ಮಂಗಳೂರು / ನೆಲ್ಯಾಡಿ : ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿಯಲ್ಲಿ ಸೋಮವಾರ ಮಧ್ಯರಾತ್ರಿ ನಡೆದ ಬೀಕರ ರಸ್ತೆಅಪಘಾತದಲ್ಲಿ ಮೂವರು ಮೃತಪಟ್ಟು ಓರ್ವ ಗಂಭೀರ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಮಹೀಂದ್ರಾ ಬೊಲೆರೋ ಹಾಗೂ ಲಾರಿ ನಡುವೆ ಢಿಕ್ಕಿ ಸಂಭವಿಸಿದ್ದು, ಈ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ನೆಲ್ಯಾಡಿ ಕಡೆಯಿಂದ ಉಪ್ಪಿನಂಗಡಿಗೆ ತೆರಳುತ್ತಿದ್ದ ಬೊಲೆರೋ ಜೀಪಿಗೆ ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ ಮುಖಾಮುಖಿ ಢಿಕ್ಕಿ ಹೊಡೆದಿದೆ. ನೆಲ್ಯಾಡಿಯ ಹಳ್ಳ ಸೇತುವೆ ಸಮೀಪದ ಬೆಥನಿ ವಿದ್ಯಾಸಂಸ್ಥೆಯ ಬಳಿ ಈ ಭೀಕರ ಘಟನೆ ಸಂಭವಿಸಿದ್ದು, ಬೊಲೆರೋ ವಾಹನ ಡಿಕ್ಕಿಯ ರಭಸಕ್ಕೆ ಸಂಪೂರ್ಣ ನುಜ್ಜುಗುಜ್ಜಾಗಿದೆ
ಘಟನೆಯಲ್ಲಿ ಮೃತಪಟ್ಟವರನ್ನು ಬೊಲೆರೋದಲ್ಲಿದ್ದ ಮೊರಂಕಾಲ ನಿವಾಸಿ ಸತ್ತಾರ್, ಗೋಳಿತೊಟ್ಟು ನಿವಾಸಿ ಸೈರಸ್ ವಿ ಎಂ ಹಾಗೂ ಥಾಮ್ಸನ್ ಎಂದು ಗುರುತಿಸಲಾಗಿದೆ. ಬೊಲೆರೋದಲ್ಲಿದ್ದವರ ಪೈಕಿ ಜನಾರ್ಧನ ಎಂಬವರು ಗಂಭೀರಗಾಯಗೊಂಡಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ನೆಲ್ಯಾಡಿ ಮತ್ತು ಉಪ್ಪಿನಂಗಡಿ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Comments are closed.