ಬೆಂಗಳೂರು [ಜೂ.30] : ಸಾರ್ವಜನಿಕರಿಗೆ ಕೋಟ್ಯಂತರ ರು. ವಂಚಿಸಿ ತಲೆಮರೆಸಿಕೊಂಡಿರುವ ಐಎಂಎ ಸಂಸ್ಥೆಯ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ಗೆ ಆಹಾರ ಸಚಿವ ಜಮೀರ್ ಅಹಮ್ಮದ್ ಖಾನ್ ಕಾನೂನು ಬಾಹಿರವಾಗಿ ಬಿಬಿಎಂಪಿ ಆಸ್ತಿಯನ್ನು ಮಾರಾಟ ಮಾಡಿ 80 ರು. ಕೋಟಿ ಕಪ್ಪು ಹಣ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಬೆಂಗಳೂರು ನಗರ ವಕ್ತಾರ ಎನ್.ಆರ್.ರಮೇಶ್ ಅವರು ಎಸಿಬಿಗೆ ದೂರು ಸಲ್ಲಿಸಿದ್ದಾರೆ.
ಪ್ರಕರಣದ ಕುರಿತು ದಾಖಲೆಗಳನ್ನು ಶನಿವಾರ ರಮೇಶ್ ಬಿಡುಗಡೆ ಮಾಡಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ಕಳೆದ 19 ವರ್ಷಗಳಿಂದ ನ್ಯಾಯಾಲಯದಲ್ಲಿರುವ ವಿವಾದಿತ ಸ್ವತ್ತನ್ನು ಮಾರಾಟ ಮಾಡಿದ್ದು, ಈ ಸಂಬಂಧ ತನಿಖೆ ನಡೆಸಬೇಕು. ಸಚಿವ ಜಮೀರ್ ಖಾನ್, ಆರೋಪಿ ಮನ್ಸೂರ್ ಖಾನ್ ಹಾಗೂ ಶಾಂತಿನಗರ ಸಹಾಯಕ ಕಂದಾಯ ಅಧಿಕಾರಿಗಳ ವಿರುದ್ಧ ದೂರು ನೀಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ವಿವಾದದಲ್ಲಿರುವ 90 ರು. ಕೋಟಿಗಿಂತ ಹೆಚ್ಚು ಬೆಲೆಬಾಳುವ ಸ್ವತ್ತನ್ನು 9.38 ರು. ಕೋಟಿಗೆ ಮಾರಾಟ ಮಾಡಿ ಜಮೀರ್ ಖಾನ್ ನೋಂದಣಿ ಮಾಡಿಸಿಕೊಟ್ಟಿದ್ದಾರೆ. ಈ ಮೂಲಕ 80 ರು. ಕೋಟಿ ಕಪ್ಪು ಹಣ ಪಡೆದುಕೊಂಡಿದ್ದಾರೆ. ರಿಚ್ಮಂಡ್ ಟೌನ್ನ ಸರ್ಪೆಂಟೈನ್ ಸ್ಟ್ರೀಟ್ನಲ್ಲಿ ವಿವಾದಿತ ಸ್ವತ್ತು ಇದೆ. 14,984 ಚದಡಿ ವಿಸ್ತೀರ್ಣದ 38 ಮತ್ತು 39ನೇ ಸಂಖ್ಯೆಯ ಸ್ವತ್ತನ್ನು ಮಾರಾಟ ಮಾಡಲಾಗಿದೆ. ಷಾ ನವಾಜ್ ಬೇಗಂ ಮತ್ತು ಅಗಜಾನ್ ಆಸ್ಕರ್ ಅಲಿ ಎಂಬುವವರ ನಡುವೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿದರು.
ಅಗಜಾನ್ ಆಸ್ಕರ್ ಅಲಿ ಪತ್ನಿ ಸಪ್ನಾ ಮತ್ತು ಮಗ ಗಜೇಂದ್ರ ಎಂಬುವವರು ಷಾ ನವಾಜ್ ಬೇಗಂ ಸೇರಿದಂತೆ ಇತರರ ವಿರುದ್ಧ ಮೊಕದ್ದಮೆ ದಾಖಲಿಸಿದ್ದರು. ಪ್ರಕರಣದಲ್ಲಿ ಜಮೀರ್ ಖಾನ್ 16ನೇ ಪ್ರತಿವಾದಿಯಾಗಿದ್ದರು. ವಿಚಾರಣಾ ಹಂತದಲ್ಲಿನ ಸ್ವತ್ತನ್ನು ಮಾರಾಟ ಮಾಡಲು ಮತ್ತು ಗುತ್ತಿಗೆ ನೀಡಲು ನ್ಯಾಯಾಲಯವು ತಡೆಯಾಜ್ಞೆ ನೀಡಿತ್ತು. ಆದರೂ ಸಹ 2009ರಲ್ಲಿ ಷಾ ನವಾಜ್ ಬೇಗಂ ಅವರಿಂದ ಶಿವಾಜಿನಗರ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ತಮ್ಮ ಹೆಸರಿಗೆ ಜಮೀರ್ ಖಾನ್ ನೋಂದಣಿ ಮಾಡಿಸಿಕೊಂಡಿದ್ದರು. ಬಳಿಕ ಸ್ವತ್ತಿನ ವಿಚಾರವಾಗಿ ಮೇಲ್ಮನವಿ ಹೋಗಬಹುದು ಎಂಬ ಉದ್ದೇಶದಿಂದ ಕಾನೂನು ಬಾಹಿರವಾಗಿ ಸ್ವತ್ತನ್ನು ಮನ್ಸೂರ್ ಖಾನ್ಗೆ ತರಾತುರಿಯಲ್ಲಿ 9.38 ಕೋಟಿ ರು. ಮಾರಾಟ ಮಾಡಿದ್ದರು. ಆಸ್ತಿಯ ಮಾರುಕಟ್ಟೆಯ ಮೌಲ್ಯ 90 ಕೋಟಿ ರು. ಆಗಿದ್ದರೂ ಕೇವಲ 9.38 ಕೋಟಿ ರು.ಗೆ ಮಾರಾಟ ಮಾಡಲಾಗಿದೆ. ಇದಕ್ಕೆ ನೋಂದಣಿ ಶುಲ್ಕವನ್ನು ಪಾವತಿ ಎಷ್ಟುಮಾಡಲಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಮಾಹಿತಿ ನೀಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
Comments are closed.