ರಾಯ್ಪುರ: ಇಂದು ಛತ್ತೀಸ್ಗಢದಲ್ಲಿ ನಕ್ಸಲರು ಹಾಗೂ ಸಿಆರ್ಪಿಎಫ್ ಯೋಧರ ನಡುವೆ ನಡೆದ ಗುಂಡಿನ ಚಕಮಕಿ ವೇಳೆ ಮೂವರು ಯೋಧರು ಹುತಾತ್ಮರಾಗಿದ್ದಾರೆ.
ಹುತಾತ್ಮರನ್ನು ಕರ್ನಾಟಕದ ಕಲಬುರಗಿಯ ಎಎಸ್ಐ, ಜಿಡಿ ಪಿ.ಮಹಾದೇವ(50), ಉತ್ತರ ಪ್ರದೇಶದ ಅಲಿಗರ್ನ ಎಎಸ್ಐ, ಜಿಡಿ ಮದನ್ ಪಾಲ್ ಸಿಂಗ್(52) ಹಾಗೂ ಕೇರಳದ ಇಡುಕ್ಕಿಯ ಓ.ಪಿ.ಸಜು(47) ಎಂದು ಗುರುತಿಸಲಾಗಿದೆ. ಭಯೋತ್ಪಾದಕರು ಹಾಗೂ ಭದ್ರತಾ ಪಡೆಗಳ ಎನ್ಕೌಂಟರ್ ನಡೆಯುತ್ತಿದ್ದಾಗ ಪಿಕ್ಅಪ್ ವ್ಯಾನ್ ಬಂದಿದ್ದು, ವಾಹನದಲ್ಲಿದ್ದ ಗ್ರಾಮಸ್ಥರೊಬ್ಬರು ಸಾವನ್ನಪ್ಪಿದ್ದಾರೆ.
ಇಂದು ಬೆಳಗ್ಗೆ ಛತ್ತೀಸ್ಗಢದ ಬಿಜಾಪುರ ಜಿಲ್ಲೆಯ ಕೇಶ್ಕುಟುಲ್ ಎಂಬಲ್ಲಿ ಗುಂಡಿನ ಚಕಮಕಿ ನಡೆದಿದೆ. ನಕ್ಸಲರು ಹೊಂಚು ಹಾಕಿರುವುದನ್ನು ಅರಿತ 199ನೇ ಬೆಟಾಲಿಯನ್ನ ಸಿಆರ್ಪಿಎಫ್ ಯೋಧರು, ತಕ್ಷಣ ಗುಂಡಿನ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಸ್ಥಳದಲ್ಲಿ ಓರ್ವ ಯೋಧ ಬಲಿಯಾಗಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಯೋಧರು ನಂತರ ಮೃತಪಟ್ಟಿದ್ದಾರೆ.
ಮಹಾದೇವ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮರಗುತ್ತಿ ಗ್ರಾಮದವರಾಗಿದ್ದು, ಕಳೆದ 29 ವರ್ಷಗಳಿಂದ ಸಿಆರ್ಪಿಎಫ್ನಲ್ಲಿ ಎಎಸ್ಐ ಆಗಿ ಸೇವೆ ಸಲ್ಲಿಸುತ್ತಿದ್ದರು. ಎರಡ್ಮೂರು ದಿನಗಳಲ್ಲಿ ರಜೆ ಮೇಲೆ ಸ್ವಗ್ರಾಮಕ್ಕೆ ಬರುವುದಾಗಿ ಮಹಾದೇವ ಕುಟುಂಬಸ್ಥರಿಗೆ ತಿಳಿಸಿದ್ದರು. ಆದರೆ ಹುತಾತ್ಮರಾದ ಸುದ್ದಿ ಕೇಳಿ ಮರಗುತ್ತಿ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.
Comments are closed.