ಬೆಂಗಳೂರು: ಸಾರ್ವಜನಿಕರಿಂದ ನೂರಾರು ಕೋಟಿ ಹೂಡಿಕೆ ಮಾಡಿಸಿಕೊಂಡು, ದೇಶ ಬಿಟ್ಟು ಪರಾರಿಯಾಗಿರುವ ಐಎಂಎ ಜ್ಯುವೆಲರಿ ಮಾಲೀಕ ಮನ್ಸೂರ್ ಖಾನ್ ಅವರೊಂದಿಗೆ ವ್ಯವಹಾರ ಮಾಡಿದ ಪ್ರಕರಣ ಸಂಬಂಧ ಸಚಿವ ಜಮೀರ್ ಅಹಮ್ಮದ್ ಖಾನ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.
ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ಗೆ ಸಚಿವ ಜಮೀರ್ 9.38 ಕೋಟಿ ಆಸ್ತಿ ಮಾರಾಟ ಮಾಡಿದ್ದರು. ಈ ಆಸ್ತಿ ಕುರಿತು ವಿವರಣೆ ಕೇಳಿ ಇಡಿಯಿಂದ ಸಮನ್ಸ್ ನೀಡಲಾಗಿದೆ. ಅಲ್ಲದೇ ಈವರೆಗೂ ಮನ್ಸೂರ್ ಜೊತೆಗೆ ಇನ್ನೂ ಹಲವು ದೊಡ್ಡ ದೊಡ್ಡ ವ್ಯಕ್ತಿಗಳು ವ್ಯವಹಾರ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಈಗ ಅವರೆಲ್ಲರಿಗೂ ನಡುಕ ಶುರುವಾಗಿದೆ.
ಸಚಿವ ಜಮೀರ್ ಖಾನ್ ಗೆ ಸಮನ್ಸ್ ಜಾರಿ ಹಿನ್ನೆಲೆಯಲ್ಲಿ ಇಡಿ ಕಚೇರಿಯಲ್ಲಿ ಜಂಟಿ ನಿರ್ದೇಶಕ ರಮಣ್ ಗುಪ್ತ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಐಎಂಎ ವಂಚನೆ ಕುರಿತು ಇಲ್ಲಿಯವರೆಗಿನ ತನಿಖಾ ವರದಿ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ.
ಸಚಿವ ಜಮೀರ್ ಅವರಿಗೆ ಸಮನ್ಸ್ ಪ್ರತಿ ನೀಡಲು ಇ.ಡಿ. ಅಧಿಕಾರಿಗಳು ಯುಬಿ ಸಿಟಿ ಸಮೀಪದ ವಿಠ್ಠಲ ಮಲ್ಯ ವೃತ್ತದಲ್ಲಿರುವ ಜಮೀರ್ ಅಪಾರ್ಟ್ಮೆಂಟ್ಗೆ ತೆರಳಿದ್ದರು. ಈ ವೇಳೆ ಜಮೀರ್ ಖಾನ್ ಕುಟುಂಬದವರು ಮನೆ ಬಾಗಿಲು ತೆರೆಯದಿದ್ದರಿಂದ ಅಧಿಕಾರಿಗಳು ಮನೆಯಾಚೆ ಕಾದು ನಿಲ್ಲಬೇಕಾಯಿತು.
ಅಲ್ಲದೇ, ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಮನ್ಸೂರ್ ಖಾನ್ಗೆ ಸೇರಿದ 209 ಕೋಟಿ ಆಸ್ತಿಯನ್ನು ಇಡಿ ಜಪ್ತಿ ಮಾಡಿದೆ.
ಜಮೀರ್ ಹೇಳುವುದೇನು?
