು ಮನೆಗಳಲ್ಲಿ ಪಾರದರ್ಶಕತೆ ಅಳವಡಿಸಿಕೊಳ್ಳುವುದು ಸಾರ್ವಜನಿಕ ದೃಷ್ಟಿಯಿಂದ ಒಳ್ಳೆಯದು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅಭಿಪ್ರಾಯಪಟ್ಟರು. ಕಸಾಪದಲ್ಲಿ ಬುಧವಾರ ‘ಕೆಂಗಲ್ ಹನುಮಂತಯ್ಯ ಸಂಸ್ಕೃತಿ ದತ್ತಿ ಪ್ರಶಸ್ತಿ’ ಸ್ವೀಕರಿಸಿದ ಅವರು, ಈಗ ವಿಧಾನಸೌಧದಲ್ಲಿ ಮಂತ್ರಿಗಳನ್ನು ನೋಡುವುದೇ ಅಪರೂಪವಾಗಿದೆ. ಹಾಗಾದರೆ, ವಿಧಾನಸೌಧವನ್ನು
ಕಟ್ಟಿಸಿರುವುದು ಏತಕ್ಕೆ ಎಂದು ಪ್ರಶ್ನಿಸಿದರು.
ಮಹಾನ್ ಸೌಧವಾದ ‘ವಿಧಾನಸೌಧ’ ವನ್ನು ಕಟ್ಟಿಸಿದ ಕೆಂಗಲ್ ಹನುಮಂತಯ್ಯ ಅವರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ, ವಿಚಾರಣಾ ಸಮಿತಿಯನ್ನು ನೇಮಿಸಲಾಗಿತ್ತು. ಈ ಕುರಿತು ವಿಧಾನ ಸಭೆಯಲ್ಲಿ ಮಾತನಾಡಲು ನಿಂತ ಅವರು, ಈ ಭವ್ಯ ಮಂದಿರವನ್ನು ನೋಡಲು ದೇಶ ವಿದೇಶದಿಂದ ಕೋಟ್ಯಂತರ ಜನ ಬರುತ್ತಾರೆ. ಅಂತಹ ಸೌಧವನ್ನು ಕಟ್ಟಿಸಿದ ನಾನು, ಈಗ ಅದೇ ಭವ್ಯ ಮಂದಿರದಲ್ಲಿ ನಿರಪಾರಾಧಿಯೆಂದು ಹೇಳಬೇಕಾಗಿದೆ ಎಂದು ಭಾವನಾತ್ಮಕವಾಗಿ ಹೇಳಿದ್ದರು.
ಆಗ ನನ್ನ ಕಣ್ಣಿನಲ್ಲಿ ನೀರು ಬಂದಿತ್ತು. ಕೆಂಗಲ್ ಹನುಮಂತಯ್ಯ ಅವರ ಪ್ರೇರಣೆಯಿಂದ ನನ್ನ ಅಧಿಕಾರಾವಧಿಯಲ್ಲಿ ವಿಕಾಸ ಸೌಧವನ್ನು ಕಟ್ಟಿದ್ದೇನೆ. ವಿಕಾಸಸೌಧವನ್ನು ಇನ್ನೂ ದೊಡ್ಡದಾಗಿ ಕಟ್ಟಬೇಕು ಎಂಬ ಆಸೆಯಿತ್ತು. ಅದಕ್ಕಾಗಿ, ಪಕ್ಕದ ಬೃಹತ್ ಕಟ್ಟಡವನ್ನು ಒಡೆಯಬೇಕಿತ್ತು. ಒಂದು ವೇಳೆ ಈ ಕಟ್ಟಡವನ್ನು ಒಡೆಯಲು ಮುಂದಾಗಿದ್ದರೆ, ಅದಕ್ಕೆ ಎದುರಾಗಬಹುದಾಗಿದ್ದ ವಿರೋಧವನ್ನು ಎದುರಿಸುವ ಶಕ್ತಿ ನನ್ನಲ್ಲಿರಲಿಲ್ಲ ಎಂದು ತಿಳಿಸಿದರು.
Comments are closed.