ಬೆಂಗಳೂರು (ಜೂನ್.20); ಕೊಡಗು ನೆರೆ ಹಾನಿ, ಬರಗಾಲ ಸೇರಿದಂತೆ ರಾಜ್ಯ ಸರ್ಕಾರ ಅನೇಕ ಕಷ್ಟಕರ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಿದೆ, ಅಲ್ಲದೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಸುಭದ್ರವಾದ ಆಡಳಿತ ನೀಡಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿ ಒಂದು ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಇಂದು ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ‘ಮೈತ್ರಿ ಪರ್ವ’ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪರಮೇಶ್ವರ್, “ಕಳೆದ ಒಂದು ವರ್ಷದ ಅವಧಿಯಲ್ಲಿ ನಮ್ಮ ಸರ್ಕಾರ ಅನೇಕ ಏಳು ಬೀಳುಗಳನ್ನು ಕಂಡಿದೆ. ಬರ-ನೆರೆ ಯಂತಹ ಕಠಿಣ ಪರಿಸ್ಥಿತಿಯನ್ನು ಗಟ್ಟಿಯಾಗಿ ಎದುರಿಸಿದೆ. ಕಳೆದ ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯ ನೇತೃತ್ವದಲ್ಲಿ ಹೇಗೆ ಸಾಲಮನ್ನಾ ಮಾಡಿದ್ರೋ, ಅದರ ಮುಂದುವರೆದು ಈ ಸರ್ಕಾರದ ಅವಧಿಯಲ್ಲೂ ರೈತರ ಸಾಲ ಮನ್ನಾ ಮಾಡಲಾಗುವುದು” ಎಂದು ಅವರು ಆಶ್ವಾಸನೆ ನೀಡಿದರು.
“ಸಾಲಮನ್ನಾ ಯೋಜನೆಯ ಅಡಿಯಲ್ಲಿ ಸಮ್ಮಿಶ್ರ ಸರ್ಕಾರ ಈವರೆಗೆ 46 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದೆ. ಈಗಾಗಲೇ ರಾಜ್ಯದ 11 ಸಾವಿರ ರೈತರಿಗೆ ಸಾಲಮನ್ನಾ ಋಣಪತ್ರ ನೀಡಲಾಗಿದೆ” ಎಂದು ಮಾಹಿತಿ ನೀಡಿದರು. ಅಲ್ಲದೆ “ಸಮ್ಮಿಶ್ರ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ, ಶಾಲಾ ಸಂಪರ್ಕ ಸೇತು, ಆರೋಗ್ಯ ಕ್ಷೇತ್ರ, ಸಾಮಾಜಿಕ ನ್ಯಾಯ, ಮಾತೃಶ್ರೀ, ಬಡವರ ಬಂಧು, ಮೇಕೆದಾಟು ಮತ್ತು ಮಹದಾಯಿ ನೀರಾವರಿ ಯೋಜನೆಗಳು, ಬೆಂಗಳೂರು ಜಲ ಬರದ ಬವಣೆ ಹಾಗೂ ಪ್ರಕೃತಿ ವಿಕೋಪ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸರ್ಕಾರ ಸಾಧನೆ ಮಾಡಿದೆ” ಎಂದು ಅವರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೈತ್ರಿ ಸರ್ಕಾರದ ಒಂದು ವರ್ಷದ ಸಾಧನೆ ಕುರಿತ ‘ಮೈತ್ರಿ ಪರ್ವ’ ಎಂಬ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ಸಚಿವರಾದ ಎಂ.ಸಿ. ಮನಗೋಳಿ, ಪ್ರಿಯಾಂಕ್ ಖರ್ಗೆ, ಆರ್. ಶಂಕರ್, ಹೆಚ್. ನಾಗೇಶ್ ಹಾಗೂ ಸಚಿವೆ ಡಾ. ಜಯಮಾಲ ಉಪಸ್ಥಿತರಿದ್ದರು.
Comments are closed.