ಇ.ಡಿ.ಸಮನ್ಸ್ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಜಮೀರ್, ನಾನು ರಿಚ್ಮಂಡ್ ಸರ್ಕಲ್ ನಲ್ಲಿ ಮನ್ಸೂರ್ ಖಾನ್ ಗೆ ಆಸ್ತಿ ಮಾರಾಟ ಮಾಡಿದ್ದೆ. ಆ ವಿಚಾರವಾಗಿ ಮಾಹಿತಿ ಕೇಳಿ ನೋಟೀಸ್ ಕೊಟ್ಟಿದ್ದಾರೆ. ಇಬ್ಬರು ಅಧಿಕಾರಿಗಳು ಬಂದು ನೋಟಿಸ್ ಕೊಟ್ಟು ಹೋಗಿದ್ದಾರೆ. 5ನೇ ತಾರೀಖು ಬರಲು ಹೇಳಿದ್ದಾರೆ ಅವತ್ತು ಹೋಗಿ ವಿವರಣೆ ಕೊಡ್ತಿನಿ ಎಂದು ಹೇಳಿದ್ದಾರೆ.
2017ರಲ್ಲಿ ಮನ್ಸೂರ್ ಖಾನ್ಗೆ ಆಸ್ತಿ ಮಾರಿ, ಅದಕ್ಕೆ ಆದಾಯ ತೆರಿಗೆ ಕೂಡ ಕಟ್ಟಿದ್ದೇನೆ. 2018ರಲ್ಲಿ ಸೇಲ್ ಡೀಡ್ ಮಾಡಿ ಕೊಟ್ಟಿದ್ದೇನೆ. ಮನ್ಸೂರ್ ಹೀಗೆ ಅಂತ ಗೊತ್ತಿದ್ರೆ ನಾನು ಆ ವಿಚಾರವನ್ನು ಉಲ್ಲೇಖ ಮಾಡುತ್ತಿದ್ದನೆ ಎಂದು ಪ್ರಶ್ನಿಸಿದ್ದಾರೆ.
ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಏಕೆ ಮಧ್ಯೆಪ್ರವೇಶಿಸಿದೆ ಎಂಬುದು ನನಗೆ ಗೊತ್ತಿಲ್ಲ. ನೋಟೀಸ್ ಕೊಟ್ಟಿದ್ದಾರೆ. ನೋಟಿಸ್ ತೆಗೆದುಕೊಳ್ಳುವುದು ನನ್ನ ಕರ್ತವ್ಯ ತೆಗೆದುಕೊಂಡಿದ್ದೇನೆ. ವಿವರಣೆ ಕೇಳಿದ್ದಾರೆ ಹೋಗಿ ಕೊಡುತ್ತೇನೆ. ಆಸ್ತಿ ಮಾರಾಟ ವಿಚಾರ ಬಿಟ್ಟರೆ ಬೇರೆ ನನಗೆ ಮನ್ಸೂರ್ ಜೊತೆ ಬೇರೆ ವ್ಯವಹಾರ ಹಾಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದರು.
ಈ ಪ್ರಕರಣದಲ್ಲಿ ಸಿಬಿಐ ಪ್ರವೇಶವಾದರೆ ನನಗೆ ಇನ್ನು ಸಂತೋಷ. ಒಟ್ಟಿನಲ್ಲಿ ಬಡವರಿಗೆ ನ್ಯಾಯ ಸಿಗಬೇಕು ಅಷ್ಟೇ. ತೀರಾ ಬಡವರು ದುಡ್ಡನ್ನು ಹೂಡಿಕೆ ಮಾಡಿದ್ದಾರೆ. ಅವರಿಗೆಲ್ಲಾ ದುಡ್ಡು ವಾಪಸ್ ಸಿಗಬೇಕು. ಹಾಗಾಗಿ ಯಾರಾದರೂ ತನಿಖೆ ಮಾಡಲಿ, ಒಟ್ಟಿನಲ್ಲಿ ಬಡವರಿಗೆ ನ್ಯಾಯ ಸಿಗಬೇಕು ಎಂದರು.
Comments are closed.