ಗಲ್ಫ್

ದುಬೈಯಲ್ಲಿ ‘ಯಾನ’ ಸಿನೆಮಾದ ಮೂರನೇ ವೀಡಿಯೊ ಹಾಡು ಬಿಡುಗಡೆ; ಚಂದನ್ ಶೆಟ್ಟಿಯ ಸಖತ್ತಾದ ಹಾಡನ್ನೊಮ್ಮೆ ನೋಡಿ…

Pinterest LinkedIn Tumblr

ದುಬೈ: ಕನ್ನಡ ಸಿನಿ ಪ್ರಿಯರಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ‘ಯಾನ’ ಸಿನೆಮಾದ ಮೂರನೇ ವೀಡಿಯೊ ಹಾಡು ದುಬೈಯಲ್ಲಿ ಶುಕ್ರವಾರ ಬಿಡುಗಡೆಗೊಳಿಸಲಾಯಿತು.

‘ದುಬೈ ಯಕ್ಷ ಮಿತ್ರರು’ ಶುಕ್ರವಾರದಂದು ಸಂಜೆ ದುಬೈಯ ಇಂಡಿಯನ್ ಹೈಸ್ಕೂಲಿನ ಶೇಖ್ ರಾಶಿದ್ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ‘ಕಟೀಲು ಕ್ಷೇತ್ರ ಮಹಾತ್ಮೆ’ ಕನ್ನಡ ಪೌರಾಣಿಕ ಯಕ್ಷಗಾನ ಪ್ರದರ್ಶನದ ಸುಸಜ್ಜಿತ ವೇದಿಕೆಯಲ್ಲಿ ಕನ್ನಡದ ರಾಪರ್ ಚಂದನ್ ಶೆಟ್ಟಿ ಹಾಗು ಸಿರಿ ಹಾಡಿರುವ ‘ಬ್ಯೂಟಿ ಕ್ವೀನ್’ ಹಾಡಿನ ವೀಡಿಯೊವನ್ನು ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.

ACME ಮೂವೀಸ್ ಇಂಟರ್ನ್ಯಾಷನಲ್ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಹೆಸರಾಂತ ಉದ್ಯಮಿ, ನಿರ್ಮಾಪಕರಾಗಿರುವ ಹರೀಶ್‌ ಶೇರಿಗಾರ್‌ ಮತ್ತು ಶರ್ಮಿಳಾ ಶೇರಿಗಾರ್‌ ಹಾಗು ‘ಐ’ ಎಂಟರ್ಟೈನ್ಮೆಂಟ್’ನ ವೈಭವಿ, ವೈನಿಧಿ ಮತ್ತು ವೈಸಿರಿ ನಿರ್ಮಿಸಿರುವ ಯಾನ ಸಿನೆಮಾ ಬಿಡುಗಡೆಗೂ ಮುನ್ನ ಭಾರೀ ಸುದ್ದಿ ಮಾಡುತ್ತಿದೆ.

ವೀಡಿಯೊ ಹಾಡು ಬಿಡುಗಡೆಯ ಸಂದರ್ಭದಲ್ಲಿ ವೇದಿಕೆಯಲ್ಲಿ ‘ಯಾನ’ ಸಿನೆಮಾ ನಿರ್ಮಾಪಕ, ACME ಮೂವೀಸ್ ಇಂಟರ್ನ್ಯಾಷನಲ್’ನ ಮುಖ್ಯಸ್ಥರು, ಖ್ಯಾತ ಉದ್ಯಮಿಯು ಆಗಿರುವ ಹರೀಶ್ ಶೇರಿಗಾರ್, ಉದ್ಯಮಿಗಳಾದ ಸರ್ವೋತ್ತಮ ಶೆಟ್ಟಿ, ವಿಠ್ಠಲ್ ಶೆಟ್ಟಿ, ಪದ್ಮರಾಜ್ ಎಕ್ಕಾರ್, ಗುಣಶೀಲ ಶೆಟ್ಟಿ, ಗಿರೀಶ್ ಶೆಟ್ಟಿ, ಯಕ್ಷ ಮಿತ್ರರು ಸಂಘಟನೆಯ ದಯಾ ಕಿರೋಡಿಯನ್, ಚಿದಾನಂದ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

‘ಮೂರೇ ಮೂರು ಪೆಗ್ಗಿಗೆ’ ಅಂತ ಹಾಡಿ ಕನ್ನಡದ ಯುವಜನತೆಗೆ ಹುಚ್ಚು ಹಿಡಿಸಿದ್ದ ಕನ್ನಡದ ರಾಪರ್ ಚಂದನ್ ಶೆಟ್ಟಿ, ಈಗ ಯಾನದಲ್ಲಿ ಅವರ ಹಾಡು ಸಖತ್ತಾಗಿದೆ.

ವಿಜಯಲಕ್ಷ್ಮಿ ಸಿಂಗ್‌ ನಿರ್ದೇಶಿಸಿರುವ ಈ ಸಿನೆಮಾ ಜುಲೈ 12 ರ ಶುಕ್ರವಾರದಂದು ಕರ್ನಾಟಕ ರಾಜ್ಯದಾದ್ಯಂತ ತೆರೆ ಕಾಣಲಿದೆ. ಈ ಸಿನೆಮಾದಲ್ಲಿ ಹಿರಿಯ ನಟ ಅನಂತ್‌ ನಾಗ್‌ -ಸುಹಾಸಿನಿ ಜೋಡಿ ಒಟ್ಟಿಗೆ ನಟ ಜೈಜಗದೀಶ್ ಹಾಗು ವಿಜಯಲಕ್ಷ್ಮಿ ಸಿಂಗ್‌ ಅವರ ಮೂವರು ಹೆಣ್ಣು ಮಕ್ಕಳಾದ ವೈಭವಿ, ವೈನಿಧಿ ಮತ್ತು ವೈಸಿರಿ ನಾಯಕಿಯರಾಗಿ ಒಂದೇ ಸಿನೆಮಾ ಮೂಲಕ ನಟಿಸಿರುವುದು ಈ ಸಿನೆಮಾದ ಇನ್ನೊಂದು ವಿಶೇಷ.

ಇತ್ತೀಚಿಗೆ ಕನ್ನಡ ರಾಪ್ ಹಾಡಿನ ಮೂಲಕ ಮಿಂಚುತ್ತಿರುವ ಚಂದನ್ ಶೆಟ್ಟಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದು, ಅವರು ಹಾಡಿರುವ ‘ಬ್ಯೂಟಿ ಕ್ವೀನ್’ ಹಾಡು ಬಿಡುಗಡೆಯಾಗುತ್ತಿದ್ದಂತೆ ಭಾರೀ ವೈರಲ್ ಆಗುತ್ತಿದ್ದು, ಮತ್ತೊಂದು ದಾಖಲೆ ನಿರ್ಮಿಸುವ ಸಾಧ್ಯತೆ ಇದೆ.

Comments are closed.