ಹೈದರಾಬಾದ್: ತೆಲಂಗಾಣ ರಾಜ್ಯ ಸರ್ಕಾರದ ಬೃಹತ್ ನೀರಾವರಿ ಯೋಜನೆಗೆ ಗುರುತಿಸಿದ ಸ್ಥಳ ಪರಿಶೀಲನೆಗೆಂದು ಸರ್ಸಲಾ ಹಳ್ಳಿಗೆ ತೆರಳಿದ್ದ ಅರಣ್ಯ ಇಲಾಖೆಯ ಮಹಿಳಾ ಅಧಿಕಾರಿ, ಹಾಗೂ ಸಿಬ್ಬಂದಿ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ. ಈ ಹಲ್ಲೆಗೆ ಟಿಆರ್ಎಸ್ ನಾಯಕ ಕೊನೇರು ಕೃಷ್ಣನ್ ಕಾರಣ ಎಂದು ಆರೋಪಿಸಲಾಗಿದೆ.
ಹಲ್ಲೆ ನಡೆಸಿದ ಗುಂಪಿನ ಮುಂದಾಳತ್ವವನ್ನು ಟಿಆರ್ಎಸ್ ಶಾಸಕ ಕೊನೇರು ಕೋನಪ್ಪ ಅವರ ಸಹೋದರ, ಜಿಲ್ಲಾ ಪರಿಷತ್ ಉಪಾಧ್ಯಕ್ಷ ಕೊನೇರು ಕೃಷ್ಣನ್ ವಹಿಸಿದ್ದರು ಎಂದು ಅರಣ್ಯ ಇಲಾಖೆ ಹೇಳಿದೆ.
ಅರಣ್ಯ ವಲಯ ಮಹಿಳಾ ಅಧಿಕಾರಿಯಾದ ಸಿ.ಅನಿತಾ ಅವರು ತಮ್ಮ ಸಿಬ್ಬಂದಿಯೊಂದಿಗೆ ಗ್ರಾಮಕ್ಕೆ ತೆರಳಿದಾಗ ಗುಂಪೊಂದು ಅವರ ಮೇಲೆ ಹಲ್ಲೆಗೆ ಮುಂದಾಗಿದೆ. ಈ ವೇಳೆ ದಾಳಿಯಿಂದ ತಪ್ಪಿಸಿಕೊಳ್ಳಲು ಅನಿತಾ ಅವರ ಟ್ರ್ಯಾಕ್ಟರ್ ಮೇಲೆ ನಿಂತು ಮನವಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಆದರೆ, ಗ್ರಾಮಸ್ಥರು ಮತ್ತು ಟಿಆರ್ಎಸ್ ನಾಯಕ ದೊಣ್ಣೆಯಿಂದ ಮಹಿಳಾ ಅಧಿಕಾರಿಯನ್ನು ಥಳಿಸಿದ್ದಾರೆ. ಮಹಿಳಾ ಅಧಿಕಾರಿ ಎಷ್ಟೇ ಮನವಿ ಮಾಡಿದರೂ ಗುಂಪಿನಲ್ಲಿದ್ದ ಜನರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಗುಂಪನ್ನು ಸಮಾಧಾನಪಡಿಸಲು ಯತ್ನಿಸಿದರೂ, ಅದು ಪ್ರಯೋಜನವಾಗಿಲ್ಲ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಮಹಿಳಾ ಅಧಿಕಾರಿಯನ್ನು ತಕ್ಷಣವೇ ಕಾಘಾಜ್ನಗರ್ದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕಾಘಾಜ್ನಗರ ಅರಣ್ಯ ವಲಯಾಧಿಕಾರಿ ತಿಳಿಸಿದ್ದಾರೆ.
ಟಿಆರ್ಎಸ್ ಶಾಸಕ ಕೊನೇರು ಕೋನಪ್ಪ ಅವರ ಸಹೋದರ ಕೊನೇರು ಕೃಷ್ಣ ಅವರನ್ನು ಬಂಧಿಸಲಾಗಿದೆ. ಹಾಗೂ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ ಮಾಡಿದ ಆರೋಪ ಸಂಬಂಧ ಐಪಿಸಿ ಕಾಯ್ದೆಯಡಿ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಾ ರೆಡ್ಡಿ ತಿಳಿಸಿದ್ದಾರೆ.
ಶಾಸಕರ ಸಹೋದರ ಅರಣ್ಯ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರು. ಸರ್ಕಾರದ ಯೋಜನೆ ಸಂಬಂಧ ಅರಣ್ಯ ಭೂಮಿ ಪರಿಶೀಲನೆಗೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಆ ಗ್ರಾಮಕ್ಕೆ ತೆರಳಿದ್ದಾಗ ಕೊನೇರು ಕೃಷ್ಣ ಗುಂಪು ಕಟ್ಟಿಕೊಂಡು ಬಂದು ಮಹಿಳಾ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಅರಣ್ಯ ಇಲಾಖೆ ಆರೋಪಿಸಿದೆ.
ತೆಲಂಗಾಣ ಸರ್ಕಾರ ಸುಮಾರು 80 ಸಾವಿರ ಕೋಟಿ ವೆಚ್ಚದಲ್ಲಿ ಕಲೇಶ್ವರಂ ಎಂಬ ಬೃಹತ್ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಗೆ ಕಘಾಜ್ನಗರ ವಲಯದ ಕಡಂಬದಲ್ಲಿ 20 ಹೆಕ್ಟೇರ್ ಅರಣ್ಯ ಭೂಮಿಯನ್ನು ಗುರುತಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ತೆರಳಿದ್ದಾಗ ಈ ಹಲ್ಲೆ ನಡೆದಿದೆ.
Comments are closed.